ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ ನೀಡುವ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಬೆಲೆ ಏರಿಕೆ ಬವಣೆಗೆ ಸಿಲುಕಿದ್ದಾರೆ. ಚಳಿಗಾಲ ಮತ್ತು ಕ್ರಿಸ್ಮಸ್ ಸೀಸನ್ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಒಂದಕ್ಕೆ 8 ರೂಪಾಯಿಗೆ ಏರಿರುವುದು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ.
ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡುವುದು ಸರಕಾರದ ಆದೇಶವಾಗಿದೆ. ಇದಕ್ಕಾಗಿ ಸರ್ಕಾರದಿಂದ ಒಂದು ಮೊಟ್ಟೆಗೆ ₹6ರಂತೆ ಅನುದಾನ ನೀಡಲಾಗುತ್ತದೆ. ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಿಸುವುದು ಬೇಯಿಸಿದ ಮೊಟ್ಟೆ ನೀಡುವುದರ ಹಿಂದಿನ ಉದ್ದೇಶ. ಆದರೆ ಮೊಟ್ಟೆ ಬೆಲೆ ಏರಿಕೆಯನ್ನು ಸರಕಾರ ಗಮನಿಸಿಲ್ಲ. ಇದರಿಂದ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಸಂಬಳದ ಹಣದಿಂದ ಮೊಟ್ಟೆ ಸರಬರಾಜು ಮಾಡುವವರ ಬಿಲ್ಲನ್ನು ಸರಿದೂಗಿಸಬೇಕಾಗಿದೆ. ಕೆಲವೊಂದು ಮುಖ್ಯಶಿಕ್ಷಕರು ₹5000ಕ್ಕೂ ಮೇಲ್ಪಟ್ಟು ಹಣವನ್ನು ತಮ್ಮ ಜೇಬಿನಿಂದ ಕೊಡಬೇಕಾಗಿದೆ.
ಈ ವರ್ಷದ ಸೆಪ್ಟೆಂಬರ್ ತಿಂಗಳ ಕೊನೆಗೆ ಮೊಟ್ಟೆ ಒಂದಕ್ಕೆ ₹6.50 ಇದ್ದರೆ, ನವೆಂಬರ್ ಬಳಿಕ ಏರುತ್ತಲೇ ಹೋಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಒಂದು ಮೊಟ್ಟೆಗೆ ₹8ಕ್ಕೆ ತಲುಪಿದೆ.
ಪುತ್ತೂರಿನ ಸರಕಾರಿ ಶಾಲೆಯೊಂದರಲ್ಲಿ 295 ಮಕ್ಕಳು ಮೊಟ್ಟೆ ತಿನ್ನುವ ವಿದ್ಯಾರ್ಥಿಗಳಿದ್ದಾರೆ. ಅಲ್ಲಿನ ಮುಖ್ಯಶಿಕ್ಷಕಿ ಕಳೆದ ತಿಂಗಳು ₹6000 ತನ್ನ ಸಂಬಳದಿಂದ ಭರಿಸಿದ್ದಾರೆ. “ನಮ್ಮಲ್ಲಿ ಒಂದು ತಿಂಗಳಿಗೆ ಸಾಕಾಗುವಷ್ಟು ಮೊಟ್ಟೆ ಖರೀದಿ ಮಾಡಿ ದಾಸ್ತಾನು ಮಾಡಿಡಲು ಸಾಧ್ಯವಿಲ್ಲ. ಹಾಗಾಗಿ ಎರಡು ದಿನಕ್ಕೊಮ್ಮೆ ಮೊಟ್ಟೆ ಖರೀದಿ ಮಾಡುತ್ತೇವೆ. ಆದರೆ ದಿನದಿಂದ ದಿನಕ್ಕೆ ಬೆಲೆ ಏರಿಕೆ ಆಗುತ್ತಿರುವುದು ಕಷ್ಟ ತಂದೊಡ್ಡಿದೆ. ನಮ್ಮ ವೈಯಕ್ತಿಕವಾದ ಆರ್ಥಿಕ ಹೊಂದಾಣಿಕೆ ಜೊತೆಗೆ ಶಾಲೆಯ ಹೊಣೆಗಾರಿಕೆ ಕೂಡಾ ಸೇರಿದಾಗ ಮೊಟ್ಟೆ ಯೋಜನೆ ಬಗ್ಗೆಯೇ ಜಿಗುಪ್ಸೆ ಹುಟ್ಟುತ್ತದೆ ” ಎನ್ನುತ್ತಾರೆ.
ಸರ್ಕಾರದ ಲೆಕ್ಕಾಚಾರದ ಪ್ರಕಾರ ಅನುದಾನ ನೀಡುವ ₹6ರಲ್ಲಿ, ₹5ನ್ನು ಮಾತ್ರ ಮೊಟ್ಟೆಗೆ ನಿಗದಿಮಾಡಲಾಗಿದ್ದರೆ, ಉಳಿದ ₹1ರಲ್ಲಿ ಮೊಟ್ಟೆ ಬೇಯಿಸಲು ಗ್ಯಾಸ್, ಮೊಟ್ಟೆಯ ಸಿಪ್ಪೆ ತೆಗೆದವರ ಸಂಬಳ ಮತ್ತು ಸಾಗಾಣಿಕೆಗೆಂದು ನಿಗದಿ ಮಾಡಲಾಗಿದೆ.
ಇನ್ನೊಬ್ಬರು ಮುಖ್ಯ ಶಿಕ್ಷಕಿ, ತಾನು ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ವಾಯು ಮಾಲಿನ್ಯದ ಚರ್ಚೆಯೇ ಇಲ್ಲದೆ ಮುಗಿಯಿತು ಸಂಸತ್ ಅಧಿವೇಶನ!
ಬಂಟ್ವಾಳದ ಪೌಲ್ಟ್ರಿಯೊಂದರ ಮಾಲೀಕ ವಿಶ್ವನಾಥ್ ಸುವರ್ಣ ಅವರು ಹೇಳುವಂತೆ, ಫೆಬ್ರವರಿ ತಿಂಗಳ ಕೊನೆಯವರೆಗೂ ಮೊಟ್ಟೆ ಬೆಲೆ ಹೆಚ್ಚಿರುತ್ತದೆ. ಏಕೆಂದರೆ ಚಳಿಗಾಲದಲ್ಲಿ ಮೊಟ್ಟೆ ಉತ್ಪಾದನೆ ಕಡಿಮೆ ಇರುತ್ತದೆ. ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್ ಕೇಕ್ ತಯಾರಿಸಲು ಹೆಚ್ಚಿನ ಬೇಡಿಕೆ ಇರುತ್ತದೆ. ಕಡಿಮೆ ಉತ್ಪಾದನೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ಬೆಲೆ ಹೆಚ್ಚಾಗಿದೆ. ಈ ಬೆಲೆ ಹೆಚ್ಚಳ ಮಾರುಕಟ್ಟೆಗೆ ಮೊಟ್ಟೆ ಪೂರೈಸುವವರಿಂದಲೇ ಆಗಿರುತ್ತದೆ. ಶಾಲೆಗಳಲ್ಲಿನ ಆರ್ಥಿಕ ತೊಂದರೆ ಬಗ್ಗೆ ಇಲಾಖೆಗಳೇ ಸರಕಾರದ ಗಮನ ಸೆಳೆಯಬೇಕು ಎನ್ನುತ್ತಾರವರು. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸಂಪರ್ಕಿಸಿದಾಗ, “ಈ ವಿಚಾರವನ್ನು ಗಮನಿಸಿದ್ದೇನೆ. ನನ್ನ ಮಟ್ಟದಲ್ಲಿ ಪ್ರಯತ್ನ ಖಂಡಿತಾ ಮಾಡುತ್ತೇನೆ” ಎಂದಿದ್ದಾರೆ.
ವರದಿ: ರಾಜೇಶ್ ಶೆಟ್ಟಿ ಬಿ





