ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇ.17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಇಂದು ಸಂಜೆ (ಡಿಸೆಂಬರ್ 6) ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯನವರು ಸಭೆ ನಡೆಸಿದ್ದು, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಆಹಾರ ಸಚಿವರಾದ ಕೆ.ಎಚ್. ಮುನಿಯಪ್ಪ ಭಾಗಿಯಾಗಿದ್ದರೆಂದು ಮೂಲಗಳು ಹೇಳಿವೆ.
‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟುಗಳು ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ, 2022’ರ ಅಡಿಯಲ್ಲಿ ಒಳ ಮೀಸಲಾತಿ ಹೆಚ್ಚಳವನ್ನು ಜಾರಿಗೊಳಿಸದಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿತ್ತು. ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿತ್ರ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೇರಿದಂತೆ ಹಲವಾರು ಅರ್ಜಿಗಳನ್ನು ಆಲಿಸಿದ ನಂತರ, “ಅರ್ಜಿಗಳು ಇತ್ಯರ್ಥವಾಗುವವರೆಗೆ ನೇಮಕಾತಿ ಅಥವಾ ಹೆಚ್ಚಿದ ಮೀಸಲಾತಿ ಆಧಾರದ ಮೇಲೆ ನೇಮಕಾತಿಗಳಿಗೆ ಯಾವುದೇ ಅಧಿಸೂಚನೆಗಳನ್ನು ಹೊರಡಿಸಬಾರದು. ಈಗಾಗಲೇ ಪ್ರಾರಂಭವಾಗಿರುವ ನೇಮಕಾತಿಗಳನ್ನು ಮುಂದುವರಿಸಬಹುದು, ಆದರೆ ಈ ನೇಮಕಾತಿಗಳು ಸದ್ಯ ಸಲ್ಲಿಸಲಾಗಿರುವ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರಬೇಕು” ಎಂದು ಕೋರ್ಟ್ ಹೇಳಿತ್ತು. ಶೇ.15ರ ಬದಲಿಗೆ ಶೇ.17ರ ಪ್ರಮಾಣದಲ್ಲಿ ಮೀಸಲಾತಿಯನ್ನು ಸರ್ಕಾರ ಹಂಚಿಕೆ ಮಾಡಿದ್ದು, ಅದನ್ನು ಸಮರ್ಥಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಶೇ.17ರ ಮೀಸಲಾತಿಯನ್ನು ಸಮರ್ಥನೆ ಮಾಡಲು ಆಯೋಗದ ಅಂಕಿ-ಅಂಶಗಳಿವೆ. ಈಗಾಗಲೇ ಛತ್ತೀಸ್‌ಗಡದಲ್ಲಿ ಶೇ.58ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗಿದೆ ಎಂದು ಸಭೆಯಲ್ಲಿ ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಇದರ ಜೊತೆಗೆ “ಒಳಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆಯನ್ನು ತರಬೇಕು ಮತ್ತು ಸೂಕ್ತ ನಿಯಮಾವಳಿಗಳನ್ನೂ ರೂಪಿಸಬೇಕು. ಬಡ್ತಿ ಮೀಸಲಾತಿಯಲ್ಲೂ ಒಳಮೀಸಲಾತಿ ಜಾರಿಗೆ ತರಲು ಈಗಾಗಲೇ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ” ಎಂದು ಮೂಲಗಳು ‘ಈದಿನ’ಕ್ಕೆ ಮಾಹಿತಿ ನೀಡಿವೆ.
ಸಿದ್ದರಾಮಯನ ಹುಂಡಿಯಲ್ಲಿ ಪಾದಯಾತ್ರೆ ಶುರು ಮಾಡದಂತೆ ಹೋರಾಟಗಾರರಿಗೆ ತೊಂದರೆ ಕೊಟ್ಟ ಬಗ್ಗೆಯೂ ಮುಖ್ಯಮಂತ್ರಿಗಳ ಗಮನಕ್ಕೆ ಹೋರಾಟಗಾರರು ತಂದಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಯವರು ತುರ್ತು ಸಭೆ ಕರೆಯಲು ಹೋರಾಟದ ಒತ್ತಡವೂ ಕಾರಣ ಎಂದು ಮೂಲಗಳು ಹೇಳಿವೆ. ಅಡ್ವೊಕೇಟ್ ಜನರಲ್ ಸಭೆಯಲ್ಲಿ ಇದ್ದರೆಂದು ತಿಳಿದುಬಂದಿದೆ.





