ʼಬನವಾಸಿ ಬಳಗʼ ಬೆಂಗಳೂರಿನಲ್ಲಿ ಆಯೋಜಿಸಿದ್ದ “ತ್ರಿಭಾಷಾ ನೀತಿ ಸಾಕು: ಎರಡು ನುಡಿ ಕಲಿಕೆ ಬೇಕು” ವಿಚಾರ ಸಂಕಿರಣದಲ್ಲಿ ಕೆಲವು ನಿರ್ಣಯಗಳನ್ನು ಮಾಡಲಾಯಿತು. ನಂತರ ಹಿರಿಯ ತಜ್ಞರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ವಿಚಾರಸಂಕಿರಣದಲ್ಲಿ ಹಿರಿಯ ವಿದ್ವಂಸರಾದ ಗೊ.ರು. ಚನ್ನಬಸಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ, ʼಮುಖ್ಯಮಂತ್ರಿʼ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ ಪುರುಷೋತ್ತಮ ಬಿಳಿಮಲೆ, ಶಿಕ್ಷಣ ತಜ್ಞರಾದ ಡಾ ನಿರಂಜನಾರಾಧ್ಯ ವಿ ಪಿ, ಹಿ ಚಿ ಬೋರಲಿಂಗಯ್ಯ, ಡಾ ಕರಿಗೌಡ ಬೀಚನಹಳ್ಳಿ, ಹಿರಿಯ ಸಾಹಿತಿಗಳಾದ ಕುಂ ವೀರಭದ್ರಪ್ಪ, ಅಗ್ರಹಾರ ಕೃಷ್ಣಮೂರ್ತಿ, ಡಾ ವಸುಂಧರಾ ಭೂಪತಿ, ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ ನಲ್ಲೂರು ಪ್ರಸಾದ್, ಕಸಾಪದ ನಗರ ಅಧ್ಯಕ್ಷರಾದ ಪ್ರಕಾಶ್ ಮೂರ್ತಿ, ಹಿರಿಯ ಸಂಗೀತ ನಿರ್ದೇಶಕರಾದ ಹಂಸಲೇಖ, ʼನಮ್ಮ ನಾಡು ನಮ್ಮ ಆಳ್ವಿಕೆʼ ತಂಡದ ಕವಿರಾಜ್ ಹಾಗೂ ಬನವಾಸಿ ಬಳಗದ ಅಧ್ಯಕ್ಷರಾದ ಆನಂದ್ ಜಿ ಪಾಲ್ಗೊಂಡಿದ್ದರು.
ನಿರ್ಣಯಗಳು:
1) ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಸ್ತುತ ಇರುವ ತ್ರಿಭಾಷಾ ನೀತಿಯನ್ನು ಕೈಬಿಟ್ಟು, ಎರಡು ನುಡಿ ಕಲಿಕೆಯ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಬೇಕು.
2) ಈ ನೀತಿಯ ಅನ್ವಯ ತಾರತಮ್ಯ ಇಲ್ಲದಂತೆ ಎಲ್ಲಾ ಶಾಲೆಗಳಲ್ಲೂ ಕನ್ನಡವನ್ನು ಮೊದಲನೆಯ ಅಥವಾ ಎರಡನೆಯ ಭಾಷೆಯಾಗಿ ಕಲಿಯುವುದು ಕಡ್ಡಾಯವಾಗಬೇಕು.
3) ಸದರಿ ನೀತಿಯು 2026-2027ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಬೇಕು.
4) ಈ ದ್ವಿಭಾಷಾ ನೀತಿಯ ಅಳವಡಿಕೆಯನ್ನು ನಾಡಿನ ಗೌರವಾನ್ವಿತ ಮುಖ್ಯಮಂತ್ರಿಗಳು ಈ ಸಾಲಿನ ಕನ್ನಡ ರಾಜ್ಯೋತ್ಸವದ ದಿನದಂದು, ಅಂದರೆ 01.11.2025ರಂದು ಸಾರ್ವಜನಿಕವಾಗಿ ಘೋಷಣೆ ಮಾಡುವಂತೆ ಕೋರುತ್ತೇವೆ.




