"ಪ್ರಾಣೇಶ್ ಮಾಡಿರುವ ಹಾಸ್ಯಗಳನ್ನೆಲ್ಲ ಮೀರಿಸುವಂತಹ ಹಾಸ್ಯವಿದು. ಎಲ್ಲರೂ ನೋಡಿ ಆನಂದಿಸಿ" ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು, ಫ್ಯಾಸಿಸ್ಟ್ ಮಾದರಿಯ ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿ, ಆರ್‌ಎಸ್‌ಎಸ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವುದು ಭಾರೀ ಟ್ರೋಲ್‌ಗೆ ಒಳಗಾಗಿದೆ. “ನೀವು ಈವರೆಗೆ ಮಾಡಿರುವ ಕಾಮಿಡಿಗಳಿಗಿಂತ ಇದು ಬೆಸ್ಟ್ ಒನ್” ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
“ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪೋಷಿಸುವ, ಜಾತಿ ದೌರ್ಜನ್ಯಗಳನ್ನು ಎಂದಿಗೂ ಖಂಡಿಸದ ಮತ್ತು ಒಬಿಸಿ, ದಲಿತರನ್ನು ಕೇವಲ ಕಾಲಾಳಾಗಿ ನೋಡುವ ಸಂಘಟನೆ ಆರ್‌ಎಸ್ಎಸ್” ಎಂದು ಭಾರೀ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ, ಪ್ರಾಣೇಶ್ ಅವತಾರ ನೋಡಿ ಅನೇಕರು ಕಿಡಿಕಾರಿದ್ದಾರೆ ಹಾಗೂ ಗೇಲಿ ಮಾಡಿದ್ದಾರೆ.
ಆರ್‌ಎಸ್‌ಎಸ್ ಮುಖವಾಣಿಯಾಗಿರುವ ‘ಸಂವಾದ’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಾಣೇಶ್ ವಿಡಿಯೊ ಪ್ರಸಾರವಾಗಿದ್ದು, “ಶಿಸ್ತು, ಸಂಯಮ, ಸದಾಚಾರ, ಧರ್ಮರಕ್ಷಣೆ, ಸಂಸ್ಕೃತಿಗಳ ಸಂರಕ್ಷಕವಾಗಿ ಈ ಸಂಘಟನೆ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದು ಹಿಂದೂಗಳಿಗೆಲ್ಲರಿಗೂ ಹೆಮ್ಮೆಯ ವಿಷಯ. ಹಿಂದುತ್ವ, ಧರ್ಮಗ್ರಂಥಗಳು, ಪುರಾಣಪುರುಷರು, ಋಷಿಮುನಿಗಳ ತತ್ವಗಳ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಂಸ್ಥೆ ಅಬಾಲವೃದ್ಧರಾಗಿ ಎಲ್ಲರಿಗೂ ಶಿಸ್ತಿನ ಧಾರ್ಮಿಕ ಜೀವನವನ್ನು ಕಲಿಸುತ್ತಿದೆ. ನಾನು ಸುಮಾರು 15-20 ವರ್ಷಗಳ ಕಾಲ ಆರ್‌ಎಸ್‌ಎಸ್‌ನಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಮೊದಲ ವರ್ಷದ ಒಟಿಸಿಯನ್ನು ಬಾಗಲಕೋಟೆಯಲ್ಲಿ ಮುಗಿಸಿದೆ. ಹಿರಿಯ ಸ್ವಯಂಸೇವಕರ ಬೆಂಬಲದೊಂದಿಗೆ ಗಂಗಾವತಿಯಲ್ಲಿ ಸ್ವಯಂಸೇವಕರನ್ನು ತಯಾರು ಮಾಡಿದ್ದೇವೆ. ಎಲ್ಲರೂ ಶಿಸ್ತು, ಸಂಯಮದಿಂದ ಉನ್ನತ ಅಧಿಕಾರದಲ್ಲಿದ್ದಾರೆ. ಇದು ಹಿಂದೂಗಳ ಸಂಸ್ಥೆ. ಹಿಂದುತ್ವ ಒಪ್ಪಿದವರು ಯಾರಾದರೂ ಇಲ್ಲಿಗೆ ಬರಬಹುದು. ಇದು ಯಾವುದೇ ಜಾತಿ ವಿರೋಧಿಯಲ್ಲ. ಯಾವುದೇ ವರ್ಗಕ್ಕೆ ಸೇರಿಲ್ಲ. ರಾಷ್ಟ್ರಭಕ್ತರೆಲ್ಲರೂ ಆರ್‌ಎಸ್‌ಎಸ್‌ನವರು. ಎಲ್ಲೇ ಗಲಭೆಗಳಾಗಲಿ, ಬರ ಬರಲಿ, ಪ್ರವಾಹ ಬರಲಿ ಸ್ವಯಂಸೇವಕರು ಪ್ರಚಾರಗಳಿಲ್ಲದೆ ಸೇವೆ ಮಾಡುತ್ತಾರೆ. ವಯೋಗುಣಕ್ಕೆ ಅನುಗುಣವಾಗಿ ಸಂಘವು ತರಬೇತಿ ನೀಡುತ್ತದೆ. ಎಲ್ಲರನ್ನೂ ಸಂಘಕ್ಕೆ ಸೇರಿಸಿ” ಎಂದು ಕೇಳಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕಾಲೆಳೆದ್ದಾರೆ.
ಇದನ್ನೂ ಓದಿರಿ: ಆರ್‌ಎಸ್‌ಎಸ್ ಸಮವಸ್ತ್ರಕ್ಕೆ ‘ಗಣವೇಷ’ ಎನ್ನುವುದು ತಪ್ಪಲ್ಲವೇ?
“ಪ್ರಾಣೇಶ್ ಮಾಡಿರುವ ಹಾಸ್ಯಗಳನ್ನೆಲ್ಲ ಮೀರಿಸುವಂತಹ ಹಾಸ್ಯವಿದು. ಎಲ್ಲರೂ ನೋಡಿ ಆನಂದಿಸಿ. ಯಾವುದೇ ಭಯ, ಹೇಸಿಗೆ, ನಾಚಿಕೆಯಿಲ್ಲದೆ ಹಾಸ್ಯ ಮಾಡಿದ್ದಾರೆ” ಎಂದು ಬರಹಗಾರ ವಿಕಾಸ್ ಆರ್ ಮೌರ್ಯ ಅವರು ಪೋಸ್ಟ್ ಮಾಡಿದ್ದು, ಸಕತ್ ವೈರಲ್ ಆಗಿದೆ.
“ಇಂಥವರು ಇದ್ದರೆ ಸಮಾಜಕ್ಕೆ ದೊಡ್ಡ ವೈರಸ್. ಜನರ ಜೀವನದಲ್ಲಿ ನಗಿಸುವ ಹವ್ಯಾಸ ಇರುವ ಈ ವ್ಯಕ್ತಿ ಇದ್ದಕ್ಕಿದ್ದಂತೆ ಒಂದು ಸಂಘಟನೆಯಲ್ಲಿ ನೋಡಿರೋದು ಬಹಳ ದೊಡ್ಡ ದುರಂತ. ನಾವುಗಳ ಎಚ್ಚರದಿಂದ ಇರಬೇಕು ಅಷ್ಟೇ” ಎಂದು ಉಮಾಪತಿ ಹೆಗಡೆ ಎನ್ನುವರು ಪ್ರತಿಕ್ರಿಯಿಸಿದ್ದಾರೆ.

“ಏಯ್, ಯಾರಪ್ಪ ನೀನು? ಯಾವ ದಿಕ್ಕುದೆಸೆ? ಯಾವ ದೇಶದವ ನೀನು? ಮುಸೊಲಿನಿಯ ಇಟಲಿಯಾ? ಹಿಟ್ಲರ್‌ನ ಜರ್ಮನಿಯ? ನಿನಗೇಕೆ ಲಾಠಿ? ಯಾವ ವಿರುದ್ಧ ಸೆಣೆಸಲು ಬೇಕು? ಯಾರಿಂದ ರಕ್ಷಣೆ ಪಡೆಯಲು ಬೇಕು? ನೀನು ಹಿಡಿದ ಲಾಠಿ ದೇಶ ಕಾಯುವುದಕ್ಕೆ ಎಂದಾದರೆ, ಪೊಲೀಸ್, ಮಿಲಿಟರಿ ಸೇರಿ ದೇಶ ಸೇವೆ ಮಾಡು. ಯಾರನ್ನು ಬೆದರಿಸಲು ನಿನಗೆ ಲಾಠಿ ಬೇಕು? ರಕ್ಷಣಾ ವ್ಯವಸ್ಥೆಯ ದೇಶದಲ್ಲಿ ನಿನಗೇಕೆ ಇಲ್ಲದ ಉಸಾಬರಿ. ಲಾಠಿ ಹಿಡಿಯಲು ನಿನಗೆ ಅನುಮತಿ ಕೊಟ್ಟವರಾರು? ಎಲ್ಲರೂ ನಿನ್ನಂತೆ ಲಾಠಿ, ದೊಣ್ಣೆ ಹಿಡಿದು ರಸ್ತೆಗೆ ಬಿದ್ದರೆ ಏನು ಗತಿ? ನಿನ್ನ ಕೈಲಿ ಲಾಠಿ ಏಕೆ? ನೀನ್ಯಾವ ದೊಣ್ಣೆನಾಯಕ! ನೀನೇನು ಬೀದಿ ಪುಡಿರೌಡಿನಾ! ಈ ದೇಶಕ್ಕೆ ನಿನ್ನ ಲಾಠಿ ಬೇಕಿಲ್ಲ. ಲಾಠಿ ಬಿಟ್ಟು ಸಂವಿಧಾನ ಹಿಡಿ, ಮಾನವಂತನಾಗಿ ಬಾಳು” ಎಂದು ದೇವೇಂದ್ರ ಜಿರ್ಲಿ ಎನ್ನುವವರು ಕಮೆಂಟ್ ಮಾಡಿದ್ದಾರೆ.

“ಎಲ್ಲೇ ಗಲಭೆಗಳಾಗಲಿ ಅಲ್ಲಿ rss ಇರುತ್ತದೆ ಅನ್ನುವ ಪ್ರಾಮಾಣಿಕ ಮಾತನ್ನು ನಂಬಬಹುದು! ಅನೇಕರು ನಮ್ಮ ನಡುವೆ ಈ ರೀತಿ ಹಲವು ಮುಖವಾಡದಲ್ಲಿ ಇರುತ್ತಾರೆ. ಒಳಗೆ ದೊಗಳೆ ಚಡ್ಡಿ ಇದ್ದೇ ಇರುತ್ತೆ” ಎಂದು ‘ಪರಿವರ್ತನಾ ಚಮರಂ’ ಅಭಿಪ್ರಾಯಪಟ್ಟಿದ್ದಾರೆ.

“ಇಂಥ ಸಂಘಟನೆಯು ಕೋಮುಗಲಭೆಗೆ ಪ್ರಚೋದನೆ ಮಾಡುವಾಗ ನೀವು ಎಲ್ಲಿರ್ತೀರಿ ಸ್ವಾಮಿ? ನಿಮ್ಮಂಥವರು ಕಾಮಿಡಿ ಮಾತ್ರ ಮಾಡಿ ಜನರನ್ನು ನಗಿಸೋದು ಮಾತ್ರ ಅಂದುಕೊಂಡಿದ್ದೆ. ಆದರೆ ನಾಗರಿಕ ಸಮಾಜಕ್ಕೆ ನೋವು, ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದರಲ್ಲಿ ನಿಮ್ಮ ಬೆಂಬಲವೂ ಇದೆ ಎಂಬುದು ದುರಂತ. ನೀವು ಮುಂದೆ ಕಾಮಿಡಿ ಬಿಟ್ಟು ಸೂಲಿಬೆಲೆ ತರಹ ಒಳ್ಳೆಯ ಕೋಮು ಪ್ರಚೋದಕ ಭಾಷಣಕಾರರಾದರೆ ಇನ್ನೂ ಅಭಿಮಾನಿ ಬಳಗ ಜಾಸ್ತಿ ಆಗಬಹುದು” ಎಂದು ಜೀಶನ್ ಅಲಿ ಎಂಬವರು ಸಲಹೆ ನೀಡಿದ್ದಾರೆ.

‘ಶಾಂತಿಕ್ರಾಂತಿ’ ಫೇಸ್‌ಬುಕ್ ಪೇಜ್‌ನಲ್ಲಿ ಮಾಡಿರುವ ಪೋಸ್ಟ್, ಪ್ರಾಣೇಶ್ ಅವರ ಮಾತುಗಳನ್ನು ಟ್ರೋಲ್ ಮಾಡಿದೆ. ಆರ್‌ಎಸ್‌ಎಸ್‌ನಲ್ಲಿ ವಾಸ್ತವಗಳನ್ನು ತೆರೆದಿಟ್ಟಿದೆ.
ಪ್ರಕಾಶಕ ಬಸವರಾಜ ಸೂಳಿಬಾವಿ ಅವರು ಕಿರುಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದು, “ನಂಗಿದು ಹಳೆಯ ಮತ್ತು ಗೊತ್ತಿದ್ದ ವಿಷಯ. ಗೊತ್ತಿಲ್ಲದಿರುವವರಿಗೆ ಇದು ಹೊಸದು. ಗಂಗಾವತಿ ಪರಸರ ಬಲ್ಲವರಿಗೆ ಇಂಥ ವೇಷಧಾರಿಗಳ ಮುಸುಕಿನ ಮುಖವಾಡ ಎಷ್ಟೇ ಮರೆಮಾಚಿದರೂ ಕಣ್ಣಿಗೆ ರಾಚುವಂತಿರುತ್ತದೆ. ಇಂಥವು ಅಲ್ಲಿ ಅನೇಕ ಮುಖಗಳಿವೆ. ಹೊರಗೊಂದು ಒಳಗೊಂದು ತೀರಾ ಕಾಮನ್ ಅನ್ನುವಂತಿವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಆರ್‌ಎಸ್‌ಎಸ್‌ಗೆ ನೆಹರೂ ಆಹ್ವಾನ ನೀಡಿದ್ದರೇ? 1963ರ ಗಣರಾಜ್ಯೋತ್ಸವದ ಅಸಲಿ ಕಥೆಯೇನು?
“ಕೆಲ ತಿಂಗಳ ಹಿಂದೆ ನಮ್ಮ ಗೆಳೆಯರೊಬ್ಬರು, ಬೀಚಿ ಪರಂಪರೆಯ ವಾರಸುದಾರನೆಂದು ಹೇಳಿಕೊಳ್ಳುವ ಮತ್ತು ಹಾಸ್ಯವನ್ನು ಅಪಮಾನ ಮಾಡುವ ಬ್ರಾಹ್ಮಣ್ಯದ ಪ್ರಾಣೇಶ ಮನೆಯಲ್ಲಿ ಕಾಣಿಸಿಕೊಂಡಾಗ ಅಚ್ಚರಿ ಎನಿಸಿತ್ತು. ಅವರ ಜತೆ ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿಗಳೂ ಇದ್ದರು. ಆಗ ನಾನು ನನ್ನ ಅಭಿಪ್ರಾಯವನ್ನು ಸೂಕ್ಷ್ಮವಾಗಿ ದಾಖಲಿಸಿದ್ದೆ. ನಮ್ಮ ಅಭಿಪ್ರಾಯದ ಹಿಂದಿರುವ ಸೂಕ್ಷ್ಮವನ್ನು ಅರಿಯದೆ ಅಥವಾ ಅರಿತರೂ ಜಾಣತನದಿಂದ ಅವರು ಜಾರಿಕೊಂಡಿದ್ದರು. ಇರಲಿ. ಪೂರ್ಣಾವಧಿ ಕಾರ್ಯಕರ್ತನಾಗಿಯೇ ಬೈಠಕ್ ನಡೆಸುತ್ತ ಹಲವು ಕಾರ್ಯಕರ್ತರನ್ನು ತಯಾರು ಮಾಡಿದ ಈ ಆಸಾಮಿಯಂಥವರು ಗಂಗಾವತಿಯಲ್ಲಿ ಹಲವರು ಇರುವುದರಿಂದ ಗಂಗಾವತಿ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಈ ಹೊತ್ತು ಗಂಗಾವತಿಯಲ್ಲಿನ ಪ್ರಗತಿಪರರು ತಮ್ಮ ಗೊಂದಲ ಮತ್ತು ದ್ವಂದ್ವ ಬಗೆಹರಿಸಿಕೊಂಡು ಸೌಹಾರ್ದದ ಕಾರ್ಯಾಚರಣೆ ರೂಪಿಸದಿದ್ದರೆ ಗಂಗಾವತಿಯ ‘ಸೂಕ್ಷ್ಮ ಪರಿಸರ’ ಬಿಗಡಾಯಿಸಲಿದೆ. ಪ್ರಗತಿಪರರ ದ್ವಂದ್ವಗಳ ಕೊಡುಗೆಯೂ ಆರ್‌ಎಸ್‌ಎಸ್ ಬೆಳವಣಿಗೆಯಾಗಲು ಕಾರಣವಾದ ಸಂಗತಿಗಳಲ್ಲಿ ಒಂದು ಎಂದು ನಾನು ಅರಿಯದ ವಿಷಯವೇನಲ್ಲ. ಎದುರು ಕಾಣುವ ರಾಜಕೀಯ ಬೇರೆ, ಅದರ ಮೂಲಕವೇ ಬೇರು ಬಿಡುವ ಆರ್‌ಎಸ್‌ಎಸ್‌ನ ಧೋರಣೆ ಬೇರೆ. ಇದನ್ನು ಸ್ಪಷ್ಟವಾಗಿ ಅಲ್ಲಿನ ಪ್ರಗತಿಪರರು, ಬಸವಾಭಿಮಾನಿಗಳು (ಕಾಲ ಮಿಂಚಿದ್ದರೂ ದುರಂತವಾಗುವ ಹಂತ ಇನ್ನೂ ತಲುಪಿಲ್ಲವಾದ್ದರಿಂದ) ತಮ್ಮ ನಡೆ ತಿದ್ದುಕೊಂಡು ಈಗಲಾದರೂ ಎಚ್ಚರಾಗಿರಬೇಕು. ಇಲ್ಲದಿದ್ದರೆ ಗಂಗಾವತಿ ಸ್ಥಿತಿ ಬೇರೆಯೇ ಆಗುವುದು ನಿಶ್ಚಿತ” ಎಂದು ಎಚ್ಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನೂರಾರು ಜನರು ಪ್ರಾಣೇಶ್ ಅವರ ವಿಡಿಯೊಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಂಘಪರಿವಾರದ ಅಸಲಿ ಮುಖವನ್ನು ಅನಾವರಣ ಮಾಡುತ್ತಿದ್ದಾರೆ. ಪ್ರಾಣೇಶ್ ಅವರನ್ನು ಮುಗ್ಧವಾಗಿ ನಂಬಿದ್ದೆವು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.





