ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣವನ್ನು ವಿಶ್ಲೇಷಿಸಿರುವ ಯೂಟ್ಯೂಬರ್ ಸಮೀರ್ ವಿರುದ್ಧ ಸಾಮಾಜಿಕ ಮಾಧ್ಯಮ ಯೂಟ್ಯೂಬ್‌ನಲ್ಲಿ ವಿಡಿಯೊ ಹಂಚಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ತಡೆ ಆಜ್ಞೆ ನೀಡಿದೆ.
ಸೌಜನ್ಯಾ ಕೊಲೆ ಪ್ರಕರಣವನ್ನು ವಿಶ್ಲೇಷಿಸಿ ಸಾಮಾಜಿಕ ಮಾಧ್ಯಮ ಯೂಟ್ಯೂಬ್‌ನಲ್ಲಿ ವಿಡಿಯೊ ಹಂಚಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಸಮೀರ್ ವಿರುದ್ಧ ‘ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)-2023ರ ಸೆಕ್ಷೆನ್ 299’ (ಧಾರ್ಮಿಕ ನಂಬಿಕೆಗಳು ಅಥವಾ ಆಚರಣೆಗಳನ್ನು ಉದ್ದೇಶಪೂರ್ವಕವಾಗಿ ಅಪಮಾನಿಸುವುದು) ಅಡಿಯಲ್ಲಿ ಬುಧವಾರ ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ ಸಮೀರ್ ವಿರುದ್ಧ ಸ್ವಯಂ ಪ್ರೇರಿತವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
‘ದೂತ: ಸಮೀರ್ ಎಂಡಿ/ದೂತ’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಹೊರಡಿಸಲಾದ ವಿಡಿಯೋದಿಂದ ಜನರು ಹೊಂದಿರುವ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಸಮೀರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಪ್ರಶ್ನಿಸಿ ಸಮೀರ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. “ಒಂದೇ ಒಂದು ಶಬ್ದ ಯಾವುದೇ ಧರ್ಮದ ವಿರುದ್ಧ ಯೌಟ್ಯೂಬರ್ ಮಾತನಾಡದೆ ಇದ್ದರೂ ವಿನಾಕಾರಣ ಪ್ರಭಾವಕ್ಕೆ ಒಳಗಾಗಿ ಎಫ್‌ಐಆರ್ ದಾಖಲು ಮಾಡಿದ್ದು ತಪ್ಪು, ಅಲ್ಲಿ ಹೇಳಿರುವುದು ಧರ್ಮಸ್ಥಳ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆದ ಅನೇಕ ಸಾವು ನೋವುಗಳ ಕುರಿತು” ಎಂದು ಹಿರಿಯ ಹೈಕೋರ್ಟ್ ನ್ಯಾಯವಾದಿ ಕೆ ವಿ ಧನಂಜಯ ವಾದಿಸಿದರು.
ವಾದ ಆಲಿಸಿದ ಹೈಕೋರ್ಟ್ ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ತಡೆ ಆಜ್ಞೆ ನೀಡಿದೆ.





