ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ, “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ಎಂಬ ವಿಚಾರ ಸಂಕಿರಣ, ತೀವ್ರ ಆಕ್ಷೇಪ, ದಲಿತ ಸಂಘರ್ಷ ಸಮಿತಿಯ ಪ್ರತಿಭಟನೆಯ ನಡುವೆಯೂ ನಡೆದಿದೆ. ವಿವಿಯ ಮುಂಭಾಗದಲ್ಲಿ ದಸಂಸ ಸದಸ್ಯರು ಜಮಾಯಿಸಿ ಘೋಷಣೆ ಕೂಗಿದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಕ್ರಮ ನಡೆದಿದೆ.
ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ ಶರತ್ ಅನಂತಮೂರ್ತಿ, ಮುಂದೆಯೂ ಇಂತಹ ಅವಕಾಶ ಸಿಕ್ಕರೆ ಸ್ವೀಕರಿಸುವುದಾಗಿ ಹೇಳಿ, ಬಲಪಂಥೀಯರ ಜೊತೆಗಿನ ತಮ್ಮ ಸಖ್ಯವನ್ನು ಮುಂದುವರಿಸುವ ಸೂಚನೆ ನೀಡಿದ್ದಾರೆ.
“ಇವತ್ತು ಕಾರ್ಯಕ್ರಮ ಮಾಡಬೇಡಿ. ಅದು ಹಾಗಿದೆ, ಹೀಗಿದೆ ಎಂದು ಹೇಳಲು ಹೊರಟವರು ದಿಟ್ಟತನ ತೋರುತ್ತಿಲ್ಲ. ಅವರಿಗೆ ತಮ್ಮ ನಂಬಿಕೆಯಲ್ಲಿ ಶ್ರದ್ಧೆ ಇದ್ದು ದಿಟ್ಟತನ ಇದ್ದರೆ, ‘ನೀವೂ ಹೇಳಿ ನಿಮ್ಮ ವಾದವನ್ನು, ನಾವು ಪ್ರತಿವಾದ ಮಂಡಿಸ್ತೀವೆ. ಗೌರವದಿಂದ ನಿಮ್ಮ ಬಗ್ಗೆ ಒಳ್ಳೆಯ ಆಲೋಚನೆ ಇಟ್ಟುಕೊಂಡು ನೀವು ಹೇಳುವುದು ನಮಗೆ ಒಪ್ಪಿಗೆ ಇಲ್ಲ’ ಎಂದು ಹೇಳುವಂತ ವಾತಾವರಣ ಸೃಷ್ಟಿಸುತ್ತೇವೆ. ಇಲ್ಲದಿದ್ದರೆ ಇದು ತುಂಬ ಅಪಾಯಕಾರಿ” ಎಂದು ಟೀಕಿಸಿದರು.
ಎಲ್ಲಾ ವಿವಿಗಳಿಗೆ ಅರ್ಥ ಬರೋದು ನಮಗೆ ಅಪ್ರಿಯವಾಗಬಹುದಾದುದು ಎಂದು ದೂರವಿಡದೇ ಅದನ್ನು ನಮ್ಮಲ್ಲೇ ಸ್ವೀಕರಿಸಿ ಅದಕ್ಕೆ ವಾಗ್ವಾದವನ್ನು ಸೃಷ್ಟಿಮಾಡುವ ವಾತಾವರಣವನ್ನು ಬೆಳೆಸಿಕೊಂಡಾಗ. ಇವತ್ತು ನಮಗೆ ಇಷ್ಟವಾದುದನ್ನು ಮಾತ್ರ ಕೇಳಬೇಕು, ಇಷ್ಟವಾಗದ್ದಕ್ಕೆ ಜಾಗ ಇಲ್ಲ ಎಂಬ ಸಂದರ್ಭ ಸೃಷ್ಟಿಯಾದರೆ, ಈಗಿನ ಕಾಲದ ಮಕ್ಕಳು ನಾವು ಏನನ್ನು ಹೇಳಲ್ಲವೋ ಅದನ್ನೇ ಹುಡುಕಿ ಹೋಗುತ್ತಾರೆ. ಇವತ್ತು ಧಾರ್ಮಿಕ ಪ್ರಜ್ಞೆಯ ಬಗ್ಗೆ ಹೇಳದೇ, ಒಂದೇ ಒಂದು ವೀವ್‌ಪಾಯಿಂಟ್ ಎದುರು ಇಟ್ಟಾಗ, ಬೇಸತ್ತು ಬೇರೆ ಕಡೆ ಹೋಗುತ್ತಾರೆ. ಎಲ್ಲಿಗೆ ಹೋಗ್ತಾರೆ ಅಂದ್ರೆ ಇಂಟರ್‌ನೆಟ್‌ಗೆ, ವಾಟ್ಸಪ್‌ಗೆ ಹೋಗ್ತಾರೆ. ವಿವಿಯಲ್ಲಿ ಗಾಂಭೀರ್ಯತೆ ಇರಬೇಕು. ಚರ್ಚೆಗಳಿಗೆ ಅವಕಾಶ ಇರಬೇಕು. ಚರ್ಚೆಗಳಿಗೆ ಯಾವಾಗ ಅವಕಾಶ ಬರುತ್ತದೆ ಅಂದರೆ, ಇಲ್ಲವಾದ ಅಭಿಪ್ರಾಯಗಳನ್ನು ಜೊತೆಗೂಡಿಸಿದಾಗ. ಇದೇ ಆಧುನಿಕವಾದ ವಿವಿಯ ಸ್ವರೂಪ.
ನಮ್ಮ ವಿವಿಗಳು ಮತ್ತೆ ಹಳೆಯ ವಿವಿಗಳಲ್ಲಿ ಆದ ಚಿಂತನೆ, ಅದರಿಂದ ಬಂದ ಜ್ಞಾನ, ಬುದ್ದಿಜೀವಿಗಳ ಬೆಳವಣಿಗೆ ಇದೆಲ್ಲದಕ್ಕೂ ಭಾರತದಲ್ಲಿ ಅಲ್ಲದೇ ಬೇರೆಲ್ಲಿ ಮಾಡಲು ಸಾಧ್ಯ. ಯಾಕೆಂದರೆ ನಾವು ಇಂತಹ ಚರ್ಚೆ, ಚಿಂತನೆಗಳಲ್ಲೇ ತೊಡಗಿಸಿಕೊಂಡಿದ್ದ ದೇಶ. ಎಲ್ಲರೂ ನಾವು ಟೀಕೆ ಭಿನ್ನಾಭಿಪ್ರಾಯಗಳಿಗೆ ತೆರೆದುಕೊಳ್ಳೋಣ. ಇವತ್ತು ಲೇಬಲ್ ಕಟ್ಟಿ ಒಬ್ಬರನ್ನು ಹಾಳು ಮಾಡೋದಲ್ಲ. ಲೇಬಲ್‌ಗಳಲ್ಲ ಅವರು ಮಂಡಿಸಿದ ವಿಷಯ ಕುರಿತು ನಾವು ಮಾತಾಡಬೇಕು. ಮಾತಾಡಲು ಗಟ್ಟಿತನ ಇರಬೇಕು, ಓದ್ಕೊಬೇಕು. ಬಹುಷಃ ನಾನೇ ಹೆಚ್ಚು ಅಂಬೇಡ್ಕರ್ ಬಗ್ಗೆ ಓದಿದವನು, ಎಲ್ಲದನ್ನೂ ಲೇಬಲ್ ಮಾಡ್ಕೋಬಾರದು. ಅಂಬೇಡ್ಕರ್ ಮಹಾನ್ ಚಿಂತಕ, ಜಾತ್ಯತೀತ ಭಾರತಕ್ಕೆ ಕಾಲಿಡಬೇಕಾದರೆ ಅಂಬೇಡ್ಕರ್ ಅನಿವಾರ್ಯ. ಆದರೆ ಅವರಲ್ಲೂ ಕೆಲವು ಗೊಂದಲಗಳಿದ್ದವು. ಅದನ್ನೂ ಗೌರವದಿಂದ ಇಡೋಣ. ಸೆನ್ಸಾರ್‌ಶಿಪ್ ಬೇಡ” ಎಂದರು.
ಅಂಬೇಡ್ಕರ್ ಏನಂದಿದ್ದರು?
ಡಾ. ಬಿ. ಆರ್. ಅಂಬೇಡ್ಕರ್ ಅವರು ಭಗವದ್ಗೀತೆಯನ್ನು ಹಿಂದೂ ಧರ್ಮದೊಳಗಿನ ಒಂದು ಪ್ರತಿ-ಕ್ರಾಂತಿಯ ಮತ್ತು ಜಾತಿ ವ್ಯವಸ್ಥೆಯನ್ನು ಸಮರ್ಥಿಸುವ ತತ್ವಶಾಸ್ತ್ರ ಎಂದು ವಿಶ್ಲೇಷಿಸಿದ್ದಾರೆ. ಅವರು ಭಗವದ್ಗೀತೆಯನ್ನು ಬೌದ್ಧಧರ್ಮದ ವಿರುದ್ಧ ಒಂದು ಬೌದ್ಧ ವಿರೋಧಿ ಪ್ರತಿಕ್ರಿಯೆ ಎಂದು ಪರಿಗಣಿಸಿದ್ದರು ಮತ್ತು ಅದನ್ನು ಸಾಮಾಜಿಕ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ಸಮರ್ಥಿಸಲು ಬಳಸಲಾಗಿದೆ ಎಂದು ಟೀಕಿಸಿದ್ದರು.





