ರಾಜ್ಯದ ವಿಜಯಪುರ, ಬೆಳಗಾವಿ, ಬೀದರ್ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿರುವ ಸೂರಗೊಂಡನಕೊಪ್ಪ ರೈಲು ನಿಲ್ದಾಣಗಳಿಗೆ ಸ್ಥಳೀಯ ಸಾಂಸ್ಕೃತಿಕ ಮಹತ್ವಕ್ಕೆ ಪೂರಕವಾಗಿ ಹೊಸ ನಾಮಕರಣ ಮಾಡಬೇಕೆಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಅವರು ಶಿಫಾರಸು ಮಾಡಿದ್ದಾರೆ.
ಈ ಸಂಬಂಧವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಚಿವರು ಪತ್ರ ಬರೆದಿದ್ದು, ಈ ಪತ್ರದಲ್ಲಿ ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಬೆಳಗಾವಿ ನಿಲ್ದಾಣಕ್ಕೆ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಚನ್ನಬಸವ ಪಟ್ಟದ್ದೇವರು ಹಾಗೂ ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ ಎಂದು ಹೊಸ ಹೆಸರುಗಳನ್ನು ಇಡಬೇಕೆಂದು ಪ್ರಸ್ತಾಪಿಸಿದ್ದಾರೆ.
ರಾಜ್ಯ ಸರ್ಕಾರ ಈ ನಾಲ್ಕು ನಿಲ್ದಾಣ ಗಳಿಗೆ ಸಂತರ ಹೆಸರು ಇಡಲು ಶಿಫಾರಸು ಮಾಡಿದ್ದು, ಅದಕ್ಕೆ ಗೃಹ ಸಚಿವಾಲಯದ ಒಪ್ಪಿಗೆ ಬೇಕಾಗಿದೆ. ಹೀಗಾಗಿ ಮೂಲಸೌಕರ್ಯ ಇಲಾಖೆ ಮೂಲಕ ಪತ್ರ ರವಾನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಈ ನಾಲ್ಕೂ ರೈಲು ನಿಲ್ದಾಣಗಳು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿವೆ. ಕರ್ನಾಟಕದ ಈ ಭಾಗಗಳಿಗೆ ತಾವು ಸೂಚಿಸಿರುವ ಸಂತರ ಕೊಡುಗೆ ಮೌಲಿಕವಾಗಿದೆ. ಈ ಶಿಫಾರಸನ್ನು ಅಂಗೀಕರಿಸಿ, ಮರುನಾಮಕರಣದ ಸಂಗತಿಯನ್ನು ಆದಷ್ಟು ಬೇಗ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಸಚಿವರು ಕೋರಿದ್ದಾರೆ.





