ಕರ್ನಾಟಕದಲ್ಲಿ ಒಂದೆಡೆ ದಗೆಯ ವಾತಾವರಣ ಹೆಚ್ಚಿದೆ. ಬೇಸಿಗೆಯ ಬಿಸಿಲಿನ ನಡುವೆಯೂ ಮಳೆ ಅಬ್ಬರೂ ಮುಂದುವರೆದಿದೆ. ಕಳೆದ ನಾಲ್ಕೈದು ದಿನಗಳಲ್ಲಿ ರಾಜ್ಯ ನಾನಾ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಸಾಕಷ್ಟು ಬಳೆ ಹಾನಿಗೆ ಕಾರಣವಾಗಿದೆ. ಇನ್ನೂ 2 ದಿನ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಉಳಿದಂತೆ, ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಸಾಧಾರಣ ಅಥವಾ ಸೋನೆ ಮಳೆಯಾಗುವ ನಿರೀಕ್ಷೆಯೂ ಇದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಹೆಚ್ಚಾಗಿದೆ.
ಕಳೆದೊಂದು ವಾರದಿಂದ ರಾಜ್ಯದಲ್ಲಿ ಸುರಿದಿರುವ ಮಳೆಯಿಂದಾಗಿ, ಹಲವು ಜಿಲ್ಲೆಗಳಲ್ಲಿ ಬೆಳೆಗಳು ನಾಶವಾಗಿವೆ. ಮಾವು, ಗೋಧಿ, ಸಾಸಿವೆ ಸೇರಿದಂತೆ ನಾನಾ ಬೆಳೆಗಳು ನೆಲಕಚ್ಚಿವೆ. ರೈತರು ನಷ್ಟದ ಆತಂಕದಲ್ಲಿದ್ದಾರೆ.
ಇನ್ನು, ಕರ್ನಾಟಕ ಮಾತ್ರವಲ್ಲದೆ, ಹಲವು ರಾಜ್ಯಗಳಲ್ಲಿಯೂ ಮಳೆ ಅರ್ಭಟ ಮುಂದುವರೆಯಲಿದೆ ಎಂದು ಇಲಾಖೆ ಹೇಳಿದೆ. ಹರಿಯಾಣ, ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ ಹಾಗೂ ಒಡಿಶಾ ರಾಜ್ಯದಲ್ಲಿ ಮಳೆಯಾಗುತ್ತಿದೆ. ಬಿಹಾರ, ಅಸ್ಸಾಂ, ಮೇಘಾಲಯ, ಜಾರ್ಖಂಡ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರಾ ರಾಜ್ಯಗಳಲ್ಲಿ ಗಾಳಿ ವೇಗವಾಗಿ ಬೀಸುತ್ತಿದ್ದು, ಅಲ್ಲಿಯೂ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ.




