ಸಂಗೀತ ಲೋಕದ ವಿಶ್ವ ಶ್ರೇಷ್ಠ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ್ ತಾರಾನಾಥ್ ಇಂದು ನಿಧನರಾಗಿದ್ದಾರೆ. ಶ್ರೀಯುತರಿಗೆ 91 ವರ್ಷ ವಯಸ್ಸಾಗಿತ್ತು.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ತೀವ್ರ ಅಸ್ವಸ್ಥರಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುವೆಂಪು ನಗರದ ಪಂಚಮಂತ್ರ ರಸ್ತೆಯಲ್ಲಿರುವ ನಿವಾಸದಲ್ಲಿ, ತಿಂಗಳ ಹಿಂದೆ ಕುಸಿದು ಬಿದ್ದು ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದರು.
ಇಂದು ರಾತ್ರಿ 7.05ರ ವೇಳೆಗೆ ಮೃತಪಟ್ಟಿದ್ದಾರೆ.
ರಾಜೀವ್ ತಾರಾನಾಥ್ ಅವರು ಬೆಂಗಳೂರಿನಲ್ಲಿ 17 ಅಕ್ಟೋಬರ್ 1932 ರಂದು ಜನಿಸಿದರು. ಅವರು ತಮ್ಮ ತಂದೆ ಪಂಡಿತ್ ತಾರಾನಾಥ್ ಅವರಿಂದ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದರು. ಅವರು ಒಂಬತ್ತು ವರ್ಷದವರಾಗಿದ್ದಾಗ ಮೊದಲ ಸಾರ್ವಜನಿಕ ಗಾಯನ ಪ್ರದರ್ಶನವನ್ನು ನೀಡಿದರು. ರಾಜೀವ್ ಅವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿಯೇ ಆಕಾಶವಾಣಿಗೆ ಹಾಡುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ರಾಜೀವ್ ತಾರಾನಾಥ್ ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆದು ತಿರುಚಿರಾಪಳ್ಳಿಯ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಗೀತದ ಮೇಲಿನ ಪ್ರೀತಿಯಿಂದಾಗಿ ತಮ್ಮ ವೃತ್ತಿಯನ್ನು ತ್ಯಜಿಸಿ ಕಲ್ಕತ್ತಾಗೆ ಹೋಗಿ ಅಲ್ಲಿ ಅಲಿ ಅಕ್ಬರ್ ಖಾನ್ ಅವರ ಮಾರ್ಗದರ್ಶನದಲ್ಲಿ ಸಂಗೀತ ತರಬೇತಿ ಪಡೆದರು.
ಪ್ರಶಸ್ತಿಗಳು
ರಾಜೀವ್ ತಾರಾನಾಥ್ ಅವರ ಸಾಧನೆಯನ್ನು ಗುರುತಿಸಿ ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ 1998 (ಕರ್ನಾಟಕ ಸರಕಾರ),
ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ-1993,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-1996,
ಕೆಂಪೇಗೌಡ ಪ್ರಶಸ್ತಿ- 2006,
ಗಾಯನ ಸಮಾಜದಿಂದ ಸಂಗೀತ ಕಲಾರತ್ನ
ಜ್ಯೋತಿ ಸುಬ್ರಮಣ್ಯ ಪ್ರಶಸ್ತಿ,
ಭ್ರಮರಾಂಬಾ ಎನ್ ನಾಗರಾಜ್ ಬಂಗಾರದ ಪದಕ,
ವಿ. ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ,
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪ್ರಶಸ್ತಿ
‘ಪದ್ಮಶ್ರೀ’ ಪ್ರಶಸ್ತಿ
ರಾಜೀವ್ ತಾರಾನಾಥ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೈಸೂರಿನ ಕುವೆಂಪುನಗರದ ಜ್ಞಾನ ಗಂಗಾ ಶಾಲೆ ಹತ್ತಿರದ ಅವರ ಮನೆಯ ಎದುರು ಬುಧವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 12ರಿಂದ 2 ಗಂಟೆಯೊಳಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ರಾಜೀವ್ ತಾರಾನಾಥ್ ಅವರ ಆಪ್ತ, ಲೇಖಕ ಟಿ. ಎಸ್. ವೇಣುಗೋಪಾಲ್ ತಿಳಿಸಿದ್ದಾರೆ.
ಜಗತ್ಪ್ರಸಿದ್ದ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ಅವರ ನಿಧನದಿಂದ ದು:ಖಿತನಾಗಿದ್ದೇನೆ.
ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ
ತುಂಬಲಾರದ ನಷ್ಟ.ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ… pic.twitter.com/Eiow6n8KYY
— CM of Karnataka (@CMofKarnataka) June 11, 2024





