ಬೆಳ್ತಂಗಡಿ : ಅತ್ಯಾಚಾರಿಗಳ ಅಟ್ಟಹಾಸಕ್ಕೆ ಬಲಿಯಾದ ಯುವತಿಯರ ಜೊತೆಗೆ ನಾವಿದ್ದೇವೆ ಎನ್ನುವ ಸಂದೇಶದೊಂದಿಗೆ ‘ಕೊಂದವರು ಯಾರು? ಆಂದೋಲನ ಆಯೋಜಿಸಿದ್ದ ಮಹಿಳಾ ನ್ಯಾಯ ಸಮಾವೇಶ ಇಲ್ಲಿನ ಮಾರಿಗುಡಿ ಸಮೀಪದಿಂದ ತಾಲ್ಲೂಕು ಕಚೇರಿವರೆಗೆ ಕಪ್ಪು ಬಟ್ಟೆ ಧರಿಸಿ ಮೌನ ಮೆರವಣಿಗೆ ಮೂಲಕ ಚಾಲನೆ ಪಡೆಯಿತು.
ಧರ್ಮಸ್ಥಳದ ವೇದವಲ್ಲಿ, ಪದ್ಮಲತಾ, ಯಮುನಾ, ಸೌಜನ್ಯ ಕೊಲೆಗಾರರ ಪತ್ತೆಗೆ ಆಗ್ರಹಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಾಂಪ್ರದಾಯಿಕ ದುಡಿ ವಾದನ ತಂಡದ ಸಾಥ್‌ನೊಂದಿಗೆ ಸಮಾವೇಶ ಕಳೆಗಟ್ಟಿತ್ತು.
ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಮಾತನಾಡಿ, ಕೊಂದವರು ತಮ್ಮ ಮೈ ಮುಟ್ಟಿ ನೋಡಿಕೊಳ್ಳಬೇಕು. ಸರಕಾರಕ್ಕೆ ಕೊಂದವರನ್ನು ಹುಡುಕಲು ಸಾಧ್ಯ ಇಲ್ಲವೇ? ಎಸ್ ಐ ಟಿ ಮಾಡಿದ್ದೇನು? ಅಪರಾಧಿಗಳು ಎಂದು ಜೈಲಿಗೆ ಹೋದವರು ನಿರಪರಾಧಿಗಳು ಎಂದು ನ್ಯಾಯಾಲಯ ಹೇಳಿದೆ. ದೆಹಲಿಯ ನಿರ್ಭಯ ಪ್ರಕರಣದ ದಿನವಾದ ಇಂದು ಸಮಾವೇಶ ಸೂಕ್ತ ಉತ್ತರ ಕೊಡಲಿದೆ. ವಿ. ಎಸ್. ಉಗ್ರಪ್ಪ ವರದಿ ಜಾರಿಯಾಗಬೇಕು. SIT ರಚನೆಯದಾಗ ಇಲ್ಲಿನ ಸಮಗ್ರ ಕೊಲೆ-ಅತ್ಯಾಚಾರ ಪ್ರಕರಣಗಳ ತನಿಖೆ ಆಗಬೇಕು ಎಂದು ಹೇಳಲಾಗಿತ್ತು. ಆದರೀಗ ಹಾಗಾಗಿಲ್ಲ. ದಿಕ್ಕು ತಪ್ಪಿದೆ, ಸಮಗ್ರ ತನಿಖೆ ಆಗಬೇಕು” ಎಂದು ಆಗ್ರಹಿಸಿದರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಬಿ. ಎಂ. ರೋಹಿಣಿ ಮಾತನಾಡಿ, “ಹೆಣ್ಣುಮಕ್ಕಳು ಯಾವತ್ತೂ ಹಿಂದೆ ಸರಿದಿಲ್ಲ. ಅದಕ್ಕೆ ಇತಿಹಾಸದಲ್ಲಿ ರಾಣಿ ಅಬ್ಬಕ್ಕ ಉದಾಹರಣೆ ಆಗಿದ್ದಾಳೆ. ಹಿಂದೆ ಜನರು ಹೇಳುತ್ತಿದ್ದ ಹಾಗೆ ನಾವು ಬಳೆ ತೊಟ್ಟು ಕುಳಿತಿಲ್ಲ. ನಾವು ನ್ಯಾಯಕ್ಕೆ ಹೋರಾಡುವುದು ಅನಿವಾರ್ಯ ಆಗಿದೆ, ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಕಿವಿ, ನಾಲಿಗೆ ಕೆಲಸ ಮಾಡುವುದಿಲ್ಲವೇ” ಎಂದು ಪ್ರಶ್ನಿಸಿದರು.
ಹೋರಾಟಗಾರ್ತಿ, ವಿ. ಎಸ್. ಉಗ್ರಪ್ಪ ಸಮಿತಿ ಸದಸ್ಯೆಯಾಗಿದ್ದ ಜ್ಯೋತಿ ಎ ಮಾತನಾಡಿ, “ಈ ಭಾಗದಲ್ಲಿ ಹೆಣ್ಣುಮಕ್ಕಳು ಇಷ್ಟೊಂದು ಕೊಲೆ ಆಗುವಾಗ ಪೊಲೀಸ್ ವ್ಯವಸ್ಥೆ ಏನು ಮಾಡುತ್ತಿದೆ? ಪೊಲೀಸ್ ವ್ಯವಸ್ಥೆ ಏನು ಮಾಡುತ್ತಿದೆ? ದೂರು ಯಾಕೆ ಸ್ವೀಕರಿಸುತ್ತಿಲ್ಲ. ದೂರು ಸ್ವೀಕರಿಸಿ, ಶಂಕಿತ ಆರೋಪಿಯ ತನಿಖೆ ನಡೆಸಬೇಕು” ಎಂದರು.

ಉಗ್ರಪ್ಪ ಸಮಿತಿ ಅಸಹಜ ಸಾವುಗಳ ಬಗ್ಗೆ ತನಿಖೆ ಆಗಬೇಕು ಎಂದು ಶಿಫಾರಸ್ಸು ಮಾಡಿತ್ತು. ಅದು ಆಗಿಲ್ಲ. ಈಗ SIT ಅದನ್ನು ಮಾಡಬೇಕು ಎಂದು ಅವರು ಒತ್ತಾಯಿದರು.
ರೈತ ಹೋರಾಟ ನಾಯಕಿ ಅನಸೂಯಮ್ಮ, “ಇತ್ತೀಚೆಗೆ ಸಂವಿಧಾನ ದಿನ ಆಚರಿಸಲಾಯಿತು. ಆದರೆ ಸಂವಿಧಾನದತ್ತ ಹಕ್ಕುಗಳು ಮಹಿಳೆಯರಿಗೆ ಸಿಕ್ಕಿಲ್ಲ. ಸಮಾನ ಹಕ್ಕು ಮಹಿಳೆಯರಿಗೆ ಸಿಕ್ಕಿಲ್ಲ. ಅಂಬೇಡ್ಕರ್ ಸಂವಿಧಾನ ಮಾಡುವಾಗ ಮನುಸ್ಮೃತಿಯನ್ನು ಸುಟ್ಟು ಹಾಕಿದ್ದಾರೆ. ಆದರೆ ಆ ಮನೋಭಾವನೆ ಹೋಗಿಲ್ಲ. ತೊಟ್ಟಿಲು ತೂಗುವ ಕೈಗಳು ಇಂದು ದೇಶವನ್ನು ಅಳುವ ಮಟ್ಟಕ್ಕೆ ಏರಿವೆ. ಮಹಿಳೆಯರಿಗೆ ನ್ಯಾಯ ಸಿಗಲಿ. ಪೊಲೀಸ್ ಸರಿಯಾದ ರೀತಿ ರಕ್ಷಣೆಕೊಡಬೇಕು. ಇಲ್ಲಿನ ಮಹಿಳೆಯರಿಗೆ ಇಲ್ಲಿನ ದೇವತೆಗಳಾದ ದುರ್ಗಿ, ದೇವಿಯರು ಆದರ್ಶ ಆಗಬೇಕು. ನಾವು ಇಂದು ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ” ಎಂದರು.
ಸೌಜನ್ಯ ಸಹೋದರಿ ಸೌoದರ್ಯ ಮಾತನಾಡಿ, “ನನ್ನ ಅಕ್ಕನ ಕೊಲೆ ಬಳಿಕ ಇಲ್ಲಿನ ಪರಿಸರದಲ್ಲಿ ಕೊಲೆ, ಅತ್ಯಾಚಾರ ನಡೆದಿಲ್ಲ. ಇದಕ್ಕೆ ಜನತೆ ನ್ಯಾಯಕ್ಕೆ ಬೇಡಿಕೆ ಇಟ್ಟು ಸಹಕಾರ, ಹೋರಾಟ ಮಾಡಿದ್ದೇ ಕಾರಣವಾಗಿದೆ” ಎಂದರು.
ಹೋರಾಟಗಾರ್ತಿ ಪ್ರಸನ್ನರವಿ ಮಾತನಾಡಿ, “ನಮ್ಮ ರಾಜಕಾರಣಿಗಳು ಸದನದಲ್ಲಿ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಗ್ಗೆ ಒಂದಿಷ್ಟು ಮಾತನಾಡಿಲ್ಲ. ಇದೇ ಜಿಲ್ಲೆಯ ಶಾಸಕರಾದ ಭಾಗೀರಥಿ ಮುರುಳ್ಯ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಮಾತನಾಡಿಲ್ಲ. ಆಕೆ ಮಹಿಳೆಯಾಗಿರಲು ನಾಚಿಕೆ ಪಡಬೇಕು” ಎಂದರು.
ನಿರ್ಭಯ ಅತ್ಯಾಚಾರ-ಕೊಲೆ ಆದಾಗ ಕಾನೂನು ಬದಲಾವಣೆ ಆಗಿದೆ. ದೂರು ಕೊಡಲು ಹೋದ ಒಂದು ಹೆಣ್ಣನ್ನು ಪೊಲೀಸರು ಅರೆ ನಗ್ನ ಸ್ಥಿತಿಯಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ನಮ್ಮ ಸರಕಾರ ಕೂಡಾ ಈ ದಿನದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಬರಹಗಾರ್ತಿ ಡಾ. ಸುನಂದಮ್ಮ ಮಾತನಾಡಿ, “ನಾವೆಲ್ಲ ಸಂವಿಧಾನದ ಮೂಲಕ ಹಕ್ಕುಗಳನ್ನು ಹೊಂದಿದ್ದೇವೆ. ಆದರೆ ಮನುಸ್ಮೃತಿಯಿಂದ ಹೊರಗಡೆ ಬಂದಿಲ್ಲ. ನಾವು ಇಂದು ನ್ಯಾಯಕ್ಕೆ ಬೇಕಾಗಿ ಹೋರಾಟ ಮಾಡಬೇಕಾಗಿದೆ. ನಮ್ಮ ಹೋರಾಟದಿಂದ ನೊಂದ ಕುಟುಂಬಗಳಿಗೆ ನ್ಯಾಯ ಸಿಗಬಹುದು” ಎಂದು ಆಶಿಸಿದರು.
ಹೋರಾಟಗಾರ್ತಿ ಶಶಿಕಲಾ ಶೆಟ್ಟಿ, “ಇಂದಿನ ಸಮಾವೇಶಕ್ಕೆ ಸಿಕ್ಕಿರುವ ಬೆಂಬಲ ಒಂದು ಕ್ರಾಂತಿಯಾಗಿದೆ. ಇಲ್ಲಿ ಸಾವಿರಾರು ಜನ ಸೇರಿರುವುದು ಇದಕ್ಕೆ ಸಾಕ್ಷಿ. ಇಲ್ಲಿ ಅತ್ಯಾಚಾರ, ಕೊಲೆಗೆ ಒಳಗಾದ ನೊಂದ ಜೀವಗಳಿಗೆ ನ್ಯಾಯ ಸಿಗಬೇಕಿದೆ. ಬರ್ಬರ ಕೊಲೆಗಳನ್ನು ಮಾಡಿದವರು ಯಾರು ಎಂದು ಗೊತ್ತಾಗಲೇ ಬೇಕಿದೆ. ಸಿಬಿಐ ತನಿಖೆಯಲ್ಲಿ ಸಂತೋಷ ರಾವ್ ಆರೋಪಿ ಅಲ್ಲ ಎಂದು ಸಾಬೀತು ಆದಾಗ, ಆತನ ಬಂಧಿಸಿದ ಅಧಿಕಾರಿಗಳ ತನಿಖೆಗೆ ಅಕ್ವಿಟಲ್ ಕಮಿಟಿ ರಚನೆ ಆಗಬೇಕು ಎಂದು ಆದೇಶ ಇದ್ದರೂ ರಚನೆ ಆಗಿಲ್ಲ, ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ರಂಗ ಕಲಾವಿದೆ ದು. ಸರಸ್ವತಿ ಅವರು ನಾಟಕದ ಮೂಲಕ ಧರ್ಮಸ್ಥಳದ ಘಟನೆಗಳ ಭಾವನಾತ್ಮಕ ಚಿತ್ರಣ ನೀಡಿದರು.





