ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಖಾಸಗಿ ಸಂಘಟನೆಗಳು ಸರ್ಕಾರದ ಸ್ಥಳಗಳಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧಿಸಿದೆ. ಕಾರ್ಯಕ್ರಮ ನಡೆಸುವುದಾದರೆ ಪೂರ್ವಾನುಮತಿ ಕಡ್ಡಾಯಗೊಳಿಸಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಸೇರಿ ಯಾವುದೇ ಖಾಸಗಿ ಸಂಘಟನೆಗಳು ಚಟುವಟಿಕೆ ನಡೆಸಬಾರದು ಎಂದು ಸಿಎಂಗೆ ಪತ್ರ ಬರೆದಿದ್ದರು. ಇದಾದ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದಗಳು ನಡೆದಿದ್ದವು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಪೂರ್ವಾನುಮತಿ ಇಲ್ಲದೆಯೇ ಆರ್‌ಎಸ್‌ಎಸ್ ಬೈಠಕ್ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳು ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ತಮಿಳುನಾಡಿನ ಮಾದರಿಯಲ್ಲೇ ರಾಜ್ಯ ಸರ್ಕಾರವು ಈ ನಿರ್ಬಂಧವನ್ನು ವಿಧಿಸಿದೆ.





