ಕರ್ನಾಟಕ ಸರ್ಕಾರದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಗಣತಿ)ಯಲ್ಲಿ ಮಾಹಿತಿ ಹಂಚಿಕೊಳ್ಳಲು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ನಿರಾಕರಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಜಯನಗರದಲ್ಲಿರುವ ಅವರ ಮನೆಗೆ ಕಳೆದ ವಾರ ಗಣತಿದಾರರು ಭೇಟಿ ನೀಡಿದ್ದರು. ಸರ್ಕಾರಿ ಸಮೀಕ್ಷಾ ಫಾರಂನಲ್ಲಿ ಅವರು ಬರೆದಿರುವಂತೆ, ‘ನಾವು ಮತ್ತು ನಮ್ಮ ಕುಟುಂಬ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಹೀಗಾಗಿ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ನಮಗೆ ಸಂಬಂಧವಿಲ್ಲದ್ದು ಮತ್ತು ಸರ್ಕಾರಕ್ಕೂ ಯಾವುದೇ ಉಪಯೋಗವಿಲ್ಲ’ ಎಂದು ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಆನೆ ಅವಿತಿರುವ ದುರಂತ!
ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆಯಾಗಿ ಮತ್ತು ರಾಜ್ಯಸಭಾ ಸದಸ್ಯೆಯಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ನಾರಾಯಣ ಮೂರ್ತಿ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಅವರ ನಿರಾಕರಣೆಯು ಸಮೀಕ್ಷೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ, ವಿಶೇಷವಾಗಿ ಸಮೀಕ್ಷೆಯು ಹಿಂದುಳಿದ ವರ್ಗಗಳನ್ನು ಗುರುತಿಸಿ ಸರ್ಕಾರಿ ಯೋಜನೆಗಳನ್ನು ಸುಧಾರಿಸುವ ಉದ್ದೇಶ ಹೊಂದಿದೆ.
ಬೆಂಗಳೂರು ನಗರದಲ್ಲಿ ಸದ್ಯ ಶೇ.81ರಷ್ಟು ಮನೆಗಳ ಸಮೀಕ್ಷೆ ಮುಗಿದಿದ್ದು, ಎಷ್ಟು ಮಂದಿ ಭಾಗವಹಿಸಲು ನಿರಾಕರಿಸಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಮಾಧ್ಯಮಗಳ ವರದಿಯಂತೆ, ಪಾಲ್ಗೊಂಡವರು ಕೇವಲ ಶೇ.25ರಷ್ಟು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದಾರೆ ಎನ್ನಲಾಗಿದೆ.






