ಇರಾನ್ ಮೇಲೆ ಇಸ್ರೇಲ್- ಅಮೆರಿಕ ನಡೆಸುತ್ತಿರುವ ದಾಳಿಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ – ಜೆಎಂಎಸ್ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಜೆಎಂಎಸ್ ಬಿಡುಗಡೆಗೊಳಿಸಿದೆ.
“ಸಾಮ್ರಾಜ್ಯಶಾಹಿಯ ಯುದ್ಧದಾಹದ ಈ ಕ್ರೂರ ನಡವಳಿಕೆಯಿಂದ ಇಡೀ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಹೆಚ್ಚಿ ವಿನಾಶಕಾರಿ ಪರಿಣಾಮ ಬೀರುತ್ತದೆ. ಈ ಅಮಾನುಷ ದಾಳಿ ಮಹಿಳೆಯರು ಮತ್ತು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಯುದ್ಧ ವರದಿ | ಇರಾನ್ ಮೇಲೆ ದಾಳಿ; ಭಾರತೀಯರಿಗೆ ಸಹಾಯವಾಣಿ ಬಿಡುಗಡೆ
“ಪುಟ್ಟ ಮಕ್ಕಳು ಓದುತ್ತಿರುವ ಪ್ರಾಥಮಿಕ ಶಾಲೆಯ ಮೇಲಿನ ಅತ್ಯಂತ ಅಮಾನವೀಯ ದಾಳಿಯು ಹಲವಾರು ಮಕ್ಕಳ ಸಾವಿಗೆ ಕಾರಣವಾಗಿದ್ದು, ಇದು ಅಮೆರಿಕದ ಸಾಮ್ರಾಜ್ಯಶಾಹಿಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ಟೀಕಿಸಿದೆ.
“ಇರಾನ್ ಮೇಲಿನ ಈ ದಾಳಿಯು ರಾಷ್ಟ್ರೀಯ ಸಾರ್ವಭೌಮತ್ವ, ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಎಲ್ಲಾ ಒಡಂಬಡಿಕೆಗಳ ಮೂಲ ತತ್ವವನ್ನು ಉಲ್ಲಂಘಿಸುತ್ತದೆ. ತಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡುವ ಅಥವಾ ಹೋರಾಟ ಮಾಡುವುದು ಇರಾನ್ ಜನರ ಹಕ್ಕು” ಎಂದೂ ಹೇಳಿದೆ.
“ಪ್ರಜಾಪ್ರಭುತ್ವ ಸ್ಥಾಪನೆಯ ಹೆಸರಿನಲ್ಲಿ ಬಲವಂತದ ಆಡಳಿತ ಬದಲಾವಣೆಯನ್ನು ಹೇರುತ್ತ ತನ್ನ ಸಾಮ್ರಾಜ್ಯಶಾಹಿ ಗುರಿಯನ್ನು ಅಮೆರಿಕ ಮರೆಮಾಚಲು ಮಾಡುತ್ತಿರುವ ಪ್ರಯತ್ನವು ಸಂಪೂರ್ಣ ಬೂಟಾಟಿಕೆಯಾಗಿದೆ. ಅಮೆರಿಕ ಇರಾನ್ ಮಧ್ಯೆ ಮಾತುಕತೆ ನಡೆಯುತ್ತಿರುವ ಮಧ್ಯೆಯೇ ನಡೆಸಿದ ಆಕ್ರಮಣವು ಅಮೆರಿಕದ ದಾಳಿಯ ಉದ್ದೇಶ ಬೇರೆಯೇ ಇತ್ತು ಎಂಬುದನ್ನು ತೋರಿಸುತ್ತದೆ” ಎಂದು ಅನುಮಾನ ವ್ಯಕ್ತಪಡಿಸಿದೆ.
“ಆ ಪ್ರದೇಶದ ಸಾಮಾನ್ಯ ಜನರು ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಜೀವನ ಮತ್ತು ಜೀವನೋಪಾಯವು ಅಪಾಯದಲ್ಲಿದೆ. ಈ ಭಯಾನಕ ದಾಳಿಯು ಶಾಂತಿ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ನಾವು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪರವಾಗಿ, ಇರಾನ್ ಮತ್ತು ಇರಾನಿನ ಜನರಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ” ಎಂದು ಜೆಎಂಎಸ್ ಅಧ್ಯಕ್ಷೆ ಚಂದ್ರಕುಮಾರಿ, ಪ್ರಧಾನ ಕಾರ್ಯದರ್ಶಿ ದೇವಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿ ಮರಳಿ ಬಂದ ತಕ್ಷಣವೇ ಈ ದಾಳಿ ನಡೆದಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಕಳವಳಕಾರಿ ಬೆಳವಣಿಗೆಯಾಗಿದೆ. ಇರಾನ್ ದೇಶವು ದೀರ್ಘಕಾಲದಿಂದ ಭಾರತದ ಸ್ನೇಹಿ ದೇಶವಾಗಿದ್ದು, ಭಾರತ ಸರ್ಕಾರವು ಇರಾನ್ ಮೇಲಿನ ಈ ಆಕ್ರಮಣಕಾರಿ ದಾಳಿಯ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಯುದ್ಧವನ್ನು ನಿಲ್ಲಿಸಲು ತುರ್ತು ರಾಜತಾಂತ್ರಿಕ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದೆ.





