“ನಮ್ಮ ಗೋಳು ಯಾರಿಗೆ ಹೇಳಬೇಕು? ನಾನು ಏನಾದರೂ ಮಾತನಾಡಿದರೆ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದೇನೆ ಎನ್ನುತ್ತಾರೆ. ಯಾರೂ ಏನಾದರೂ ಹೇಳಿಕೊಳ್ಳಲಿ. ನಾನು ಸಾಯೋವರೆಗೂ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯವನ್ನು ಕೇಳಿಯೇ ಕೇಳುತ್ತೇನೆ…”
ವಿಧಾನಸಭೆ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಮೇಲಿನ ಚರ್ಚೆ ಮೇಲೆ ಮಾತನಾಡುತ್ತ ಕಾಂಗ್ರೆಸ್ ಸದಸ್ಯ ರಾಜು ಕಾಗೆ ಹೀಗೆ ಸದನದಲ್ಲಿ ಘೋಷಿಸಿದರು.
“ಮತ್ತೊಮ್ಮೆ ನಾನು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಸದನದಲ್ಲಿ ಮಂಡಿಸುವೆ. ನಮಗೆ ಸದಾ ಅನ್ಯಾಯವಾಗುತ್ತಲೇ ಬರುತ್ತಿದೆ. ಪ್ರಜಾಸೌಧ ನಿರ್ಮಾಣಕ್ಕೆ ಕಡೂರು ತಾಲ್ಲೂಕಿಗೆ 16 ಕೋಟಿ ರೂ. ಕೊಡಲಾಗುತ್ತಿದೆ. ನಮ್ಮ ತಾಲ್ಲೂಕಿನ ಪ್ರಜಾಸೌಧ ನಿರ್ಮಾಣಕ್ಕೆ ಕೇವಲ 8 ಕೋಟಿ ರೂ. ಇದು ಅನ್ಯಾಯ ಅಲ್ವಾ? ಪ್ರತಿಯೊಂದು ಯೋಜನೆ ತೆಗೆದುಕೊಳ್ಳಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಬರುತ್ತಿದೆ. ಒಂದೊಂದು ಯೋಜನೆಗಳು ಮುಗಿಯಲು 10-20 ವರ್ಷ ಹಿಡಿಯುತ್ತದೆ? ಎಲ್ಲ ಸರ್ಕಾರದಲ್ಲೂ ಹೀಗೆಯೇ” ಎಂದು ಬೇಸರ ವ್ಯಕ್ತಪಡಿಸಿದರು.
“ಉತ್ತರ ಕರ್ನಾಟಕದವರು ಇಲ್ಲಿಗೆ (ಬೆಂಗಳೂರಿಗೆ) ಬಂದು ಕೈಮುಗಿದು ಎಲ್ಲರ ಮುಂದೆ ನಿಲ್ಲಬೇಕು. ಭಿಕ್ಷುಕರ ತರ ಭಿಕ್ಷೆ ಬೇಡಬೇಕು. 100 ಸಲ ಭಿಕ್ಷೆ ಬೇಡಿದರೆ 10 ಪೈಸೆ, 20 ಪೈಸೆ ಹಾಕ್ತಾರೆ. ಇಂತಹ ತಾರತಮ್ಯ ಅನುಭವಿಸಿಯೇ ನಾನು ಪ್ರತ್ಯೇಕ ರಾಜ್ಯ ಮಾಡುವುದಕ್ಕೆ ಪತ್ರ ಬರೆದಿದ್ದೇನೆ. ನಮಗೆ ತಲಾ 10 ಸಾವಿರ ಕೋಟಿ ರೂ. ಅನುದಾನ ಕೊಡಿ ಇಲ್ಲವೇ, ಪ್ರತ್ಯೇಕ ರಾಜ್ಯ ಮಾಡಿ. ಇಲ್ಲವೆಂದರೆ ಯಾರು ಸಾಯ್ಲಿ ಬಿಡ್ಲಿ ನಾನು ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡೋನೆ” ಎಂದು ಸ್ಪಷ್ಟಪಡಿಸಿದರು.





