ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ, ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಖಂಡ್ರೆ ಅವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ, ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದ ಅಧ್ಯಕ್ಷರಾಗಿದ್ದರು. ಖಂಡ್ರೆ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇತ್ತೀಚೆಗೆ, ಶಿವಶಂಕರಪ್ಪ ಅವರು ಮೃತಪಟ್ಟಿದ್ದರಿಂದ, ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇದೀಗ, ಆ ಸ್ಥಾನಕ್ಕೆ ಖಂಡ್ರೆ ಅವರನ್ನು ನೇಮಿಸಿ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿದೆ.
ಖಂಡ್ರೆ ಅವರು ಕಳೆದ 13 ವರ್ಷಗಳಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಒಂದ ವರ್ಷಗಳ ಕಾಲ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ಅವರು ಮಹಾಸಭಾದ ಅಧ್ಯಕ್ಷರಾಗಿ ಸಮುದಾಯದ ಏಳಿಕೆಗಾಗಿ ಮತ್ತಷ್ಟು ಶ್ರಮಿಸುತ್ತಾರೆ ಎಂಬ ಭರವಸೆ ಹುಟ್ಟುಹಾಕಿದ್ದಾರೆ ಎಂದು ಸಮಿತಿ ಹೇಳಿಕೊಂಡಿದೆ.
ಅಧ್ಯಕ್ಷರಾಗಿ ಆಯ್ಕೆಯಾಗಿದ್ದರ ಕುರಿತು ಮಾತನಾಡಿರುವ ಖಂಡ್ರೆ, ತಮ್ಮನ್ನು ಆಯ್ಕೆ ಮಾಡಿದ ಕಾರ್ಯಕಾರಿ ಸಮಿತಿಗೆ ಧನ್ಯವಾದ ತಿಳಿಸಿದ್ದಾರೆ. “ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಬೇರೆ ಬೇರೆಯಲ್ಲ. ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸುವುದು ಅತ್ಯಂತ ಮುಖ್ಯವಾಗಿದೆ. ಅದಕ್ಕಾಗಿ, ನಾನು ಶ್ರಮಿಸುತ್ತೇನೆ” ಎಂದು ಹೇಳಿದ್ದಾರೆ.
“ಕರ್ನಾಟಕದ ಅಭಿವೃದ್ಧಿಗಾಗಿ ವೀರಶೈವ ಲಿಂಗಾಯತ ಸಮಾಜ ಮತ್ತು ಮಹಾಸಭಾದ ಕೊಡುಗೆ ಬಹಳಷ್ಟಿದೆ. ಲಿಂಗಾಯತ ಸಮುದಾಯದಲ್ಲಿಯೂ ಸುಮಾರು 50%ರಷ್ಟು ಬಡವರಿದ್ದಾರೆ. 30%ಗಿಂತ ಹೆಚ್ಚು ಜನರು ತೀವ್ರ ಹಿಂದುಳಿದಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ” ಎಂದಿದ್ದಾರೆ.




