ಹಾಸನ ಮಣ್ಣಿನ ಹೆಣ್ಣು ಬೇರುಗಳು | ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

‘ಪ್ರಪಂಚದ ಅತಿ ಹೆಚ್ಚು ಸಾಮೂಹಿಕ ಆರೋಗ್ಯ ಕಾರ್ಯಕರ್ತೆಯರು ಇರುವ ಯೋಜನೆ’ ಎಂಬ ಹೆಗ್ಗಳಿಕೆಯ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ‘ಸ್ಪಷ್ಟವಾಗಿ ಕಾಣುವ ಏಕೈಕ ಸಾಧನೆ’, ‘ಆಧಾರಸ್ತಂಭ’ವೆಂದರೆ ಆಶಾ ಕಾರ್ಯಕರ್ತೆಯರು ಎಂದು ಸರ್ಕಾರದ ಯೋಜನೆಯ ಕೈಪಿಡಿಯಲ್ಲಿ ದಾಖಲಿಸಲಾಗಿದೆ. ಇದೆಲ್ಲವೂ ನಿಜ ಎಂಬುದು ಹೆಮ್ಮೆಯ ಸಂಗತಿ. ಇವರ ಸೇವೆಯು ಬಡಜನತೆಯ ಆರೋಗ್ಯ ಕ್ಷೇತ್ರಕ್ಕೆ ಬಹುಮುಖ್ಯವಾಗಿ ಅವಶ್ಯಕತೆ ಇದೆ. ಕಳೆದ ಒಂದೂವರೆ ದಶಕಗಳಿಂದ ಆರೋಗ್ಯ ಸೂಚಿಮಾಪಕಗಳು ಧನಾತ್ಮಕವಾಗಿ ವೇಗವಾಗಿ ಏರಿಕೆ ಆಗಿರುವುದಕ್ಕೆ ಆಶಾಗಳೇ ಕಾರಣವೆಂಬುದು ಇಲಾಖಾ ವರದಿಗಳಿಂದ ಸುಸ್ಪಷ್ಟ.

ಪ್ರತಿದಿನ ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ, ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಾ, ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿ ಕುರಿತು- ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಗೆ ವಿಷಮ ಪರಿಸ್ಥಿತಿಗಳಲ್ಲಿ ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಜನಸಮುದಾಯಕ್ಕೂ ಆರೋಗ್ಯ ಇಲಾಖೆಗೂ ನಡುವಿನ ಸೇತುವೆಯಾಗಿ ದುಡಿಯುತ್ತಿರುವ ಇವರು ನಿಜಕ್ಕೂ ಗ್ರಾಮದ ಆರೋಗ್ಯ ಮಾತೆಯರು.

ಇದನ್ನು ಓದಿದ್ದೀರಾ?: ಸಮುದಾಯದ ಜೀವನಾಡಿ ಅಂಗನವಾಡಿ ತಾಯಂದಿರು 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೇಶದ ಆಶಾ ಕಾರ್ಯಕರ್ತೆಯರು ಕೋವಿಡ್-19 ಸಂದರ್ಭದಲ್ಲಿ ಸಲ್ಲಿಸಿದ ಸೇವೆಗೆ ವಿಶ್ವ ಆರೋಗ್ಯ ಸಂಸ್ಥೆ ”ಜಾಗತಿಕ ಆರೋಗ್ಯ ನಾಯಕರು” ಎನ್ನುವ ಬಿರುದು ನೀಡಿ ಸನ್ಮಾನಿಸಿದೆ. ರಾಜ್ಯದ ಆಶಾ ಕಾರ್ಯಕರ್ತೆಯರು ರಾಷ್ಟ್ರದಲ್ಲಿಯೇ ಅತ್ಯುತ್ತಮ ಸೇವೆ ಸಲ್ಲಿಸಿದ ಕೀರ್ತಿಗೆ ಕೇಂದ್ರದ ಪ್ರಶಂಸನಾ ಪತ್ರ ಸಿಕ್ಕಿರುವುದು ಹೆಮ್ಮೆಯ ಮನ್ನಣೆಯೇ ಸರಿ. ತಳಹಂತದಲ್ಲಿ ಮನೆ ಮನೆಗೂ ಆರೋಗ್ಯ ಸೇವೆಯನ್ನು ನೀಡುವ ನಿರಂತರ ಸೇವಾಕಾರ್ಯವೇ ಆಶಾಗಳ ಮನೋಧರ್ಮವಾಗಿಬಿಟ್ಟಿದೆ ಎಂದರೆ ತಪ್ಪಾಗಲಾರದು.

ಆಶಾ ಗ್ರಾಮಗಳಲ್ಲಿ ತಂದ ಬದಲಾವಣೆ: ಆಶಾಗಳು ಗ್ರಾಮೀಣಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ ಈ 15-16 ವರ್ಷಗಳಲ್ಲಿ ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಹೆಚ್ಚಿದೆ. ಸುರಕ್ಷಿತ ಹೆರಿಗೆಯಿಂದ ಗರ್ಭಿಣಿ ಹಾಗೂ ಶಿಶು ಮರಣ ಪ್ರಮಾಣ ಗಣನೀಯವಾಗಿ ಕುಸಿದಿದೆ. ಜೀವ ಉಳಿಸುವ ಇವರ ಕೆಲಸಕ್ಕೆ ಬೆಲೆಕಟ್ಟಲು ನಿಜಕ್ಕೂ ಸಾಧ್ಯವಿಲ್ಲ. ಜನರಲ್ಲಿ ಗ್ರಾಮ ಹಾಗೂ ವೈಯಕ್ತಿಕ ನೈರ್ಮಲ್ಯದ ಕುರಿತು ಹೆಚ್ಚಿನ ಅರಿವು ಮೂಡಿದೆ. ಸಾಂಕ್ರಾಮಿಕ ರೋಗಗಳಿಗೆ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಬಾಣಂತಿ ಮತ್ತು ಮಗುವಿನ ಸುರಕ್ಷತೆ, ಲಸಿಕಾ ಕಾರ್ಯಕ್ರಮಗಳ ವಿವರ, ಅಪೌಷ್ಟಿಕತೆಗೆ ಚಿಕಿತ್ಸೆಯ ತಿಳಿವಳಿಕೆ ಜನರಲ್ಲಿ ತಕ್ಷಣಕ್ಕೆ ಗೋಚರಿಸುವಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಇದಿವರ ಸೇವೆಯ ಮಹತ್ತತೆಯನ್ನು ತೋರಿಸುತ್ತದೆ.

ಇದನ್ನು ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ 

ಆರೋಗ್ಯ ಸೇವೆಯ ಜೊತೆಗೆ ಬಾಲ್ಯವಿವಾಹದ ದುಷ್ಪರಿಣಾಮ, ಶಿಕ್ಷಣದ ಅವಶ್ಯಕತೆ, ಮದ್ಯಪಾನದ ದುಷ್ಪರಿಣಾಮ, ಹೆಣ್ಣು ಭ್ರೂಣಹತ್ಯೆ ಪಿಡುಗು… ಹೀಗೆ ಸಾಮಾಜಿಕ ಆರೋಗ್ಯದ ಕುರಿತೂ ಆಶಾ ತಾಯಂದಿರು ಜಾಗೃತಿ ಮೂಡಿಸುತ್ತಿದ್ದಾರೆ. ಸೇವಾ ಮನೋಭಾವದಿಂದ, ಗಾಢ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ನಿಗದಿತ ಚೌಕಟ್ಟು ಮೀರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಹಾಸನದ ಆಶಾ ಹಸನ್ಮುಖಿಗಳು: ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನೂ ಸೇರಿ ಸುಮಾರು 1450 ಆಶಾ ಕಾರ್ಯಕರ್ತೆಯರು ಇದ್ದಾರೆ. ಇಲಾಖಾ ನಿಯಮದಂತೆ ಗ್ರಾಮ ಪಂಚಾಯತಿಯಿಂದ ಆಯ್ಕೆಯಾಗಿ, ಪ್ರತೀ ಗ್ರಾಮದಲ್ಲಿ ಸುಮಾರು 1000 ಜನಸಂಖ್ಯೆಗೆ, ನಗರದ ಕೊಳಚೆ ಪ್ರದೇಶಗಳಲ್ಲಿ 2500 ಜನಸಂಖ್ಯೆಗೆ ಒಬ್ಬ ಆಶಾಳಂತೆ ಅದೇ ಗ್ರಾಮದ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿಯಂತೂ ಇವರ ಸೇವೆಗೆ ಗೌರವಿಸದ ಜನರೇ ಇಲ್ಲ ಎನ್ನಬಹುದು. ಇವರು ಜನತೆಯ ರಕ್ಷಣೆಗೆ ಮುಂದಳ ಯೋಧೆಯರಂತೆ ನಿಂತದ್ದನ್ನು ನೋಡಿ, ಇವರ ರಕ್ಷಣೆಗೆ ಅದೆಷ್ಟೋ ಹಾಸನದ ಸಾಮಾಜಿಕ ಕಳಕಳಿಯ ಜನ ಇವರಿಗೆ ಜೀವವಿಮೆ ಮಾಡಿಸಿದ್ದಾರೆ. ಆಹಾರ ಸಾಮಗ್ರಿಗಳು, ಆರೋಗ್ಯ ರಕ್ಷಣೆಯ ವಸ್ತುಗಳನ್ನು ನೀಡಿದ್ದಾರೆ. ಜೊತೆಗೆ ಇವರಿಗೆ ವಿವಿಧ ಸಂಘ-ಸಂಸ್ಥೆಗಳು ಸನ್ಮಾನ ಮಾಡಿದ್ದಾರೆ. ಆಶಾಗಳು ನಿಜಕ್ಕೂ ಅವರ ಅಕ್ಕರೆಗೆ ಧನ್ಯರಾಗಿದ್ದಾರೆ.

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ಜೀವವನ್ನೇ ಪಣಕ್ಕಿಟ್ಟು ಸಲ್ಲಿಸುತ್ತಿರುವ ಸೇವೆ: ಮತ್ತೊಂದೆಡೆ, ಈ ಕೆಲಸ ನಿರ್ವಹಿಸುತ್ತಿರುವಾಗ ಆಶಾಗಳು ಹಲವು ಬಗೆಯ ದೌರ್ಜನ್ಯಗಳಿಗೆ, ಕಿರುಕುಳಗಳಿಗೆ ಒಳಗಾಗುತ್ತಾರೆ. ಯಾವುದೇ ರಕ್ಷಣೆ ಇಲ್ಲದೇ ಆತಂಕ, ಭಯದಲ್ಲಿ ಇವರು ಕೆಲಸ ಮಾಡಬೇಕಾಗಿದೆ. ಮತ್ತೊಂದೆಡೆ ಸಮಾಜದಲ್ಲಿಯ ಕಲುಷಿತ ವಾತಾವರಣಕ್ಕೂ ಬಲಿಯಾಗುವಂತಹ ಪರಿಸ್ಥಿತಿ ಇರುತ್ತದೆ. ಇವನ್ನೂ ಮೀರಿ ಸೇವೆ ಸಲ್ಲಿಸಬೇಕಾಗಿದೆ. ಇದಕ್ಕೆ ಕೆಲ ಘಟನೆಗಳು ಸಾಕ್ಷಿಯಾಗಿವೆ. ಒಬ್ಬ ಆಶಾ ಗ್ರಾಮದಲ್ಲಿ ಬಾಲ್ಯವಿವಾಹಕ್ಕೆ ಮುಂದಾಗುವ ಪೋಷಕರಿಗೆ ತಿಳಿ ಹೇಳಿರುತ್ತಾಳೆ. ಅದಕ್ಕಾಗಿ ಆಕೆಯನ್ನು ಮನೆಯ ಮುಂದಿನ ವಿದ್ಯುತ್ ಕಂಬಕ್ಕೆ ಕಟ್ಟಿ, ಹೊಡೆದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಗಾಯಗಳನ್ನು ಮಾಡಿ ದೌರ್ಜನ್ಯವೆಸಗಿರುತ್ತಾರೆ. ಮತ್ತೊಂದು ಗ್ರಾಮದಲ್ಲಿ ಅನರ್ಹ ವೈದ್ಯರ ಹಾವಳಿ ತಪ್ಪಿಸಲು ಪ್ರಯತ್ನಿಸಿದ ಆಶಾಳನ್ನು ಊರಿಂದ ಹೊರ ಹಾಕಲು ಕೆಲ ಉದ್ದೇಶಿತ ಜನ ತೀರ್ಮಾನಿಸಿ, ಆಕೆ ಮೇಲೆ ದೌರ್ಜನ್ಯವೆಸಗಿರುತ್ತಾರೆ. ಇಂತಹವುಗಳ ಮಧ್ಯೆಯೂ ಮಧ್ಯ ರಾತ್ರಿ ಯಾವುದೇ ಸಮಯದಲ್ಲಿ, ಹೆರಿಗೆ ನೋವು ಕಂಡ ಗರ್ಭಿಣಿಯ ಜೊತೆ ಕೂಡಲೇ 108 ತುರ್ತು ಆರೋಗ್ಯ ಸೇವೆಗೆ ಫೋನ್ ಮಾಡಿ ಅಂಬ್ಯುಲೆನ್ಸ್‌ನೊಂದಿಗೆ ಹೊರಡುವ ಆಶಾಗಳ ಧೈರ್ಯ ಮೆಚ್ಚುವಂತಹುದೇ. ಆಶಾಗಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುವ ಪುರುಷರಿಗೆ ಸರಿಯಾಗಿ ಬುದ್ಧಿ ಹೇಳಲಾಗಿದೆ. ಕೆಲ ಆಶಾಗಳನ್ನು ಇವೆಲ್ಲ ಅಧೀರರನ್ನಾಗಿ ಮಾಡಿದೆ. ಪೊಲೀಸರೂ ಇವರಿಗೆ ನೆರವಿಗೆ ನಿಲ್ಲಬೇಕಿದೆ.

ಆಶಾ ತಮ್ಮ ಹಳ್ಳಿಯಿಂದ ವಿವಿಧ ಆರೋಗ್ಯ ಕೇಂದ್ರಗಳಿಗೆ ಹೋಗಬೇಕಾದ ಸಂದರ್ಭದಲ್ಲಿ ದ್ವಿಚಕ್ರ ವಾಹನ, ಆಟೋ, ಇನ್ನಿತರ ವಾಹನಗಳಲ್ಲಿ ಸಂಚರಿಸುವಂತಹ ಸಂದರ್ಭಗಳಲ್ಲಿ ಅಪಘಾತಗಳಾಗಿವೆ. ಅಪಘಾತದಲ್ಲಿ ಸಾವು, ತೀವ್ರ ಗಾಯಗಳು ಸಂಭವಿಸಿವೆ. ಇಂತವರಿಗೆ ಇಲ್ಲಿಯವರೆಗೆ ಇಲಾಖೆಯಿಂದ ಬಿಡಿಗಾಸಿನ ಸಹಾಯ ನೀಡದಿರುವುದು ಸರ್ಕಾರದ ಬಳಸಿ ಬಿಸಾಡುವ ಸಂಸ್ಕೃತಿಯನ್ನು ತೋರಿಸುತ್ತದೆ. ಪರ್ಯಾಯವಾಗಿ ಆಶಾಸಂಘಟನೆಯಿಂದ ಇತರೆ ಆಶಾ ಸೋದರಿಯರು ಬೆಂಬಲ, ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ. ಹೀಗೇ ಹತ್ತು ಹಲವು…

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಕರ್ನಾಟಕದಲ್ಲಿ ಆಶಾ ಹೋರಾಟದ ಹಾದಿ: ಆರೋಗ್ಯ ಕ್ಷೇತ್ರದಲ್ಲಿ ಇಷ್ಟೆಲ್ಲಾ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು ತಮ್ಮ ಹಕ್ಕುಗಳಿಗಾಗಿ ದಶಕಗಳಿಂದ ಬೀದಿಗಿಳಿದು ಹೋರಾಡುತ್ತಾ ಬಂದಿದ್ದಾರೆ. ಆರಂಭದ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಇಡೀ ತಿಂಗಳಿಗೆ ಕೇವಲ 50ರಿಂದ 500 ರೂ.ಗಳು ಪಡೆದಿದ್ದಾರೆ. ‘ಪ್ರೋತ್ಸಾಹಧನ’ ಆಧರಿತ ಕೆಲಸವಾದ್ದರಿಂದ ಪ್ರತಿಯೊಂದು ಚಟುವಟಿಕೆಗಳಿಗೂ ಇಂತಿಷ್ಟು ಹಣ ಎಂದು ಬಿಡಿ ಬಿಡಿಯಾಗಿ ಕೊಡುತ್ತಿದ್ದರು. ದಿನದಲ್ಲಿ ಕೆಲ ಗಂಟೆ ಬಿಡುವು ಮಾಡಿಕೊಂಡು ಕೆಲಸ ಮಾಡಿ ಎಂದು ಹೇಳಿ ಕೆಲಸಕ್ಕೆ ಸೇರಿಸಿಕೊಂಡು, ಮುಂದೆ ಕೆಲಸದ ಅವಧಿ ಹಾಗೂ ಚಟುವಟಿಕೆಗಳು ಹೆಚ್ಚಾದಾಗ್ಯೂ ಕೈಗೆ ಮಾತ್ರ ಬಿಡಿಗಾಸು ಬರುತ್ತಿದ್ದರಿಂದ ಆಶಾ ಕಾರ್ಯಕರ್ತೆಯರು ‘ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ'(ಸಂಯೋಜನೆ:ಎಐಯುಟಿಯುಸಿ)ದ ನೇತೃತ್ವದಲ್ಲಿ ಒಗ್ಗೂಡಿದರು.

15 ವರ್ಷಗಳ ಹಿಂದೆ ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತೆಯರನ್ನು ಒಗ್ಗೂಡಿಸುವಲ್ಲಿ ಸಂಘಟನಾಕಾರರು ಹಾಕಿದ ಅಗಾಧವಾದ ಪರಿಶ್ರಮ ಕಾಲಕ್ರಮೇಣ ಫಲ ನೀಡಿತು. ವೈಯಕ್ತಿಕವಾಗಿ ಎಷ್ಟೇ ಧ್ವನಿಯೆತ್ತಿದ್ದರೂ ಸಾಮಾನ್ಯ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಸಾಧ್ಯವಿಲ್ಲ, ಎಲ್ಲರ ಹಿತವನ್ನು ಕಾಪಾಡಲು ಸಂಘ ಕಟ್ಟಿ ಬೆಳೆಸುವುದು ಅನಿವಾರ್ಯ ಎಂಬ ಐತಿಹಾಸಿಕ ಸತ್ಯ ಆಶಾ ಕಾರ್ಯಕರ್ತೆಯರಿಗೂ ಮನವರಿಕೆಯಾದ್ದರಿಂದ ಅವರು ಬೇಗ ಸ್ಪಂದಿಸಿದರು.

ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

ಹೋರಾಟಗಳಿಗೆ ಸಿಕ್ಕ ಜಯ: 2008ರಲ್ಲಿ ಆಶಾ ಕಾರ್ಯಕರ್ತೆಯರಿಗೆ ಈಗಿರುವ ಸಮವಸ್ತ್ರ, ಐಡಿಕಾರ್ಡ್, ಮಾಸಿಕ ಸಭೆ, ನಿಗದಿತ ಗೌರವಧನ ಯಾವುದೊಂದು ಸಹ ಇರಲಿಲ್ಲ. 2009ರಲ್ಲಿ ಮೊದಲ ರಾಜ್ಯ ಮಟ್ಟದ ಹೋರಾಟ ನಡೆದಿದ್ದು ಅವುಗಳಿಗಾಗಿ. 2013ರಲ್ಲಿ ಬೃಹತ್ ರಾಜ್ಯ ಮಟ್ಟದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಮ್ಯಾಚಿಂಗ್ ಗ್ರ‍್ಯಾಂಟ್ಸ್ ಘೋಷಿಸಿತು. ‘ನಿಗದಿತ ಮಾಸಿಕ ಗೌರವಧನ’ ಹಾಗೂ ಇತರೆ ಬೇಡಿಕೆಗಳಿಗಾಗಿ ಹಂತ ಹಂತವಾಗಿ ಹೋರಾಟಗಳು ನಡೆದವು. 2016ರಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಕಾರ್ಯಕರ್ತೆಯರು ಹಗಲು-ರಾತ್ರಿ ನಡೆಸಿದ ಹೋರಾಟದಿಂದಾಗಿ ಇಡೀ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ಆಶಾ ಕಾರ್ಯಕರ್ತೆಯರಿಗೆ 3,500 ರೂಪಾಯಿ ಗೌರವಧನ ನಿಗದಿಯಾಯಿತು. ಆ ಅಮೋಘ ಸಾಧನೆಯ ನಂತರ ಹಲವಾರು ಬಾರಿ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟಗಳು ನಡೆದಿವೆ. ಸದ್ಯಕ್ಕೆ ಇವರ ಗೌರವಧನ(ರಾಜ್ಯ ಸರ್ಕಾರದ ಪಾಲು) ಕೇವಲ 5,000 ರೂಪಾಯಿ. ಇನ್ನು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಆರ್‌ಸಿಎಚ್ ಪೋರ್ಟಲ್‌ನಲ್ಲಿ ಸೋರಿಕೆಯಾಗಿ ಭಾಗಶಃ ಮಾತ್ರ 3,000-4,000 ಕೈ ಸೇರುತ್ತದೆ.

ಈ ಮೇಲಿನ ಎಲ್ಲಾ ಹೋರಾಟಗಳಿಗೆ ರಾಜ್ಯದ ಹಲವಾರು ಸಾಮಾಜಿಕ ಕಳಕಳಿಯ ಗಣ್ಯರು, ಪ್ರಗತಿಪರರು ಬೆಂಬಲಕ್ಕೆ ಇರುವುದು ಹೋರಾಟಕ್ಕೆ ಆನೆ ಬಲವೇ ಸರಿ. ಹಾಸನದ ಪ್ರಗತಿಪರ ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ಅವರ ಅವಿರತ ಬೆಂಬಲ ನಿಜಕ್ಕೂ ಅವಿಸ್ಮರಣೀಯ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಹಾಸನ ಜಿಲ್ಲೆಯಲ್ಲಿ ಆಶಾ ಚಟುವಟಿಕೆಗಳು: ಮಹಿಳೆಯರ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಘನತೆಯ ಜೀವನಕ್ಕಾಗಿ ಇತಿಹಾಸದಲ್ಲಿ ಮಹಿಳೆಯರು ನಡೆಸಿರುವ ಹೋರಾಟವನ್ನು ಆಶಾ ಕಾರ್ಯಕರ್ತೆಯರಿಗೆ ಮನವರಿಕೆ ಮಾಡಿಸಲು ಅವರ ನಡುವೆ ‘ಅಂತಾರಾಷ್ಟ್ರೀಯ ಮಹಿಳಾ ದಿನ’ ಆಚರಿಸಲಾಗಿದೆ. ಹಾಗೆಯೇ ಉನ್ನತ ಆದರ್ಶಗಳು ಮತ್ತು ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ಮಹಾನ್ ವ್ಯಕ್ತಿಗಳ ಜೀವನ ಹೋರಾಟಗಳ ಕುರಿತು ಚರ್ಚೆಗಳನ್ನು ಸಂಘಟಿಸಲಾಗಿದೆ.

ಹಾಸನದ ಎಂಟೂ ತಾಲೂಕುಗಳಲ್ಲಿ ಆಶಾ ಸಂಘ ಸಕ್ರಿಯವಾಗಿದ್ದು, ಇಲ್ಲಿಯವರೆಗಿನ ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಸಂಘಟಿಸಲು ಸ್ಥಳೀಯ ಆಶಾ ಮುಖಂಡರ ಪಾತ್ರ ಮಹತ್ತರವಾದುದು. ಜಿಲ್ಲಾಧ್ಯಕ್ಷರಾದ ಮಮತಾ, ಜಿಲ್ಲಾ ಕಾರ್ಯಾಧ್ಯಕ್ಷರಾದ ಪುಷ್ಪಲತಾ, ಇತರೆ ಪದಾಧಿಕಾರಿಗಳಾದ ಗೌರಮ್ಮ, ಮಂಜುಳ, ಗೀತ, ಶಿವಮ್ಮ, ಲಕ್ಷ್ಮಿ, ರೆಹಮತ್, ಕುಮಾರಿ, ನವೀನಾ, ಲಲಿತ, ತಾಹಿರ, ಶ್ವೇತ, ಯಶೋಧಮ್ಮ, ಪಂಕಜ, ಮೀನಾಕ್ಷಿ, ವೀಣಾ, ಮಂಗಳ, ಶಶಿಕಲಾ, ಕೋಮಲ ಮತ್ತು ಚಂದ್ರಮ್ಮ- ಜಿಲ್ಲಾ ಮತ್ತು ತಾಲೂಕು ಸಮಿತಿಯ ಮುಖಂಡರಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಸಂಘವನ್ನು ಇನ್ನಷ್ಟು ಬಲಗೊಳಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

ಇಲ್ಲಿಯವರೆಗೆ ನಡೆದಿರುವ ರಾಷ್ಟ್ರ, ರಾಜ್ಯ ಮಟ್ಟದ ಎಲ್ಲಾ ಹೋರಾಟಗಳಲ್ಲಿ ಹಾಸನ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಹಲವು ಬಾರಿ ಹಾಸನದಲ್ಲಿ ಪ್ರತಿಭಟನೆ, ಮೆರವಣಿಗೆಗಳನ್ನು ಹಮ್ಮಿಕೊಂಡು ಕೇಂದ್ರ-ರಾಜ್ಯ ಸರ್ಕಾರಗಳಿಗೆ, ಇಲಾಖಾ ಮುಖ್ಯಸ್ಥರಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಆಶಾ ಸಂಘವನ್ನು ಸಂಘಟನಾತ್ಮಕವಾಗಿ ಸದೃಢಗೊಳಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.

Asha workers 2

ಸವಾಲುಗಳು ಮತ್ತು ಇಂದಿನ ಸ್ಥಿತಿ: ಇಷ್ಟೆಲ್ಲಾ ಸುಧಾರಣೆಗಳಾದರೂ, ಆಶಾ ಕಾರ್ಯಕರ್ತೆಯರು ಇಂದಿಗೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲಸದ ಒತ್ತಡಕ್ಕೆ ತಕ್ಕಂತೆ ವೇತನ ಇಲ್ಲದಿರುವುದು. ಆರೋಗ್ಯ ವಿಮೆಯ ಕೊರತೆ. ಕೆಲವೊಮ್ಮೆ ಸಮುದಾಯದಿಂದ ಸಿಗದ ಗೌರವ ಮತ್ತು ಸಹಕಾರ. ಗೌರವಧನದ ಹೆಸರಿನ ಪ್ರೋತ್ಸಾಹಧನ ಹಲವು ತಿಂಗಳು ಬಾರದಿರುವುದು, ಅದಕ್ಕಾಗಿ ಆಶಾ ಕಾರ್ಯಕರ್ತೆಯರು ಪದೇ ಪದೇ ಬೀದಿಗೆ ಇಳಿಯುವುದು, ಪ್ರತಿಭಟನೆಗಳ ಒತ್ತಡಕ್ಕೆ ಸರ್ಕಾರ ಬಾಕಿ ಬಿಡುಗಡೆ ಮಾಡುವುದು ಸರ್ವೇಸಾಮಾನ್ಯವಾಗಿದೆ. ಕಳೆದ ವರ್ಷ ಮಾನ್ಯ ಮುಖ್ಯಮಂತ್ರಿಗಳು 40,000 ಆಶಾಗಳಿಗೆ ಘೋಷಿಸಿದ ಮಾಸಿಕ ರೂ.10,000 ಕೇವಲ ಭರವಸೆಯಾಗಿ ಉಳಿದಿದೆ. ಆರೋಗ್ಯ ಇಲಾಖೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಗೌರವ ಮತ್ತು ಆರ್ಥಿಕ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ. ಈ ಮೂಲಕ ಬಡಜನತೆಗೆ ಆರೋಗ್ಯವನ್ನು ಖಾತ್ರಿ ಪಡಿಸಬಹುದಾಗಿದೆ. ಒಟ್ಟಾರೆ ಇಷ್ಟೆಲ್ಲಾ ಸಂಕಷ್ಟಗಳು, ಸವಾಲುಗಳ ಮಧ್ಯೆಯೂ ನಮ್ಮ ಆಶಾಗಳು ಹಾಸನದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಬೇರುಗಳಾಗಿ ಸದ್ದಿಲ್ಲದೇ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ.

-ಡಿ. ನಾಗಲಕ್ಷ್ಮಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...