ಕರ್ನಾಟಕ ಪತ್ರಕರ್ತೆಯರ ಸಂಘ ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಹಿರಿಯ ಮಹಿಳಾ ಪತ್ರಕರ್ತರಾದ ಸುಶೀಲಾ ಸುಬ್ರಹ್ಮಣ್ಯ ಹಾಗೂ ನೀಳಾ ಎಂ.ಎಚ್ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು.
ಕರ್ನಾಟಕ ಪತ್ರಕರ್ತೆಯರ ಸಂಘ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಸಿದ್ದರಾಮಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ” ವನ್ನು ಸಿಎಂ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಉದ್ಘಾಟಿಸಿ, ಪ್ರಶಸ್ತಿ ವಿತರಿಸಿದರು.
ಬಳಿಕ ಮಾತನಾಡಿದ ಕೆ.ವಿ.ಪ್ರಭಾಕರ್, “ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತೆಯರ ಪ್ರಮಾಣ ಹೆಚ್ಚಾದಷ್ಟೂ ಆತ್ಮವಂಚನೆಯ ಪ್ರಮಾಣ ಕಡಿಮೆಯಾಗಿ ವಿದ್ಯಮಾನಗಳನ್ನು ಅಂತಃಕರಣದಿಂದ ಕಾಣುವ ಪ್ರಮಾಣವೂ ಹೆಚ್ಚಾಗುತ್ತದೆ. ಅಭಿವ್ಯಕ್ತಿ ಎನ್ನುವುದು ಮಹಿಳೆಯರ ಚೈತನ್ಯದಲ್ಲಿಯೇ ಇದೆ. ಪತ್ರಕರ್ತೆಯರು ಸಹಜವಾಗಿ ಅಭಿವ್ಯಕ್ತಿಗೊಂಡಷ್ಟು ಸಮಾಜ ಸ್ವಾಸ್ಥವಾಗಿರುತ್ತದೆ” ಎಂದರು.
“ಪತ್ರಕರ್ತೆಯರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲೇ ನಾನೊಂದು ಮಾತು ಹೇಳಿದ್ದೆ, “ಇಡೀ ವಿಶ್ವಕ್ಕೆ ಕೋವಿಡ್ ಆವರಿಸಿದಾಗ ಈ ಸಂದರ್ಭವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸಿದ್ದು ಮಹಿಳಾ ಅಧ್ಯಕ್ಷರು ಇರುವ ದೇಶಗಳು ಮಾತ್ರ. ಇವತ್ತಿನವರೆಗೂ ಯುದ್ಧವನ್ನು ರೋಚಕವಾಗಿ, ವಿಜ್ರಂಭಿಸಿ ಬರೆದ ಪತ್ರಕರ್ತೆಯನ್ನು ನಾನು ನೋಡಿಲ್ಲ. ಹೀಗಾಗಿ ಪತ್ರಕರ್ತೆಯರ ಅಭಿವ್ಯಕ್ತಿ ಹೆಚ್ಚೆಚ್ಚು ಸಮಾಜಮುಖಿ ಆಗಿರುತ್ತದೆ” ಎಂದು ಹೇಳಿದರು.
“ಆರಂಭದಲ್ಲಿ ಬೆರಳೆಣಿಕೆಯಷ್ಟು ಪತ್ರಕರ್ತೆಯರು ಇದ್ದರು. ಈಗ ಅವರ ಸಂಖ್ಯೆ ಸಮಾಧಾನಕರ ಮಟ್ಟದಲ್ಲಿ ಹೆಚ್ಚಳಗೊಂಡಿದೆ. ಕನ್ನಡ ಪತ್ರಿಕೋದ್ಯಮವನ್ನು ಕಟ್ಟಿ ಬೆಳೆಸುವಲ್ಲಿ ಪತ್ರಕರ್ತೆಯರು ಸಮ ಸಮವಾದ ಶ್ರಮವನ್ನು ಹಾಕಿದ್ದಾರೆ. ಪತ್ರಕರ್ತೆಯರು ಈಚಿನ ದಿನಗಳಲ್ಲಿ ಪುರವಣಿ, ಪಾಕ್ಷಿಕ, ಮಾಸಿಕಗಳಿಗೆ ಸೀಮಿತಗೊಳ್ಳುತ್ತಿದ್ದಾರೆ. ಎಲ್ಲ ವಿಭಾಗಗಳಲ್ಲೂ ಅದರಲ್ಲಿಯೂ ರಾಜಕೀಯ ವರದಿಗಾರಿಕೆಯಲ್ಲಿ ಮುದ್ರಣ ಕ್ಷೇತ್ರದ ಪತ್ರಕರ್ತೆಯರ ಸಂಖ್ಯೆ ಹೆಚ್ಚಳಗೊಳ್ಳಬೇಕಿದೆ” ಎಂದು ಆಶಿಸಿದರು.
“ಪತ್ರಕರ್ತೆಯರನ್ನು ಆರ್ಥಿಕ ಹಾಗೂ ಮಾಧ್ಯಮ, ರಾಜಕೀಯ ಸಲಹೆಗಾರರನ್ನಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಇಷ್ಟಪಡುತ್ತೇನೆ. ಇಲ್ಲ ಎಂಬ ಹಳಹಳಿಕೆ ಬಿಡಿ. ಇರುವ ಒಗ್ಗಟ್ಟಿನಲ್ಲಿಯೇ ಅವಕಾಶಗಳನ್ನು ಪಡೆದುಕೊಳ್ಳಿ.
ಮಹಿಳೆಯರಿಗಿರುವ ಒಳನೋಟ ಗಾಢವಾದ್ದದ್ದು. ಈ ಒಳನೋಟಗಳು ಸಾಮಾಜಿಕ, ಅರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳ ಅಭಿವೃದ್ದಿಗೆ ವಿಶಿಷ್ಡ ಸಂರಚನೆ ಒದಗಿಸಬಲ್ಲದು” ಎಂದರು.
ಹಿರಿಯ ಪತ್ರಕರ್ತೆ ಪೂರ್ಣಿಮಾ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ವಿಶೇಷ ಉಪನ್ಯಾಸ ನೀಡಿದ ಪುಷ್ಪಾ ಗಿರಿಮಾಜಿ, ಪತ್ರಕರ್ತೆಯರ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಳಾ ಕಡಕೋಳ ಮತ್ತು ಪ್ರಶಸ್ತಿ ಪುರಸ್ಕೃತ ಸುಶೀಲಾ ಸುಬ್ರಮಣ್ಯ ಮತ್ತು ಎಂ.ಎಚ್.ನೀಳಾ ಅವರು ಉಪಸ್ಥಿತರಿದ್ದರು.





