ಲೈಂಗಿಕ ಅಪರಾಧಗಳಿಗೆ ತುತ್ತಾಗುವ ಅಪ್ರಾಪ್ತ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗಾಗಿ ಕರ್ನಾಟಕ ಹೈಕೋರ್ಟ್, ‘ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ’ (SOP 2025)ಅನ್ನು ರಚಿಸಿದೆ. ಸಂಬಂಧಿತ ಎಲ್ಲ ಸಂಸ್ಥೆಗಳು ಈ ಎಸ್‌ಒಪಿಯನ್ನು ಅನುಸರಿಸಬೇಕು ಎಂದು ಹೇಳಿದೆ.
ಅಪ್ರಾಪ್ತ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿ ವಿಚಾರವಾಗಿ ಅಧಿಕಾರಿಗಳು ಅನುಸರಿಸುವ ಕಾರ್ಯವಿಧಾನದಲ್ಲಿ ಲೋಪಗಳು ಕಂಡುಬಂದಿವೆ ಎಂದು ಕೋರ್ಟ್ ಹೇಳಿದೆ. ಆದ್ದರಿಂದಲೇ, ಹೊಸದಾಗಿ ಎಸ್‌ಒಪಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದೆ.
ತನ್ನ ಚಿಕ್ಕಪ್ಪನ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ 13 ವರ್ಷದ ಬಾಲಕಿಗೆ ‘ವೈದ್ಯಕೀಯ ಗರ್ಭಧಾರಣೆ ತಡೆ’ (MTP) ನಡೆಸಲು ಅನುಮತಿ ನೀಡುವ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ವಿಚಾರಣೆ ನಡೆಸಿದ್ದಾರೆ. “ನ್ಯಾಯಾಲಯದ ಮುಂದೆ ಹಲವಾರು ಎಂಟಿಪಿಗಾಗಿನ ಪ್ರಕರಣಗಳು ಬರುತ್ತಿವೆ. ಅಪ್ರಾಪ್ತ ಸಂತ್ರಸ್ತೆಯರ ಕುಟುಂಬಕ್ಕೆ ಸರಿಯಾದ ಸಮಯದಲ್ಲಿ MTP ಸಾಧ್ಯತೆಗಳ ಕುರಿತು ಅಧಿಕಾರಿಗಳು ತಿಳಿಸಿಲಾಗಿಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿಲ್ಲ. ಕುಟುಂಬಸ್ಥರಿಗೆ ಮಾಹಿತಿ ದೊರೆಯುವ ಹೊತ್ತಿಗೆ MTP ಕಾಯ್ದೆಯಡಿ ಅನುಮತಿಸಲಾದ ಅವಧಿ ಮೀರಿರುತ್ತದೆ. ಇದರಿಂದಾಗಿ ಬಲಿಪಶು ಈ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ” ಎಂದು ಹೈಕೋರ್ಟ್ ಹೇಳಿದೆ.
“ಅಧಿಕಾರಿಗಳಿಗೆ ಹಲವಾರು ಸಂದರ್ಭಗಳಲ್ಲಿ ನಿರ್ದೇಶನಗಳನ್ನು ನೀಡಲಾಗಿದ್ದರೂ, ಅವುಗಳನ್ನು ಪಾಲಿಸಿಲ್ಲ. ಅಧಿಕಾರಿಗಳು ನಿರಂತರವಾಗಿ ನಿರ್ಲಕ್ಷಿಸುತ್ತಲೇ ಇದ್ದಾರೆ” ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
“ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತೆಯರಿಗೆ ನೆರವು ನೀಡಬೇಕಾದ ಎಲ್ಲ ಇಲಾಖೆಗಳು/ಅಧಿಕಾರಿಗಳಿಗೂ ಸೂಕ್ತವಾದ SOPಅನ್ನು ರೂಪಿಸಿದರೆ ಇವೆಲ್ಲವನ್ನೂ ಪರಿಹರಿಸಬಹುದು. ಅಂತಹ SOPಅನ್ನು ರೂಪಿಸುವವರೆಗೂ ಇಂತಹ ಪ್ರಕರಣಗಳು ಮುಂದುವರೆಯುತ್ತವೆ. ಹೀಗಾಗಿ, ನ್ಯಾಯಾಲಯವೇ ತಾತ್ಕಾಲಿಕ ಎಸ್‌ಒಪಿ ರಚಿಸಿದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
“ನ್ಯಾಯಾಲಯ ರೂಪಿಸಿರುವ ಈ SOP ಕೇವಲ ಸೂಚಕವಾಗಿದೆ. ತಜ್ಞರಿಂದ ಸಲಹೆ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರು ಸಮಗ್ರ SOP ಅನ್ನು ರೂಪಿಸಬೇಕು. ಇದು ಸಾಧ್ಯವಾದಷ್ಟು ಬೇಗ ಕಾರ್ಯಗತಗೊಳ್ಳಬೇಕು” ಎಂದು ಕೋರ್ಟ್ ಹೇಳಿದೆ.
SOPಯ ಪ್ರಾಥಮಿಕ ಉದ್ದೇಶಗಳು:
- ಪ್ರತಿಯೊಬ್ಬ ಅಪ್ತಾಪ್ತ ಸಂತ್ರಸ್ತೆಗೆ ತಕ್ಷಣದ ಸುರಕ್ಷತೆ, ವೈದ್ಯಕೀಯ ಆರೈಕೆ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ನೆರವನ್ನು ಖಾತ್ರಿಪಡಿಸುವುದು.
- ಪ್ರತಿ ಹಂತದಲ್ಲೂ ಮಕ್ಕಳ ಸ್ನೇಹಿ ಕಾರ್ಯವಿಧಾನಗಳನ್ನು ಜಾರಿಗೆ ತರುವ ಮೂಲಕ ತ್ವರಿತ, ಸೂಕ್ಷ್ಮ ಹಾಗೂ ಆಘಾತ-ಮುಕ್ತ ತನಿಖೆಯನ್ನು ಖಚಿತಪಡಿಸುವುದು.
- ಎಲ್ಲ ಪ್ರಕ್ರಿಯೆಗಳು ಮತ್ತು ದಾಖಲೆಗಳಲ್ಲಿ ಸಂತ್ರಸ್ತೆಯ ಗುರುತಿನ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು.
- ಸಂತ್ರಸ್ತೆಯು ತನ್ನ ಮೇಲಾದ ದೌರ್ಜನ್ಯದ ಆಘಾತದಿಂದ ಹೊರಬಂದು ಆರೋಗ್ಯಕರವಾಗಿ ಸಮಾಜದಲ್ಲಿ ಯಶಸ್ವಿಯಾಗಿ ಬದುಕನ್ನು ರೂಪಿಸಿಕೊಳ್ಳುವವರೆಗೆ ಶಿಕ್ಷಣ, ಸಮಾಲೋಚನೆ ಹಾಗೂ ಜೀವನೋಪಾಯ ಬೆಂಬಲ ಒಳಗೊಂಡ ಸಮಗ್ರ ಪುನರ್ವಸತಿಯನ್ನು ಒದಗಿಸುವುದು.




