ಹುಬ್ಬಳ್ಳಿ ಮೂಲದ ಉದ್ಯಮಿ ಮತ್ತು ಸಿವಿಲ್ ಗುತ್ತಿಗೆದಾರ ಆನಂದ ಉಮೇಶ್ ಹೆಗಡೆ (40) ಎಂಬುವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಿಂದ ಭಾನುವಾರ ಬೆಳಿಗ್ಗೆ ಹೂವಿನಹಡಗಲಿ ಪಟ್ಟಣಕ್ಕೆ ಆಗಮಿಸಿದ್ದ ಆನಂದ ಅವರು ದಾಕ್ಷಾಯಣಿ ಲಾಡ್ಜ್‌ನಲ್ಲಿ ಕೊಠಡಿ ಪಡೆದು ತಂಗಿದ್ದರು. ತಂಗಿದ್ದ ಕೋಣೆಯಲ್ಲೇ ಭಾನುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹುಬ್ಬಳ್ಳಿಯ ಭವಾನಿ ನಗರ ನಿವಾಸಿಯಾದ ಆನಂದ ಉಮೇಶ್ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. “ಕುಟುಂಬದವರು ಆಗಮಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಹೂವಿನಹಡಗಲಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಯನ್ನು ಅವರು ಟೆಂಡರ್ ಪಡೆದು ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಆನಂದ ಹಾಗೂ ಸ್ನೇಹಿತರಾದ ಸುಧೀಂದ್ರ, ಗೌರೀಶ ಅವರು ಪಾಲುದಾರಿಕೆಯಲ್ಲಿ ಕಂಪನಿಯೊಂದನ್ನು ಸ್ಥಾಪಿಸಿ, ಅದರ ಹೆಸರಲ್ಲಿ ಟೆಂಡರ್‌ಗಳನ್ನು ಪಡೆದು ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು.
ಸೋಮವಾರ ಬೆಳಿಗ್ಗೆ ಕುಟುಂಬದವರು ಅನೇಕ ಬಾರಿ ಕರೆ ಮಾಡಿದರೂ ಸ್ವೀಕರಿಸದೇ ಇದ್ದಾಗ ಲಾಡ್ಜ್ ಸ್ವಾಗತಕಾರರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆಗ ಲಾಡ್ಜ್ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರೂಂ ತೆರೆಸಿದಾಗ ಕಿಟಕಿಯ ಸರಳಿಗೆ ಬಟ್ಟೆಯಿಂದ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಹೂವಿನಹಡಗಲಿ ಠಾಣೆಯ ಪಿಎಸ್‌ಐ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಹುಬ್ಬಳ್ಳಿಯಲ್ಲಿ ಸ್ನೇಹಿತರೊಂದಿಗೆ ಹೋಟೆಲ್ ಉದ್ಯಮ ಮಾಡಿಕೊಂಡು ಸುಮಾರು 50 ಲಕ್ಷ ಸಾಲ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ಸಾಲಗಾರರ ಕಿರುಕುಳ ಹೆಚ್ಚಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಡ್ಜ್ ಅನ್ನು ಪರಿಶೀಲಿಸಿದ್ದೇವೆ. ಯಾವುದೇ ಅನುಮಾನ ಕಂಡುಬಂದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್‌ಗಷ್ಟೇ ಅಲ್ಲ, ಸಮಾಜಕ್ಕೆ ಅರ್ಥವಾಗಿದೆಯೇ ಆರ್‌ಎಸ್‌ಎಸ್ ಅಜೆಂಡಾ?
ಹಿಂದೆಯೂ ನಡೆದಿದೆ ಗುತ್ತಿಗೆದಾರರ ಆತ್ಮಹತ್ಯೆ
ಬೀದರ್ ಯುವ ಗುತ್ತಿಗೆದಾರ, ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮದ ನಿವಾಸಿ ಸಿವಿಲ್ ಎಂಜಿನಿಯರ್ ಸಚಿನ್ ಮಾನಪ್ಪ ಪಾಂಚಾಳ್ (26) ಬೀದರ್-ಹೈದರಾಬಾದ್ ರೈಲು ಮಾರ್ಗದ ಹಳಿಯಲ್ಲಿ 2024 ಡಿಸೆಂಬರ್ 27ರಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.
ಹಾಗೆಯೇ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ 2022ರ ಏಪ್ರಿಲ್ 12ರಂದು ಉಡುಪಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೆ ಮುಖ್ಯ ಕಾರಣ ಈಶ್ವರಪ್ಪನವರು ಎಂಬುದು ಆರೋಪವಾಗಿತ್ತು.





