ಸರ್ಕಾರಿ ಶಾಲೆ, ಕಾಲೇಜುಗಳ ಆವರಣದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಡೆಸಲು ನಿಷೇಧ ಹೇರಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಹಲವರು ಬೆಂಬಲ ಸೂಚಿಸಿದ್ದಾರೆ.
RSS ಯುವಕರಲ್ಲಿ ಅಂಧಾನುಮತ ವಿಚಾರಗಳನ್ನು ತುಂಬುತ್ತಿದೆ
ಮನುಸ್ಮೃತಿಯನ್ನು ಮನಸ್ಸಿನಲ್ಲಿ ಹುದುಗಿಟ್ಟುಕೊಂಡ ಆರಸ್ಸೆಸ್. ಅದರ ಅಣತಿಯಲ್ಲೇ ತನ್ನೆಲ್ಲ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ದೇವರು, ಧರ್ಮದ ಹೆಸರಲ್ಲಿ ತಳಜಾತಿಯ, ತಳವರ್ಗದ ಜನರಲ್ಲಿ ಮೌಢ್ಯವನ್ನು ತುಂಬಿ ತಾವು ಮಾಡಬೇಕಾದ ಕಾರ್ಯತಂತ್ರಗಳನ್ನು ಹೆಣೆದು ಜಾರಿಗೊಳಿಸಿದೆ. ಭಾರತದ ತಳಜಾತಿ, ತಳವರ್ಗಗಳು ಧಾರ್ಮಿಕವಾಗಿ ಕರ್ಮಟರಲ್ಲ. ಅವರು ಏಸು, ಅಲ್ಲಾಹ್, ಶಿವ, ರಾಮ ಮತ್ತು ಗ್ರಾಮೀಣ ದೇವಿಯರಲ್ಲಿ ಅಂತರ ಇಟ್ಟುಕೊಂಡವರಲ್ಲ. ಅಂತರ ಇಟ್ಟುಕೊಳ್ಳದ ಜನರಲ್ಲಿ ಹಿಂದುತ್ವದ ಕಲ್ಪನೆಯನ್ನು ಮೂಡಿಸಿ ತಳಜಾತಿ, ವರ್ಗದ ತಲೆಬಲಿಯದ ಯುವಕರಲ್ಲಿ ಅಂಧಾನುಮತ ವಿಚಾರಗಳನ್ನು ತುಂಬುತ್ತಿದ್ದಾರೆ. ತುಂಬುವುದು ಮಾತ್ರವಲ್ಲ ಹೊಟ್ಟೆಗೆ ಹಿಟ್ಟುಕೊಟ್ಟು ತಮ್ಮ ಕಾಲಾಳುಗಳನ್ನಾಗಿ ಮಾಡಿಕೊಂಡು ಮನುಸ್ಮೃತಿ ಹೇಳುವ ಜೀತದಲ್ಲಿ ಬೀಳಿಸುತ್ತಿದ್ದಾರೆ.
ಧರ್ಮದ ಹೆಸರಲ್ಲಿ ಹೇರುತ್ತಿರುವ ಜೀತವನ್ನು ಈ ಯುವಕರಲ್ಲಿ ಪಾವಿತ್ರ್ಯದ ಹೆಸರಲ್ಲಿ ಸಂರಕ್ಷಿಸಿ ಪುಣ್ಯ-ಪಾಪ-ಕರ್ಮಗಳ ಮೌಢ್ಯದಲ್ಲಿ ಬೀಳಿಸುತ್ತಿದ್ದಾರೆ. ಆರ್.ಎಸ್.ಎಸ್. ಸಂಘಟನೆ ಇಲ್ಲಿಯವರೆಗೆ ಯಾವ ಶೂದ್ರ, ತಳಜಾತಿಯವರನ್ನು ಸರಸಂಚಾಲಕರನ್ನಾಗಿ ಮಾಡದಿರುವುದೇ ಇದಕ್ಕೆ ಸಾಕ್ಷಿ. ಇಂದು ಸರ್ಕಾರಿ ಶಾಲೆಯಲ್ಲಿರುವ ಮಕ್ಕಳು ಯಾರು ಎಂದರೆ ಬಡವರು, ತಳಜಾತಿಯ ಶೂದ್ರರು. ಈಗಲಿಂದಲೇ ಅವರನ್ನು ತಮ್ಮೊಂದಿಗೆ ಸೇರಿಸಿಕೊಂಡು ಸಣ್ಣ ವಯಸ್ಸಿನಿಂದಲೇ ಮೌಢ್ಯ ತುಂಬುವವರಿದ್ದಾರೆ. ಇದಕ್ಕೆ ತಳಜಾತಿ, ವರ್ಗದ ಜನರೇ ಅವರಿಂದ ದೂರ ಉಳಿಯುವಂತೆ ಎಚ್ಚರಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. ಪ್ರಜ್ಞಾವಂತ ನಾಗರಿಕರು ಧರ್ಮದ ಹೆಸರಲ್ಲಿ ವಂಚನೆಗೆ ಒಳಗಾಗದೆ ಇರುವಂತೆ ಮಾಡುವುದು ಅತಿ ತುರ್ತಾದ ಕೆಲಸ.
ಮನುಸ್ಮೃತಿಯು ಪುರುಷರು ಹೆಣ್ಣುಮಕ್ಕಳನ್ನು ಅಧೀನದಲ್ಲಿ ಇಟ್ಟುಕೊಳ್ಳಬೇಕು ಎಂದು ಸಾರಿದೆ. ಮಹಿಳೆಯರನ್ನು ಸಂಸ್ಕೃತಿಯ ಹೆಸರಲ್ಲಿಅಂಧತೆಗೆ ದೂಡುತ್ತಿದ್ದಾರೆ. ದೇವನಿಲ್ಲದ ಜಾಗವಿಲ್ಲ, ದೇವರಿಲ್ಲದ ಜೀವವಿಲ್ಲ. ಇದರಿಂದಾಗಿ ಆರ್.ಎಸ್.ಎಸ್. ಹೇಳುವ ಹಿಂದುತ್ವ ಮಾನವ ವಿರೋಧಿ. ಇಂತಹ ಮೌಢ್ಯಕ್ಕೆ, ಹಿಂದುತ್ವಕ್ಕೆ ನಾವು ಧಿಕ್ಕಾರ ಹೇಳಲೇಬೇಕಾಗುತ್ತದೆ. ಮೌಢ್ಯದಿಂದ ಮುಕ್ತಿಯಾಗುವ ಕಡೆ ಸಾಗಲು “ದೇವನೊಬ್ಬ ರೂಪ ಹಲವು, ಬಣ್ಣ ಹಲವು ಆತ್ಮ ಒಂದೇ” ಎಂಬ ಆಧ್ಯಾತ್ಮಿಕ ನೆಲೆಯ ಗ್ರಾಮೀಣ ಬದುಕು ನಮಗೆಲ್ಲ ಮಾದರಿ. ವೈದಿಕದ ಶ್ರೇಣೀಕರಣದಿಂದ ಮುಕ್ತರಾಗಲು ಹಿಂದುಳಿದ, ಶೂದ್ರ ಜನರೆಲ್ಲಾ ಒಂದಾಗುವ ಅಗತ್ಯ ಇಂದು ಹೆಚ್ಚಾಗಿದೆ. ಸರ್ವಧರ್ಮಗಳ ಶಾಂತಿಯ ಬೀಡಾಗಿಸಲು ನಾವೆಲ್ಲ ಒಂದಾಗುವ ಕಡೆ ಚಲಿಸೋಣ.
-ಕೆ ಸುನಂದಮ್ಮ, ಹಿರಿಯ ಲೇಖಕಿ
RSS ಒಂದು ನೋಂದಾಯಿತ ಸಂಘಟನೆ ಅಲ್ಲ
RSS ಒಂದು ನೋಂದಾಯಿತ ಸಂಘಟನೆ ಅಲ್ಲ, ಆ ಸಂಘಟನೆ ಭಾರತದ ಸಂವಿಧಾನ, ಜಾತ್ಯತೀತತೆ, ಸರ್ವಧರ್ಮ ಸಮಭಾವ ಇತ್ಯಾದಿಗಳನ್ನು ಎತ್ತಿ ಹಿಡಿಯುವ ಚಟುವಟಿಕೆ ನಡೆಸುವುದಿಲ್ಲ. ವಿಶ್ವ ಮೆಚ್ಚಿದ ಮಹಾತ್ಮ ಗಾಂಧಿಯವರ ಫೋಟೊವನ್ನೂ ಬಳಸುವುದಿಲ್ಲ. ರಾಜಕೀಯೇತರ ಎಂದು ಹೇಳಿಕೊಂಡರೂ ಬಿಜೆಪಿಯನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡಿದೆ. ರಾಷ್ಟ್ರಧ್ವಜಕ್ಕೂ ಸರಿಯಾದ ಗೌರವ ನೀಡುವುದಿಲ್ಲ. ಕಲ್ಲಡ್ಕ ಪ್ರಭಾಕರ ಭಟ್ ಈ ದೇಶದಲ್ಲಿ ವಾಸಿಸುವ ಎಲ್ಲಾ ಮುಸ್ಲಿಮರು ಭಯೋತ್ಪಾದಕರು ಹಾಗೂ ಕ್ರಿಶ್ಚಿಯನ್ನರು ಮತಾಂತರಿಗಳು ಎಂಬ ಅರ್ಥ ನೀಡುವ ಅನೇಕ ಭಾಷಣಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಿದ್ದಾರೆ. ಈ ಭಟ್ರು ಆರ್ ಎಸ್ ಎಸ್ ನ ಹಿರಿಯ ಮುಂದಾಳು ಎಂಬ ಏಕ ಕಾರಣವೂ ಆರ್ ಎಸ್ ಎಸ್ ನಿಷೇಧಿಸಲು ಸಾಕು.
-ಅಮೃತ್ ಶೆಣೈ, ಉಡುಪಿ
ಜನ ಸಾಮಾನ್ಯರಲ್ಲಿ ವೈಚಾರಿಕ ಜಾಗೃತಿ
ಶಾಲೆ, ಕಾಲೇಜುಗಳ ಮೈದಾನ ಸೇರಿದಂತೆ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಯಾವುದೇ ಕೋಮುವಾದಿ, ಫ್ಯಾಸಿಸ್ಟ್ ಸಂಘಟನೆಯನ್ನು ಕೇವಲ ನಿಷೇಧದಿಂದ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಯಾವುದೇ ನೋಂದಣಿ ಇಲ್ಲದ ಲೆಕ್ಕಪತ್ರ ಬಹಿರಂಗಪಡಿಸದ ಫ್ಯಾಸಿಸ್ಟ್ ಸಂಘಟನೆಯ ವಿರುದ್ಧ ಅದರ ರಕ್ತಪಾತದ ಸಿದ್ಧಾಂತದ ಬಗ್ಗೆ ಜನ ಸಾಮಾನ್ಯರಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಕೆಲಸ ಮೊದಲು ಆಗಬೇಕಾಗಿದೆ. ತನ್ನ ಶಾಲೆಗಳ ಮೂಲಕ ಮಕ್ಕಳ ಮಿದುಳಿಗೆ ವಿಷ ತುಂಬುವ ಈ ಸಂಘಟನೆಯ ಅಪಾಯಕಾರಿ ಚಟುವಟಿಕೆಗಳ ಬಗ್ಗೆ ಜನರಿಗೆ ತಿಳಿಸಿ ಹೇಳಬೇಕು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ಸಂಘದ ಸ್ವಯಂ ಸೇವಕರಿದ್ದಾರೆ. ಪೊಲೀಸ್ ಮತ್ತು ಶಿಕ್ಷಣ ಇಲಾಖೆಗಳಲ್ಲೂ ಇದ್ದಾರೆ. ಸರ್ಕಾರ ಅಂಥವರ ಮೇಲೆ ಕಣ್ಣಿಡಬೇಕು. ನಿಷೇಧದ ಜೊತೆಗೆ ಸೈದ್ಧಾಂತಿಕ ಸಮರವೂ ಇಂದಿನ ತುರ್ತು ಅಗತ್ಯವಾಗಿದೆ.
-ಸನತ್ ಕುಮಾರ್ ಬೆಳಗಲಿ, ಪತ್ರಕರ್ತ
ಆರೆಸ್ಸೆಸ್ ಸಮಾಜವನ್ನು ವಿಭಜಿಸುತ್ತಾ ಬಂದಿದೆ
ಆರ್ ಎಸ್ಎಸ್ ಪ್ರಾರಂಭದಿಂದ ಕೋಮುವಾದದ ಮೂಲಕ ನಮ್ಮ ಸಮ್ಮಿಳಿತ ಸಂಸ್ಕೃತಿಯ ಸಮಾಜವನ್ನು ವಿಭಜಿಸುತ್ತ ಬಂದಿದೆ. ಎಳವೆಯಲ್ಲೇ ಮಕ್ಕಳ ನಡುವೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮತೀಯ ಅಸಹನೆಯನ್ನು ಉತ್ಪಾದಿಸುವ ಅಜೆಂಡಾವನ್ನು ಅದು ಜಾರಿ ಮಾಡುತ್ತ ಬಂದಿದೆ. ಹೀಗಾಗಿ ಸರ್ಕಾರಿ ಸ್ಥಳಗಳಲ್ಲಿ ಈ ಸಂಸ್ಥೆ ಕಾರ್ಯಕ್ರಮಗಳನ್ನು ನಡೆಸದಂತೆ ರಾಜ್ಯ ಸರ್ಕಾರ ಯೋಜಿಸಿರುವ ಈ ನಿಷೇಧ ಕ್ರಮ ಸ್ವಾಗತಾರ್ಹ.
-ಮ ಶ್ರೀ ಮುರಳಿ ಕೃಷ್ಣ, ಸಾಮಾಜಿಕ ಕಾರ್ಯಕರ್ತ
ಖರ್ಗೆ ಅವರ ಹಕ್ಕೊತ್ತಾಯವನ್ನು ಬೆಂಬಲಿಸಬೇಕು
ಐವತ್ತು ವರ್ಷಗಳ ಹಿಂದೆ ಇನ್ನೂ ಹೆಜ್ಜೆಗಳನ್ನು ಊರುತ್ತಿರುವ ದಿನಗಳಲ್ಲಿಯೇ ದೇಶದಲ್ಲಿ ಮತ ಧರ್ಮಾಂಧತೆಯನ್ನು ಬಿತ್ತಿ ಬೆಳೆ ತೆಗೆದ ಆರೆಸ್ಸೆಸ್ ಇಂದು ‘ಡೀಪ್ ನೇಶನ್’ ಆಗಿ ಬೆಳೆದಿದೆ, ಜೊತೆಗೆ ’ಶ್ಯಾಡೋ ಸರ್ಕಾರ’ವೂ ಹೌದು. ಇಂತಹ ದೈತ್ಯ ಪ್ರಾಬಲ್ಯದ ಜೊತೆಗೆ ಮುಖಾಮುಖಿ ಆಗಬೇಕೆಂದರೆ ಯಾವುದೇ ರೀತಿಯ ಮೃದು ಧೋರಣೆ ಅದರ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ‘ಸರ್ಕಾರ, ಮುಜರಾಯಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಅನುಮತಿ ಕೊಡಬಾರದು’ ಎನ್ನುವ ಹಕ್ಕೊತ್ತಾಯವನ್ನು ಬೆಂಬಲಿಸಬೇಕು. ಸರ್ಕಾರವೂ ಸಹ ಈ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳಬೇಕ
-ಬಿ. ಶ್ರೀಪಾದ ಭಟ್, ಸಾಮಾಜಿಕ ಕಾರ್ಯಕರ್ತ
ಮಹಿಳೆಯರನ್ನು ಗೌರವಿಸದ ಆರೆಸ್ಸೆಸ್‌ಗೆ ಕಡಿವಾಣ ಅಗತ್ಯ
ನೋಂದಣಿಯಾಗದ, ಮಹಿಳೆಯರನ್ನು ಹೊರಗಿಟ್ಟು ನೂರು ವರ್ಷಗಳಿಂದ ನಡೆಯುತ್ತಿರುವ ಸಂಘಟನೆ ಹೇಗೆ ತಾನೆ ಭಾರತದ ಇತಿಹಾಸವನ್ನು ಸೇರೀತು? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ, ಅಪ್ರತಿಮ ಮಹಿಳೆಯರನ್ನು ಗುರುತಿಸದ, ಗೌರವಿಸದ ಗುಂಪೊಂದು ಭಾರತವನ್ನು ಹೇಗೆ ಪ್ರತಿನಿಧಿಸುತ್ತದೆ? ಹೆಣ್ಣುಮಕ್ಕಳಿಗೆ ಸ್ಥಾನಮಾನ ನೀಡಿದ ಸಂಘಟನೆಗೆ ನನ್ನ ಧಿಕ್ಕಾರ. ದುರುದ್ದೇಶದ ಅಜೆಂಡಾ ಇಟ್ಟುಕೊಂಡು, ದೇಶಪ್ರೇಮದ ಹೆಸರಿನಲ್ಲಿ ವಿಷಬೀಜ ಬಿತ್ತುವ ಈ ಗುಂಪಿಗೆ ನಿಯಂತ್ರಣದ ಕಡಿವಾಣ ಅತ್ಯಗತ್ಯ. ಇದೀಗ ಆ ಸಮಯ ಬಂದಿದೆ.
-ಸುಮತಿ ಡಿ ಜಿ, ಸಾಮಾಜಿಕ ಕಾರ್ಯಕರ್ತೆ
ಆರೆಸ್ಸೆಸ್‌ಗೆ ಕಡಿವಾಣ ಹಾಕದಿದ್ದರೆ ದೇಶ ಮನುವಾದಿ ನಾಡಾಗಲಿದೆ
ಭಾರತದ ಸಾಂವಿಧಾನಿಕ ತತ್ವ, ಮೌಲ್ಯಗಳಿಗೆ ವಿರುದ್ಧವಾದ ಸಿದ್ಧಾಂತವನ್ನು ಪ್ರತಿನಿಧಿಸುವ ಸಂಘಟನೆಯೇ RSS. ಅಂಬೇಡ್ಕರ್, ಗಾಂಧಿ, ನೆಹರು ಮತ್ತು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಕಟ್ಟಿದ ‘ವೈವಿಧ್ಯತೆಯಲ್ಲಿ ಏಕತೆ, ಜಾತ್ಯತೀತ, ಧರ್ಮ ನಿರಪೇಕ್ಷ, ಪ್ರಗತಿಪರ ಚಿಂತನೆಗಳ ಭಾರತ’ ಎಂಬ ಭಾರತದ ಪರಿಕಲ್ಪನೆಗೆ RSS ನ ತತ್ತ್ವವು ಮೂಲಭೂತವಾಗಿ ವಿರೋಧಿ. ದೇಶದೊಳಗೆ ಗಾಂಧಿಯನ್ನು ಕೊಂದವರನ್ನು ಸಂರಕ್ಷಿಸುತ್ತ, ದೇಶದ ಹೊರಗೆ ಗಾಂಧಿ ಚಿತ್ರಕ್ಕೆ ಮಾಲೆ ಹಾಕುವ ಅವರ ನಾಟಕ ಕಪಟದ ಪ್ರತೀಕ. ಹಿಂದೂ ರಕ್ಷಕರು ಎನ್ನುತ್ತಾರೆ, ಅದೇ ದಲಿತ ಸಮಾಜಕ್ಕೆ ಸೇರಿದ ನ್ಯಾಯಮೂರ್ತಿಗಳಿಗೆ ಚಪ್ಪಲಿ ಎಸೆದವರನ್ನೂ ಬೆಂಬಲಿಸುತ್ತಾರೆ. ಮನುವಾದಿ ಚಿಂತನೆಗಳನ್ನು ಪುನರುಜ್ಜೀವನಗೊಳಿಸಲು ಬಯಸುವ ಈ ಸಂಘಟನೆಯಲ್ಲಿ ಮಹಿಳೆಯರಿಗೂ ಪ್ರತಿನಿಧಿತ್ವವಿಲ್ಲ, ಇವರು ಪ್ರಗತಿಪರ, ವೈಚಾರಿಕ ಚಿಂತನೆಗಳ ವಿರೋಧಿಗಳೂ ಹೌದು. ದ್ವೇಷದಿಂದ ಪೋಷಿತ ಈ ಸಂಘಟನೆ ದೇಶಭಕ್ತಿಯನ್ನು ಬೋಧಿಸಲಾರದು – ಅದು ಕೇವಲ ವಿಭಜನೆ, ದ್ವೇಷ, ಕೋಮು ಗಲಭೆಗಳನ್ನೇ ಪ್ರತಿಪಾದಿಸುತ್ತದೆ. ಇಂತಹ ಸಂಘಟನೆಗೆ ಕಡಿವಾಣ ಹಾಕದಿದ್ದರೆ ದೇಶವನ್ನು ಮನುವಾದಿ ನಾಡಾಗಿ, ದ್ವೇಷದ ಬೀಡಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ. ಭಾರತ ಪ್ರಗತಿಪರ ರಾಷ್ಟವಾಗಬೇಕಾದರೆ ಇಂತಹ ಸಂಘಟನೆಗೆ ಕಡಿವಾಣ ಹಾಕಲೇಬೇಕು.
-ಸುಚಿತ್ರಾ ಎಸ್ ಎ, ಜಾಗೃತ ಕರ್ನಾಟಕ
ಆರೆಸ್ಸೆಸ್ ಶೂದ್ರರನ್ನು ವಂಚಿಸುತ್ತಿದೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಾಯಿಸದೆ ಇರುವ ಹಿಂದುತ್ವದ ಮುಖವಾಡದಲ್ಲಿ ಬ್ರಾಹ್ಮಣರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಧಿಕಾರದ ಹಿತಾಸಕ್ತಿ ಕಾಯುವ ಒಂದು ಉಗ್ರ ಬ್ರಾಹ್ಮಣವಾದಿ ಸಂಸ್ಥೆ. ಅದು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ದೇಶದ ಆಂತರಿಕ ಸುರಕ್ಷತೆಗೆ ಅಪಾಯಕಾರಿಯಾದ ಕೃತ್ಯಗಳನ್ನು ಮಾಡುತ್ತಾ ಬಂದಿದೆ. ಅಂದರ ಸಂರಚನೆಯಲ್ಲಿ ಅತ್ಯುನ್ನತ ಸ್ಥಾನ ಬ್ರಾಹ್ಮಣರಿಗೆ ಮೀಸಲು. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರಿಗೆ ನಿಷ್ಠವಾಗಿದ್ದ ಈ ಸಂಸ್ಥೆ ಮೇಲ್ನೋಟಕ್ಕೆ ಮುಸ್ಲಿಮರ ವಿರುದ್ಧ ಎನ್ನುವಂತೆ ವರ್ತಿಸಿದರೂ, ಅದು ಮುಸ್ಲಿಮ್ ದ್ವೇಷವನ್ನು ಮಿದುಳಿಗೆ ತುಂಬಿ ಸಾಂವಿಧಾನಿಕ ಸೌಲಭ್ಯಗಳಿಂದ ಶೂದ್ರರನ್ನು ವಂಚಿಸುತ್ತಿದೆ. ಸಂಘವು ದೇಶದ ಬಹುತ್ವ, ಜನತಂತ್ರ, ಸಂವಿಧಾನ, ರಾಷ್ಟ್ರಪಿತ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸೌಹಾರ್ದತೆಯ ಮೊದಲ ಶತ್ರು.
-ಡಾ. ಜೆ. ಎಸ್. ಪಾಟೀಲ, ಬಸವ ತತ್ವ ಪ್ರಚಾರಕ
ಅಭಿನಂದನೀಯ ನಡೆ
ಹಿಂದೂ ಮಕ್ಕಳ ಬದುಕಿನ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲದ, ರೈತರ, ದಲಿತರ, ಕಾರ್ಮಿಕರ ಕಲ್ಯಾಣಕ್ಕಾಗಿ ಎಂದಿಗೂ ತುಟಿಬಿಚ್ಚದ, ಆರೆಸ್ಸೆಸ್ ಅನ್ನು ಸರ್ಕಾರಿ ಶಾಲೆ ಕಾಲೇಜು ಕ್ಯಾಂಪಸ್‌ನಲ್ಲಿ ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರದ ಚಿಂತನೆ ನಿಜಕ್ಕೂ ಅಭಿನಂದನೀಯ.
-ಆನೂಡಿ ನಾಗರಾಜ್, ಲೇಖಕರು ಗೌರಿಬಿದನೂರು





