ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಗದಿ ಮಾಡಿರುವ ಕೋಟಾ ಪ್ರಮಾಣ ಅತ್ಯಂತ ಕಡಿಮೆ ಇದೆ. ಇದರಿಂದಾಗಿ ಖರೀದಿದಾರರಿಂದ ಮೆಕ್ಕೆಜೋಳದ ಖರೀದಿ ಪ್ರಮಾಣವೂ ಕಡಿಮೆಯಾಗಿದೆ ಎಂಬ ಅಭಿಪ್ರಾಯ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾಯಿತು.
ಉತ್ತರ ಕರ್ನಾಟಕದ ಮೆಕ್ಕೆಜೋಳ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತು ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಲು ರೈತರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದರು.
ಸಚಿವರಾದ ಎಚ್ ಕೆ ಪಾಟೀಲ್, ಕೆ ಎಚ್ ಮುನಿಯಪ್ಪ, ಶಿವಾನಂದ ಪಾಟೀಲ, ಕೆ, ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ ಸಚಿವರಾದ ಚಲುವರಾಯಸ್ವಾಮಿಯವರು ದೆಹಲಿಯಲ್ಲಿದ್ದು ಆನ್ ಲೈನ್ ಮೂಲಕ ಸಭೆಗೆ ಸೇರ್ಪಡೆಗೊಂಡಿದ್ದಾರೆ. ರಾತ್ರಿ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಮೆಕ್ಕೆಜೋಳ ರೈತರ ಸಮಸ್ಯೆ ಬಗ್ಗೆ ವಿವರಿಸಿ ನೆರವು ಕೇಳಿರುವುದಾಗಿ ಸಚಿವ ಚಲುವರಾಯಸ್ವಾಮಿಯವರು ಸಭೆಗೆ ವಿವರಿಸಿದರು.
ಸಭೆಯಲ್ಲಿ ಚರ್ಚೆಯಾದ ವಿಚಾರಗಳು
“ರಾಜ್ಯದಲ್ಲಿ ದಿಡೀರ್ ಮೆಕ್ಕೆಜೋಳ ಬೆಲೆ ಕಡಿಮೆ ಆಗಲು ಒಂದು ಕಡೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳವಾಗಿದೆ. ಇದು ಗೊತ್ತಿದ್ದೂ ಕೇಂದ್ರ ಸರ್ಕಾರ ವಿದೇಶಗಳಿಂದ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಆಮದು ಮಾಡಿಕೊಂಡಿದೆ. ಇದರಿಂದಾಗಿ ರಾಜ್ಯದ ಮತ್ತು ದೇಶದ ಮೆಕ್ಕೆಜೋಳ ಬೆಳೆದ ರೈತರಿಗೆ ವಿಪರೀತ ಹೊರೆ ಆಗಿದೆ” ಎಂದು ಕೃಷಿ ಸಚಿವರು ಹೇಳಿದರು.
ನಿಯಮ ಪಾಲಿಸದ ಏಜೆನ್ಸಿಗಳಿಂದ ಸಮಸ್ಯೆ
ಕೇಂದ್ರದ ನೋಡಲ್ ಏಜೆನ್ಸಿಗಳಾದ ನಾಫೆಡ್/ಎನ್ಸಿಸಿಎಫ್ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆ ಜೋಳ ಸಂಗ್ರಹಣೆ ಮತ್ತು ಎಥೆನಾಲ್ ಉತ್ಪಾದನೆಗೆ ಬಳಕೆಗಾಗಿ ಈಗಾಗಲೇ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ ಸಂಬಂಧಪಟ್ಟ ನೋಡಲ್ ಏಜೆನ್ಸಿಗಳು ಮಾರ್ಗಸೂಚಿಯಂತೆ ಇನ್ನೂ ಖರೀದಿ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಇದು ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣ.
ಖರೀದಿದಾರರು ಮೆಕ್ಕೆ ಜೋಳ ಬೆಲೆ ಕಡಿಮೆ ಇದ್ದಾಗಲೇ ಹಿಂದೆ ಖರೀದಿಸಿ ಶೇಖರಣೆ ಮಾಡಿಕೊಂಡಿದ್ದಾರೆ.. ಇದರಿಂದಾಗಿ ಈಗ ಖರೀದಿಗೆ ಮುಂದೆ ಬರುತ್ತಿಲ್ಲ. ಇದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದ್ದು ಖರೀದಿದಾರರು ನಿಯಮಾನುಸಾರ ಮೆಕ್ಕೆ ಖರೀದಿಗೆ ಮುಂದೆ ಬರಬೇಕು. ಇದಕ್ಕೆ ರಾಜ್ಯ ಸರ್ಕಾರ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಸಲಹೆಗಳು ವ್ಯಕ್ತವಾದವು.
ಸಲಹೆಗಳು
ಮೆಕ್ಕೆ ಜೋಳ ಆಮದು ಮೇಲೆ ಕೇಂದ್ರ ಸರ್ಕಾರ ತಕ್ಷಣ ನಿಯಂತ್ರಣ ಹೇರುವ ಮೂಲಕ ಬೆಲೆಯಲ್ಲಿ ಸ್ಥಿರತೆ ಸಾಧಿಸಲು ಸಾಧ್ಯವಿದೆ. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು.
ಸಧ್ಯಕ್ಕೆ 8ಲಕ್ಷ ಟನ್ ಮೆಕ್ಕೆ ಜೋಳ ತಕ್ಷಣ ಖರೀದಿಸಲು ಸದರಿ ಏಜೆನ್ಸಿಗಳು ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು.
ಖರೀದಿ ಕೇಂದ್ರಗಳನ್ನು ನಾಫೆಡ್/ಎನ್ಸಿಸಿಎಫ್ ಇನ್ನೂ ಆರಂಭಿಸದಿರುವುದರಿಂದ ತೊಂದರೆಯಾಗಿದ್ದು, ಮಾರುಕಟ್ಟೆಯಲ್ಲಿ ಧಾರಣೆಯನ್ನು ಸ್ಥಿರಗೊಳಿಸಲು ತಕ್ಷಣ ಖರೀದಿ ಪ್ರಾರಂಭಿಸಬೇಕು.
ಈ ಬಗ್ಗೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಈ ಕುರಿತು ನೆರವು ಒದಗಿಸಲು ಕೋರಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸಭೆಗೆ ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳು ಸಭೆಯಲ್ಲಿ ನೀಡಿದ ಸೂಚನೆಗಳು
ಬೆಲೆ ಕುಸಿತದಿಂದ ಸಂಕಷ್ಜ ಎದುರಿಸುತ್ತಿರುವ ರಾಜ್ಯದ ಮೆಕ್ಕೆಜೋಳ ರೈತರ ನೆರವಿಗೆ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದೆ. 70ಲಕ್ಷ ಮೆ. ಟನ್ ಮೆಕ್ಕೆ ಜೋಳವನ್ನು ಆಮದು ಮಾಡಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿಯೇ ಉತ್ಪಾದನೆ ಹೆಚ್ಚಾಗಿರುವುದರಿಂದ ಆಮದು ಮೇಲೆ ನಿರ್ಬಂಧ ವಿಧಿಸಲು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿ ಅವರು ನಿರ್ಧರಿಸಿದರು.
“ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆ ಜೋಳವನ್ನು ತಕ್ಷಣ ಖರೀದಿಸಲು ಸೂಚಿಸಿ ರಾಜ್ಯದ ಪ್ರಮುಖ ಖರೀದಿದಾರರೊಂದಿಗೆ ಸಭೆ ನಡೆಸಬೇಕು. ಇದೇ ರೀತಿ ಕುಕ್ಕುಟೋದ್ಯಮಕ್ಕೆ ಮೆಕ್ಕೆ ಜೋಳದ ಬೇಡಿಕೆಯಿದ್ದು, ಅವರೊಂದಿಗೆ ಸಹ ಮಾತುಕತೆ ನಡೆಸಬೇಕು” ಎಂದು ಸಿಎಂಸ ಸೂಚಿಸಿದರು.





