ಇತ್ತೀಚಿಗೆ ಪುರುಷ ಸಲಿಂಗಿಗಳಲ್ಲೇ ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದು ಆತಂಕ ಮೂಡಿಸುತ್ತದೆ. ಬೇರೆ ಬೇರೆ ಆಪ್‌ಗಳ ಮೂಲಕ, ಹಾಸ್ಟೆಲ್ ಗಳಲ್ಲಿ ಸ್ನೇಹಿತರ ಸಂಪರ್ಕ ಸಾಧಿಸುತ್ತಾರೆ. ಯಾಕೆಂದರೆ ಇದು ಕಾನೂನು ಬಾಹಿರ ಅಲ್ಲ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೈಸೂರಿನ ಜೆ ಕೆ ಅಡಿಟೋರಿಯಂನಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಏಡ್ಸ್ ತಡೆಯಲು ಹೆಚ್ಚಿನ ಶ್ರಮ ಹಾಕಬೇಕಾದ ಅನಿವಾರ್ಯತೆ ಇದೆ. ಕೇವಲ ಜಾಗೃತಿ ಮೂಡಿಸುವ ಮೂಲಕವೇ ತಡಯಬೇಕಾದ ಹೊಣೆಗಾರಿಕೆ ಇದೆ. ಸರ್ಕಾರ, ಪಾಲಕರು, ಶಿಕ್ಷಕರು, ಸಮಾಜ, ಮಾಧ್ಯಮಗಳ ಸಹಕಾರದಿಂದ ಇದರ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ” ಎಂದರು.
“ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಸೋಂಕಿತರ ಜೊತೆ ನಾವಿದ್ದೇವೆ ಎಂದು ಧೈರ್ಯ ಹೇಳಲು, ಏಡ್ಸ್ ನಿಂದ ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಆಚರಿಸುತ್ತದೆ” ಎಂದು ಹೇಳಿದರು.
“2004 ರಿಂದ 2025ರವರೆಗೆ ಒಂದು ಲಕ್ಷಕ್ಕೂ ಅಧಿಕ ಜನರು ಏಡ್ಸ್ ಗೆ ಬಲಿಯಾಗಿದ್ದಾರೆ. ಮೊದಲು ಏಡ್ಸ್ ಕುರಿತು ಅಜ್ಞಾನದಿಂದ ಸಮಾಜದಲ್ಲಿ ಬಹಳ ಸಮಸ್ಯೆ ಆಗಿತ್ತು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ HIV ಪೀಡಿತರಿಗೆ ಭರವಸೆ ತುಂಬುವ ಕೆಲಸ ಆರೋಗ್ಯ ಇಲಾಖೆ ಮಾಡಿದೆ. ಏಡ್ಸ್ ಬಂದಾಗ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಎಲ್ಲರಂತೆ ಬದುಕಬಹುದು. ಸರ್ಕಾರ ಉಚಿತ ಮಾನಸಿಕ ಧೈರ್ಯ ತುಂಬುವುದರ ಜೊತೆಗೆ ಉಚಿತವಾಗಿ ಚಿಕಿತ್ಸೆ, ಮಡಿಸಿನ್ ನೀಡುತ್ತದೆ” ಎಂದು ತಿಳಿಸಿದರು.





