ಓಲಾ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸುವಾಗ ಓಲಾ ಕಂಪನಿಯ ಸಂಸ್ಥಾಪಕ, ಸಿಇಒ ಭವಿಶ್ ಅಗರ್ವಾಲ್ ಮತ್ತು ಇತರರಿಗೆ ಕಿರುಕುಳ ನೀಡದಂತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.
38 ವರ್ಷದ ಓಲಾ ಎಂಜಿನಿಯರ್ ಕೆ ಅರವಿಂದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲಸದ ಸ್ಥಳದಲ್ಲಿ ನಿರಂತರ ಕಿರುಕುಳಕ್ಕೊಳಗಾಗಿದ್ದಾಗಿ ತಮ್ಮ 28 ಪುಟಗಳ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಭವಿಶ್ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್ ಅವರ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಣೆ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ನೌಕರ ಆತ್ಮಹತ್ಯೆ ಪ್ರಕರಣ; ಓಲಾ ಸಿಇಒ ಭವೀಶ್ ಅಗರ್‌ವಾಲ್ ವಿರುದ್ಧ ಎಫ್‌ಐಆರ್
ಪ್ರಕರಣ ದಾಖಲಾದ ಬೆನ್ನಲ್ಲೇ ಎಫ್‌ಐಆರ್‌ನ್ನು ಪ್ರಶ್ನಿಸಿ ಓಲಾ ಸಂಸ್ಥೆಯು ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಭವಿಶ್ ಅಗರ್ವಾಲ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದ ತನಿಖೆಯ ನೆಪದಲ್ಲಿ ಕಿರುಕುಳ ನೀಡದಂತೆ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರಿಗೆ ಮಧ್ಯಂತರ ಆದೇಶದಲ್ಲಿ ನಿರ್ದೇಶನ ನೀಡಿದೆ.
ಸೆಪ್ಟೆಂಬರ್ 28ರಂದು ಚಿಕ್ಕಲಸಂದ್ರದಲ್ಲಿರುವ ತನ್ನ ಮನೆಯಲ್ಲಿ ಅರವಿಂದ್ ಅವರು ವಿಷ ಸೇವಿಸಿದ್ದಾರೆ. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದೊರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಡೆತ್ ನೋಟ್ ಪತ್ತೆ ಮಾಡಿ, ಓಲಾ ಹಿರಿಯ ನಿರ್ವಾಹಕರಾದ ಸುಬ್ರತ್ ಕುಮಾರ್ ದಾಸ್ ಮತ್ತು ಭವಿಶ್ ಅಗರ್ವಾಲ್ ಅವರ ವಿರುದ್ಧ ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಿದ್ದಕ್ಕೆ ದೂರು ದಾಖಲಿಸಿದ್ದಾರೆ. ಕಂಪನಿಯ ಎಚ್‌ಆರ್ ವಿಭಾಗವು ಅರವಿಂದ್‌ರ ಖಾತೆಗೆ ಮಾಡಿದ ಹಣದ ವರ್ಗಾವಣೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ವಿಫಲವಾಗಿದೆ ಎಂದು ದೂರದಾರರು ತಿಳಿಸಿದ್ದಾರೆ.
ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





