ಯಾವುದೇ ಪಾಲು ಪಡೆಯದವರಿಗೆ ಅನುಕೂಲ ಮಾಡಿಕೊಡಬೇಕು ಎಂಬುದರ ಬಗ್ಗೆ ನನಗೆ ಸಹಮತವಿದೆ. ವರದಿ ತುಂಬಾ ಸ್ಪಷ್ಟವಾಗಿದೆ. ಇದು ಕೂಡಲೇ ಜಾರಿ ಆಗಬೇಕಿದೆ. ತಾಂತ್ರಿಕವಾಗಿರುವುದನ್ನು ಸರಿಪಡಿಸಬೇಕಿದೆ ಎಂದಿದ್ದಾರೆ ಕೆ.ರಾಮಯ್ಯ.
ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಅವರ ಏಕ ಸದಸ್ಯ ಆಯೋಗದ ವರದಿಯನ್ನು ಸುಟ್ಟು ಹಾಕಿರುವುದು ದುರದೃಷ್ಟಕರ ಎಂದು ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ಜಸ್ಟಿಸ್ ದಾಸ್ ಅವರ ವರದಿ ಹಾಗೂ ಒಳಮೀಸಲಾತಿ ಜಾರಿ ಸಂಬಂಧ ಬೆಂಗಳೂರಿನ ಶಾಸಕರ ಭವನ-5ರಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
ಸಂವಿಧಾನದಲ್ಲಿ ಸಹೋದರತೆ ಬಹುದೊಡ್ಡ ಸಂಗತಿ. ಸಹೋದರತೆಗೂ ನಮಗೂ ಕಿಂಚಿತ್ತು ಸಂಬಂಧವೂ ಇಲ್ಲ, ಸ್ಪರ್ಶವೂ ಇಲ್ಲ ಎನ್ನುವುದನ್ನು ವರದಿಯ ವಿರೋಧದಲ್ಲಿ ಕಾಣುತ್ತಿದ್ದೇವೆ ಎಂದು ಟೀಕಿಸಿದರು.
ಈ ವಿದ್ಯಮಾನವನ್ನು ರಾಜಕೀಯ ಲಾಭಕ್ಕೆ ನೋಡುವ ರಾಜಕೀಯ ನಾಯಕತ್ವವೂ ಮುಚ್ಚುಮರೆ ಆಟವನ್ನು ಎರಡೂ ಕಡೆಯೂ ಆಡುತ್ತಿದೆ. ಒಳಮೀಸಲಾತಿ ಜಾರಿ ವಿಳಂಬವಾಗಲೇಬೇಕು ಎಂದು ಅವರ ಮುಸುಕಿನ ನಡೆಗಳು ಹೇಳುತ್ತಿವೆ. ವರದಿಯು ಸೋರಿಕೆಯಾಗಿ ಸಿಕ್ಕಿರುವ ಮಾಹಿತಿಗಳನ್ನು ನೋಡಿದರೆ ವರದಿಯ ತಾತ್ವಿಕತೆ ತಪ್ಪು ಎನಿಸುವುದಿಲ್ಲ. ಜನಸಂಖ್ಯಾ ಆಧಾರದಲ್ಲಿ ಸೌಲಭ್ಯಗಳು ದೊರಕಬೇಕು ಎಂಬ ಆಗ್ರಹಗಳು ಪ್ರಜಾತಾಂತ್ರಿಕವಾಗಿ ಸರಿ. ಆದರೆ ಸಮಸ್ಯೆ ಇರುವುದು ಎಲ್ಲಿ ಎಂದು ನೋಡಬೇಕು. ಖಂಡಿತವಾಗಿಯೂ ನಾವು ಹೋಮೋಜೀನಿಯಸ್ ಆಗಿ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಬಹುಸಂಖ್ಯಾತವಾದ ಏನಾದರೂ ಹೆಚ್ಚಿನ ಪಾತ್ರ ವಹಿಸಿತು ಎಂದರೆ, ಆ ಬಹುಸಂಖ್ಯಾತರೊಳಗಿರುವ ಅಲ್ಪಸಂಖ್ಯಾತರಾದ ಹಲವು ಘಟಕಗಳು ಅನ್ಯಾಯಕ್ಕೆ ಒಳಗಾಗುತ್ತವೆ. ಬಹುಸಂಖ್ಯಾತವಾದ ಎಂದರೇನು, ಅಲ್ಪಸಂಖ್ಯಾತರು ಎಂದರೇನು ಎಂಬುದರ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿದ್ದಾರೆ. ಬಹುಸಂಖ್ಯಾತವಾದವೇ ನಿರ್ಧಾರ ಮಾಡುವುದಕ್ಕೆ ಬಿಡಬಾರದು ಎಂದು ಬಾಬಾಸಾಹೇಬರು ಪ್ರತಿಪಾದಿಸಿದ್ದಾರೆ. ನನ್ನದು ಕೂಡ ಅದೇ ನಿಲುವು ಎಂದು ಸ್ಪಷ್ಟಪಡಿಸಿದರು.
ಶಿಕ್ಷಣ, ರಾಜಕೀಯ ಪ್ರಾತಿನಿಧ್ಯ, ಕೈಗಾರಿಕೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಫಲಾನುಭವಿಗಳಾದವರು ಮತ್ತು ಹೊರಗುಳಿದವರ ಬಗ್ಗೆ ವರದಿ ಹೇಳಿದೆ. ಯಾವುದೇ ಪಾಲು ಪಡೆಯದವರಿಗೆ ಅನುಕೂಲ ಮಾಡಿಕೊಡಬೇಕು ಎಂಬುದರ ಬಗ್ಗೆ ನನಗೆ ಸಹಮತವಿದೆ. ವರದಿ ತುಂಬಾ ಸ್ಪಷ್ಟವಾಗಿದೆ. ಇದು ಕೂಡಲೇ ಜಾರಿ ಆಗಬೇಕಿದೆ. ತಾಂತ್ರಿಕವಾಗಿರುವುದನ್ನು ಸರಿಪಡಿಸಬೇಕಿದೆ ಎಂದರು.
ದಸಂಸ ಮುಖಂಡರಾದ ಮಾವಳ್ಳಿ ಶಂಕರ್ ಮಾತನಾಡಿ, ”ಪ್ರವರ್ಗ ‘ಎ’ಗೆ ಕೊಟ್ಟಿರುವ 1 ಪರ್ಸೆಂಟ್, ಪ್ರವರ್ಗ ‘ಬಿ’ಗೆ ಕೊಟ್ಟಿರುವ 6 ಪರ್ಸೆಂಟ್ ಮೀಸಲಾತಿಯನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಪ್ರವರ್ಗ ‘ಇ’ನಲ್ಲಿರುವವರನ್ನು ‘ಸಿ’ಗೆ ಶಿಫ್ಟ್ ಮಾಡಿದರೆ ಸಮಾನಾಂತರವಾಗುತ್ತದೆ ಮತ್ತು ಡ್ಯಾಮೇಜ್ ಕಂಟ್ರೋಲ್ ಆಗುತ್ತದೆ” ಎಂದು ಸಲಹೆ ನೀಡಿದರು.

ಹೋರಾಟಗಾರ ಎಚ್.ಗೋವಿಂದಯ್ಯ ಮಾತನಾಡಿ, ”ಹೊಲೆಯರಲ್ಲಿಯೂ ವಂಚಿತರಾದ ಸಮುದಾಯಗಳನ್ನು ‘ಬಿ’ ಗುಂಪಿನಲ್ಲಿ ಸೇರಿಸಲಾಗಿದೆ. ಏನೇನೂ ಪಡೆಯದೆ ಇರುವವರನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಲಾಗಿದೆ. ಇದು ಬಹಳ ಒಳ್ಳೆಯ ವರದಿ. ಇದನ್ನು ಕೂದಲು ಸೀಳಿಕೊಂಡು ನೋಡುತ್ತಾ ಕೂತರೆ ನಮ್ಮಂತಹ ಸಾಮಾಜಿಕ ನ್ಯಾಯದ ದ್ರೋಹಿಗಳು ಇನ್ಯಾರೂ ಇರುವುದಿಲ್ಲ” ಎಂದು ಎಚ್ಚರಿಸಿದರು.
ಚಿಂತಕ ಶಿವಸುಂದರ್ ಮಾತನಾಡಿ, ”1 ಕೋಟಿ 5 ಲಕ್ಷ ಜನ ಪರಿಶಿಷ್ಟರಲ್ಲಿ 1 ಲಕ್ಷ 45 ಸಾವಿರ ಜನ ಸರ್ಕಾರಿ ಉದ್ಯೋಗಿಗಳಿದ್ದಾರೆ. ಅಂದರೆ ನಾವು ಮಾತನಾಡುತ್ತಿರುವುದು ಪರಿಶಿಷ್ಟರಲ್ಲಿನ 1.4 ಪರ್ಸೆಂಟ್ ಸಾಮಾಜಿಕ ನ್ಯಾಯದ ಪ್ರಶ್ನೆಯ ಬಗ್ಗೆ. ಇಷ್ಟಾದರೂ ಆಗಲೇಬೇಕು. ಆದರೆ ಸಾಮಾಜಿಕ ನ್ಯಾಯ ಇಷ್ಟಕ್ಕೆ ಸೀಮಿತವಾಗಬಾರದು. ಭೂಮಿ ಪ್ರಶ್ನೆಯನ್ನು ನೋಡಬೇಕಾಗುತ್ತದೆ” ಎಂದು ಆಶಿಸಿದರು.

ಶಿಕ್ಷಣ ತಜ್ಞ ಬಿ.ಶ್ರೀಪಾದ್ ಭಟ್ ಮಾತನಾಡಿ, “ಅತಿ ಹಿಂದುಳಿದವರಿಗೆ ಸಿಗಬೇಕಾದ ನ್ಯಾಯವನ್ನು ಸುಪ್ರೀಂಕೋರ್ಟ್ ಹೇಳಿದೆ. ಇದು ಜನಸಂಖ್ಯಾ ಆಧಾರದ ಮೇಲೆ ಮಾಡಿರುವ ಮೀಸಲಾತಿ ವಿಂಗಡಣೆಯಲ್ಲ; ಪ್ರಾಧಾನ್ಯತೆಯ ಆಧಾರದ ವಿಂಗಡಣೆ. ವರದಿಯನ್ನು ಸುಡುವುದು ಒಳ್ಳೆಯದಲ್ಲ. ಅದರಿಂದ ಅಪನಂಬಿಕೆಗಳು ಹೆಚ್ಚಾಗುತ್ತವೆ” ಎಂದರು.
ಇದನ್ನೂ ಓದಿರಿ: ಅಲೆಮಾರಿಗಳನ್ನು ತಾಯ್ತನದಿಂದ ಪೊರೆದವರು ಮಾದಿಗರು: ಗೋಸಂಗಿ ಲೋಕೇಶ್
ಕಾಂಗ್ರೆಸ್ ವಕ್ತಾರೆ ಯು.ಟಿ.ಫಾರ್ಝಾನಾ ಮಾತನಾಡಿ, ”ಒಳಮೀಸಲಾತಿಯನ್ನು ವಿರೋಧಿಸುವವರಿಗೆ ಮೀಸಲಾತಿ ಪಡೆಯುವ ಅರ್ಹತೆ ಇರುವುದಿಲ್ಲ. ವರ್ಣವ್ಯವಸ್ಥೆಯಲ್ಲಿ ಶೋಷಿತರಾದವರು, ತಮ್ಮ ಕೆಳಗಿನವರ ಪಾಲನ್ನು ವಿರೋಧಿಸುವುದು ಸರಿಯಲ್ಲ. ಒಳಮೀಸಲಾತಿಯನ್ನು ವಿರೋಧಿಸುವವರಿಗೆ ಬ್ರಾಹ್ಮಣ್ಯವನ್ನು ವಿರೋಧಿಸುವ ಹಕ್ಕು ಇರುವುದಿಲ್ಲ” ಎಂದು ಹೇಳಿದರು.
ಸಭೆಯಲ್ಲಿ ಪ್ರೊ.ದೊರೆರಾಜು, ಬಸವರಾಜ ಕೌತಾಳ್, ಡಾ.ರವಿಕುಮಾರ್ ನೀಹ, ರೂಮಿ ಹರೀಶ್, ಅಗ್ರಹಾರ ಕೃಷ್ಣಮೂರ್ತಿ, ಡಿ. ಉಮಾಪತಿ, ಪ್ರೊ. ಬಿ.ಸಿ. ಬಸವರಾಜ್, ಲೇಖಾ ಅಡವಿ, ಹನುಮಂತಗೌಡ, ಹರ್ಷಕುಮಾರ್ ಕುಗ್ವೆ, ಡಾ. ಹುಲಿಕುಂಟೆ ಮೂರ್ತಿ, ವಿಕಾಸ್ ಆರ್ ಮೌರ್ಯ, ಸಿ.ಜಿ. ಲಕ್ಷ್ಮೀಪತಿ, ವಿ.ಎಲ್.ನರಸಿಂಹಮೂರ್ತಿ, ಆರ್.ವಿಜಯಕುಮಾರ್, ಡಾ.ಅರುಂಧತಿ, ಡಾ.ಬಸವರಾಜ್, ಡಾ.ವೈ.ಕೆ.ಬಾಲಕೃಷ್ಣಪ್ಪ, ಗುರುಪ್ರಸಾದ್ ಕಂಟಲಗೆರೆ, ಡಾ.ಲಕ್ಷ್ಮೀರಂಗಯ್ಯ, ಜನಾರ್ದನ ಕೆಸರಗದ್ದೆ, ರವಿಕುಮಾರ್ ಬಾಗಿ, ಚಂದ್ರು ತರಹುಣಿಸೆ, ರುದ್ರುಪುನೀತ್, ಭೀಮಾಶಂಕರ್, ಸರೋವರ್ ಬೆಂಕಿಕೆರೆ, ನರಸೀಯಪ್ಪ, ಸಿದ್ದಪ್ಪ ಮೂಲಗೆ, ಡಾ.ವಾಸು ಹೆಚ್.ವಿ, ನಾಗೇಗೌಡ ಕೀಲಾರ ಹಲವರು ಪಾಲ್ಗೊಂಡಿದ್ದರು.





