ಮುಂಬೈನಲ್ಲಿ ನಡೆದ ಇಂಡಿಯಾ ಮೆರಿಟೈಮ್ ವೀಕ್ (India Maritime Week – IMW) 2025 ಕಾರ್ಯಕ್ರಮದ ಅಂಗವಾಗಿ ನಡೆದ ಕರ್ನಾಟಕ ರಾಜ್ಯ ಅಧಿವೇಶನವು ಯಶಸ್ವಿಯಾಗಿ ಪೂರ್ಣಗೊಂಡಿದೆ. ʼExploring PPP Synergies for a Sustainable Blue Economyʼ ಎಂಬ ವಿಷಯದಡಿ ನಡೆದ ಈ ಅಧಿವೇಶನದಲ್ಲಿ ಸುಮಾರು ₹4,500 ಕೋಟಿ ಮೌಲ್ಯದ ವಿವಿಧ ಮಹತ್ವದ ಒಪ್ಪಂದ ಪತ್ರಗಳಿಗೆ ಸಹಿ ಹಾಕಲಾಗಿದೆ.
ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾಲಿಗೆ ಸಚಿವ ಮಂಕಾಳ ಎಸ್ ವೈದ್ಯ ಅವರು ಅಧ್ಯಕ್ಷತೆ ವಹಿಸಿದ್ದು, “ಕರ್ನಾಟಕವು ತನ್ನ ಸಮುದ್ರ ಸಂಪನ್ಮೂಲಗಳನ್ನು ಸ್ಥಿರ ಅಭಿವೃದ್ಧಿಯ ದಿಕ್ಕಿನಲ್ಲಿ ಬಳಸಿಕೊಳ್ಳುವ ದೃಷ್ಟಿಯಿಂದ ಬ್ಲೂ ಎಕಾನಮಿ ಕ್ಷೇತ್ರದಲ್ಲಿ ಮುಂದಾಳತ್ವ ತೋರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಜಲಸಾರಿಗೆ ಮಂಡಳಿ ಸಹಿ ಮಾಡಿದ ಹಲವು ಪ್ರಮುಖ ಸಂಸ್ಥೆಗಳೊಂದಿಗಿನ ಒಪ್ಪಂದಗಳು ಈ ಕೆಳಗಿನಂತಿವೆ…
- ಜೆಎಸ್‌ಡಬ್ಲ್ಯೂ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್: ಕೆನಿಯಲ್ಲಿ ಪಿಪಿಪಿ ಆಧಾರದ ಮೇಲೆ ನಿರ್ಮಿಸಲ್ಪಡುವ ಸರ್ವಋತು ಡೀಪ್ ವಾಟರ್ ಗ್ರೀನ್‌ಫೀಲ್ಡ್ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಕನ್ಸೆಶನ್ ಒಪ್ಪಂದ – ₹4,118 ಕೋಟಿ ಮೌಲ್ಯ.
- ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL): ಅಮದಳ್ಳಿ ರೈಲು ಸೈಡಿಂಗ್ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದ – ₹45.88 ಕೋಟಿ ಮೌಲ್ಯ.
- ಭಾರತ ಆಂತರಿಕ ಜಲಮಾರ್ಗ ಪ್ರಾಧಿಕಾರ (IWAI): ರಾಜ್ಯದ ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದ – ಅಂದಾಜು ₹300 ಕೋಟಿ ಮೌಲ್ಯ.
- ನ್ಯಾಷನಲ್ ಇನ್‌ಲ್ಯಾಂಡ್ ನ್ಯಾವಿಗೇಶನ್ ಇನ್ಸ್ಟಿಟ್ಯೂಟ್ (NINI), ಪಾಟ್ನಾ: ಮಂಗಳೂರು ನಗರದಲ್ಲಿ ಇನ್‌ಲ್ಯಾಂಡ್ ವಾಟರ್ ಟ್ರಾನ್ಸ್‌ಪೋರ್ಟ್ ಮತ್ತು ನ್ಯಾವಿಗೇಶನ್‌ನಲ್ಲಿ ಶ್ರೇಷ್ಠತೆ ಕೇಂದ್ರ (COE-IWTN) ಸ್ಥಾಪನೆಗೆ ಒಪ್ಪಂದ – ಅಂದಾಜು ₹50 ಕೋಟಿ ಮೌಲ್ಯ.
- ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆ: ಬಳ್ಳಾರಿ ಜಿಲ್ಲೆಯಲ್ಲಿ ತಂಪು ಸಂಗ್ರಹಣೆ, ಸಂಸ್ಕರಣಾ ಘಟಕಗಳು ಮತ್ತು ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಒಪ್ಪಂದ – ಅಂದಾಜು ₹12 ಕೋಟಿ ಮೌಲ್ಯ.
ಕಾರ್ಯಕ್ರಮದ ವೇಳೆ ಕರ್ನಾಟಕ ರಾಜ್ಯ ಸಮುದ್ರ ಮತ್ತು ಜಲಮಾರ್ಗ ಮಾಸ್ಟರ್ ಪ್ಲ್ಯಾನ್ (KSMWMP) ಕುರಿತು ಚರ್ಚೆ ನಡೆಸಲಾಯಿತು. ಈ ಯೋಜನೆ ಒಟ್ಟು ₹23,000 ಕೋಟಿ ಮೌಲ್ಯದ 126 ಯೋಜನೆಗಳನ್ನು ಒಳಗೊಂಡಿದ್ದು, ರಾಜ್ಯದ ಸಮುದ್ರ ಮತ್ತು ಜಲಮಾರ್ಗ ಅಭಿವೃದ್ಧಿಗೆ ಸಮಗ್ರ ಮಾರ್ಗಚಿತ್ರ ನೀಡಲಿದೆ ಎನ್ನಲಾಗಿದೆ. ಈ ಪೈಕಿ ₹7,500 ಕೋಟಿಗೂ ಹೆಚ್ಚು ಮೌಲ್ಯದ 10 ಪ್ರಮುಖ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಯೋಜನೆಗಳು ಶೀಘ್ರದಲ್ಲೇ ಕಾರ್ಯಾರಂಭಕ್ಕೆ ಸಿದ್ಧವಾಗಿವೆ. ಇವುಗಳಲ್ಲಿ ಮಂಗಳೂರು ವಾಟರ್ ಮೆಟ್ರೋ ಯೋಜನೆ ಮತ್ತು ರಾಜ್ಯದ ಮೊದಲ ಸಮುದ್ರ ಸಂಗ್ರಹಾಲಯ (Maritime Museum) ಸ್ಥಾಪನೆಯು ಪ್ರಮುಖ ಆಕರ್ಷಣೆಯಾಗಿವೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು
ಅಧಿವೇಶನದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯದರ್ಶಿ ಡಾ. ಮಂಜುಳ ಎನ್ (ಐಎಸ್), ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ಅಧ್ಯಕ್ಷ ಡಾ. ಎ ವಿ ರಮಣ, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಹೆಚ್ ಸಿ, ಮಂಡಳಿಯ ನಿರ್ದೇಶಕ ದಿವಾಕರ್ ನಾಯಕ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.





