ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಹರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪ್ರತಿ ವರ್ಷ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ರಂಗಭೂಮಿ, ಸಂಘಟನೆ, ಮಾಧ್ಯಮ, ಸಾಮಾಜಿಕ ಕ್ಷೇತ್ರ ಮತ್ತು ಸಮಾಜ ಸೇವೆಯಲ್ಲಿ ತಮ್ಮದೇ ಅದ ವಿಶಿಷ್ಟ ಸೇವೆ ಸಲ್ಲಿಸಿ ವಾಲ್ಮೀಕಿ ಸಮಾಜಕ್ಕೆ ತಮ್ಮ ಕೊಡಿಗೆಯನ್ನು ನೀಡಿರುವ ಅರ್ಹ ಸಾಧಕರನ್ನು ಗುರುತಿಸಿ ವಾಲ್ಮೀಕಿ ಪ್ರಶಸ್ತಿಯನ್ನು ಸರ್ಕಾರವು ಪ್ರಕಟಿಸಿದೆ.
2025ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಬೆಂಗಳೂರು ಕೇಂದ್ರದ ಮಾಧ್ಯಮ ಕ್ಷೇತ್ರದಿಂದ ಬೆಂಗಳೂರಿನ ನಾಗರಾಜು ಗಾಣದ ಹುಣಸೆ, ಬೆಂಗಳೂರು ವಿಭಾಗದಲ್ಲಿ ರಂಗಭೂಮಿ ಕ್ಷೇತ್ರದಿಂದ ಚಿತ್ರದುರ್ಗದ ಚಳ್ಳಕೆರೆಯ ಪಿ. ತಿಪ್ಪೇಸ್ವಾಮಿ, ಮೈಸೂರು ವಿಭಾಗದಲ್ಲಿ ಸಂಘಟನೆ ಕ್ಷೇತ್ರದಿಂದ ಕೊಡಗಿನ ವಿರಾಜಪೇಟೆಯ ಜೆ.ಕೆ. ಮುತ್ತಮ್ಮ, ಬೆಳಗಾವಿ ವಿಭಾಗದಲ್ಲಿ ಸಮಾಜಸೇವೆ ಕ್ಷೇತ್ರದಿಂದ ವಿಜಯಪುರ ಟೌನ್ ನ ಮಳಸಿದ್ದ ಲಕ್ಷ್ಮಣ ನಾಯಕೋಡಿ ಮತ್ತು ಕಲಬುರಗಿ ವಿಭಾಗದಲ್ಲಿ ಸಾಮಾಜಿಕ ಕ್ಷೇತ್ರದಿಂದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಟೌನ್ ನ ಕೆ. ಉಚ್ಚಂಗಪ್ಪ ಅವರು ಭಾಜನರಾಗಿದ್ದಾರೆ
ರಾಜ್ಯದಲ್ಲಿ ಪ್ರತಿ ವರ್ಷ ಸೀಗೆಹುಣ್ಣಿಮೆ ದಿನದಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಡಾ: ಬಿ.ಆರ್. ಅಂಬೇಡ್ಕರ್, ಡಾ: ಬಾಬು ಜಗಜೀವನರಾಂ ಹಾಗೂ ಡಿ. ದೇವರಾಜು ಅರಸು ಇವರ ಸ್ಮರಣಾರ್ಥ ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುತ್ತಿರುವ ಮಾದರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಂದು ಪರಿಶಿಷ್ಟ ವರ್ಗದ ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸೋಮಣ್ಣ, ಡಿಕೆಶಿ ಉದ್ಧಟತನ ಅಕ್ಷಮ್ಯ
ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಶೈಕ್ಷಣಿಕ ಸಾಮಾಜಿಕ, ಸಾಹಿತ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಬೆಂಗಳೂರು, ಮೈಸೂರು. ಬೆಳಗಾವಿ, ಕಲಬುರಗಿ ಕಂದಾಯ ವಿಭಾಗಗಳು ಹಾಗೂ ಬೆಂಗಳೂರು ಕೇಂದ್ರ ಸ್ಥಾನದಿಂದ ತಲಾ ಒಬ್ಬರಂತೆ ಒಟ್ಟು ಐದು ಸಾಧಕರಿಗೆ ನಗದು ಮೊತ್ತ ಹಾಗೂ ಬಂಗಾರದ ಪದಕಗಳನ್ನು ನೀಡಿ ಗೌರವಿಸಲಾಗುವುದು.
2025-26ನೇ ಸಾಲಿಗೆ ಶ್ರೀ ಮಹರ್ಷಿ ವಾಲ್ಮೀಕಿ ಇವರ ಸ್ಮರಣಾರ್ಥ ನೀಡುವ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆಯ್ಕೆ ಮಾಡುವ ಸಂಬಂಧ ಡಾ.ಎ.ಬಿ ರಾಮಚಂದ್ರಪ್ಪ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.
ಸಮಿತಿಯು ಸಭೆಗಳನ್ನು ನಡೆಸಿ ಪ್ರಶಸ್ತಿಗಾಗಿ ಸ್ವೀಕರಿಸಲಾದ ಸುಮಾರು 133 ನಾಮನಿರ್ದೇಶನಗಳನ್ನು ಪರಿಶೀಲಿಸಿ ಅರ್ಹ ಸಾಧಕರನ್ನು ಗುರುತಿಸಿ ಗುರುತಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಸರ್ಕಾರವು ಸಮಿತಿಯ ಶಿಫಾರಸ್ಸನ್ನು ಒಪ್ಪಿ ಅರ್ಹರಿಗೆ ಪ್ರಶಸ್ತಿಯನ್ನು ಘೋಷಿಸಿರುತ್ತದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





