ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ. ಇಂದು ಅಂತಿಮ ಘಟ್ಟದ ನಿರ್ಣಾಯಕ ಹೋರಾಟ ನಡೆಯುತ್ತಿದೆ. ಆದರೂ, ಮಾದಿಗ ಸಮುದಾಯಗಳಿಗೆ ದೊರೆಯಬೇಕಾದ ಹಕ್ಕುಗಳು ಇನ್ನೂ ದೊರೆತಿಲ್ಲ. ಇಂದು (ಗುರುವಾರ) ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳದಿದ್ದರೆ, ಹೋರಾಟವು ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳುತ್ತದೆ ಎಂದು ಸರ್ಕಾರಕ್ಕೆ ಮಾದರ ಚೆನ್ನಯ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಒಳಮೀಸಲಾತಿ ಹೋರಾಟ ಸಮಿತಿ’ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. “ಪಕ್ಕದ ಕೇರಳ, ಪಂಜಾಬ್‌ನಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಈ ರಾಜ್ಯಗಳಲ್ಲಿ ತೊಡಕಾಗದ ಕಾನೂನುಗಳು ಕರ್ನಾಟಕದಲ್ಲಿ ಹೇಗೆ ಅಡ್ಡಿಯಾಗುತ್ತವೆ ಎಂದು ನಾವು ಸರ್ಕಾರವನ್ನು ಕೇಳಬೇಕಿದೆ. ಎಲ್ಲ ಸಮಯದಾಯಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ, ಒಳಮೀಸಲಾತಿಯನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೇಟು ಹಾಕುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ತುಮಕೂರು | ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
“ಎಡಗೈ ಸಮುದಾಯಗಳನ್ನು ಸಭೆಗೆ ಕರೆಯುತ್ತಾರೆ, ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆಂದು ನಿರೀಕ್ಷಿಸಿದ್ದೆವು. ಆದರೆ, ಸರ್ಕಾರ ತಮ್ಮ ಕ್ಯಾಬಿನೆಟ್ ಸಭೆಯಲ್ಲಿ ಎರಡು ವಾರಗಳ ಕಾಲ ಮುಂದೂಡಿತು. ಸಮುದಾಯಗಳನ್ನು ವಂಚಿಸಿತು. ಈಗ, ಸರ್ಕಾರವು 50,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಆದೇಶಿಸಿದೆ. ಆದರೆ, ಒಳಮೀಸಲಾತಿಯನ್ನು ತಪ್ಪಿಸಿದೆ. ನಾವು ನೇಮಕಾತಿಯನ್ನು ನಿಲ್ಲಿಸಿ ಎಂದು ಕೇಳುತ್ತಿಲ್ಲ. ಬದಲಾಗಿ, ಎಲ್ಲ ಸಮುದಾಯದ ಯುವಜನರಿಗೂ ಉದ್ಯೋಗಳ ಅಗತ್ಯವಿದೆ ಎಂಬುದನ್ನು ಅರಿತು, ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಕೆ ಆಗಬೇಕೆಂದು ಆಗ್ರಹಿಸುತ್ತಿದ್ದೇವೆ. ಸರ್ಕಾರವು ಇದೇ ರೀತಿ ನಿರ್ಲಕ್ಷ್ಯ ಧೋರಣೆ ತಳೆದರೆ, ಈ ಹೋರಾಟವು ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳುತ್ತದೆ” ಎಂದು ಎಚ್ಚರಿಕೆ ನೀಡಿದರು.
“ನಾಗಮೋಹನ್ ದಾಸ್ ಕಮಿಟಿಯನ್ನು ರಚಿಸಿದಿರಿ, ಕೋಟ್ಯಂತರ ಹಣ ವ್ಯಯ ಮಾಡಿದಿರಿ. ಆದರೆ, ಆ ವರದಿಯನ್ನು ಮೂಲೆಗೊತ್ತಿದ್ದೀರಿ. ನಿಮಗೆ ಬೇಕಾದಂತೆ ನೀವು ಮಾಡುವುದಾದರೆ, ಕಮಿಟಿಗಳನ್ನು ಯಾಕೆ ರಚಿಸಿದಿರಿ?. ಹಣವನ್ನೇಕೆ ವ್ಯಯಿಸಿದಿರಿ? ನಿಮ್ಮಿಚ್ಚೆಯಂತೆ ನೀವು ಒಳಮೀಸಲಾತಿಯನ್ನು ಬರೆದು, ಜಾರಿಗೊಳಿಸಿದ್ದರೆ, ನಾವು ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತಿದ್ದೆವು” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
“ಗುರುವಾರ, (ಮಾರ್ಚ್ 12) ಸಂಪುಟ ಸಭೆ ನಡೆಯಲಿದೆ. ಸಿದ್ದರಾಮಯ್ಯನವರು ಇಂದಿನ ಸಭೆಯಲ್ಲಿಯೇ ಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಮುದಾಯದ ಹೋರಾಟಗಾರರು ಯಾವ ಕ್ರಮಕ್ಕೆ ಮುಂದಾಗುತ್ತಾರೆಯೋ, ಅದರಂತೆ ಇಡೀ ಸಮುದಾಯ ಮುನ್ನಡೆಯುತ್ತದೆ” ಎಂದು ಎಚ್ಚರಿಸಿದ್ದಾರೆ.




