“ನಮ್ಮ ದೇಶದ ಜನಸಾಮಾನ್ಯರು ಬಿಡಿ ವಕೀಲರು, ನ್ಯಾಯಾಧೀಶರು ಕೂಡ ಪರಿಪೂರ್ಣವಾಗಿ ಸಂವಿಧಾನವನ್ನು ಓದಿಕೊಂಡಿಲ್ಲ” ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಯಂಗ್ ಬ್ರಿಗೇಡ್ ಸೇವಾದಳ ಆಯೋಜಿಸಿದ್ದ ‘ಸಂವಿಧಾನ ಸಮರ್ಪಣಾ ದಿನಾಚರಣೆ’ ಮತ್ತು ‘ಎಸ್‌ಐಆರ್ ವಿರೋಧಿ ಮಂಥನ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ರಾಜಕೀಯ ಅಧಿಕಾರ ಎಂಬುದು ಕಾನೂನುಗಳನ್ನು ಮಾಡುವ, ಜಾರಿಗೊಳಿಸುವ ಹಾಗೂ ಉಲ್ಲಂಘಿಸಿದವರನ್ನು ಶಿಕ್ಷಿಸುವ ಅಧಿಕಾರ. ಒಂದು ಕಾಲದಲ್ಲಿ ಈ ಅಧಿಕಾರ ಸಾಮ್ರಾಟರು, ರಾಜರ ಕೈಯಲ್ಲಿದ್ದವು. ಕ್ರಮೇಣ ರಾಜಪ್ರಭುತ್ವಗಳು ಅಳಿಸಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಪ್ರಜಾಪ್ರಭುತ್ವದಲ್ಲಿ ಕಾನೂನುಗಳನ್ನು ರೂಪಿಸಲು ಶಾಸಕಾಂಗ, ಜಾರಿಗೊಳಿಸಲು ಕಾರ್ಯಾಂಗ ಹಾಗೂ ಪಾಲನೆ ಪಾಡುವಂತೆ ನೋಡಿಕೊಳ್ಳಲು ನ್ಯಾಯಾಂಗಗಳು ರಚನೆಯಾದವು. ಆದರೆ, ಈ ಅಂಗಗಳು ಈಗ ಶ್ವೇಚ್ಛಾಚಾರದಲ್ಲಿ ಮುಳುಗಿವೆ” ಎಂದು ದಾಸ್ ಹೇಳಿದರು.
“ಪ್ರಜಾಪ್ರಭುತ್ವವಾ-ಸಾರ್ವಾಧಿಕಾರವಾ, ಜಾತಿವಾದವಾ-ಜಾತ್ಯತೀತವಾದವಾ ಎಂಬುದು ಈಗ ನಮ್ಮೆದುರಿರುವ ಪ್ರಶ್ನೆ. ಭಾರತ ಪ್ರಜಾಪ್ರಭುತ್ವವಾದಿ ಸಂವಿಧಾನಾತ್ಮಕ ರಾಷ್ಟ್ರ. ರಾಜಪ್ರಭುತ್ವ, ನಿರಂಕುಶವಾದ, ಸರ್ವಾಧಿಕಾರವನ್ನು ಅರ್ಥ ಮಾಡಿಕೊಳ್ಳದೆ ಪ್ರಜಾಪ್ರಭುತ್ವ ಅರ್ಥವಾಗುವುದಿಲ್ಲ. ಪ್ರಜಾಪ್ರಭತ್ವವನ್ನು ಅರಿಯಲು ಹಿಂದಿನ ನಾನಾ ರೀತಿಯ ಆಡಳಿತಗಳನ್ನು ಅರ್ಥೈಸಿಕೊಳ್ಳಬೇಕು. ಆಗ ಪ್ರಜಾಪ್ರಭುತ್ವ ಮತ್ತು ಅದನ್ನು ಪ್ರತಿಪಾದಿಸುವ ಸಂವಿಧಾನ ಅರ್ಥವಾಗುತ್ತದೆ” ಎಂದರು.
“ನಮ್ಮ ಪೂರ್ವಜರು ಶಿವಭಕ್ತರು. ನಮ್ಮಅಜ್ಜಿ ಪ್ರತಿ ಸೋಮವಾರ ಉಪವಾಸ ಮಾಡುತ್ತಿದ್ದರು. ನನ್ನ ತಾಯಿ ವೆಂಕಟೇಶನ ಭಕ್ತೆ ಅವರು ಶನಿವಾರ ಉಪವಾಸ ಮಾಡುತ್ತಿದ್ದರು. ಆದರೆ, ನನ್ನ ಪತ್ನಿ ಯಾವ ದಿನವೂ ಉಪವಾಸ ಮಾಡಲಿಲ್ಲ. ಕ್ರಮೇಣ ಉಪವಾಸದ ದಿನಗಳು ಬದಲಾದವು. ಅಂತೆಯೇ, ನಮ್ಮ ಆಚಾರ-ವಿಚಾರ, ಆಚರಣೆ, ಉಡುಗೆ-ತೊಡುಗೆಗಳು ಬದಲಾಗುತ್ತವೆ. ಆದರೆ, ಈ ಬದಲಾವಣೆಗೆ ಯಾವುದೇ ಆಕ್ಷೇಪಗಳು, ವಿರೋಧಗಳು ವ್ಯಕ್ತವಾಗಲಿಲ್ಲ. ಅವರ ಆಚರಣೆ-ನಂಬಿಕೆಗೆ ಅವಕಾಶವಿತ್ತು. ಅಂತಹ ಒಳಗೊಳ್ಳುವಿಕೆ ಸಾಧ್ಯವಾದದ್ದು ಸಂವಿಧಾನ ನೀಡಿರುವ ಹಕ್ಕು ಮತ್ತು ಸ್ವಾತಂತ್ರ್ಯದಿಂದ” ಎಂದು ವಿವರಿಸಿದರು.
“ಶತಮಾನಗಳ ಹಿಂದೆ ಸೇವೆಗಳ ವಿನಿಮಯ, ಉತ್ಪನ್ನಗಳ ವಿನಿಮಯ, ವಸ್ತುಗಳ ವಿನಿಮಯದೊಂದಿಗೆ ನಮ್ಮ ಹಳ್ಳಿಗಳು ಇದ್ದವು. ಸ್ವಾತಂತ್ರ್ಯ ನಂತರ ನಾವು ಮಿಶ್ರ ಆರ್ಥಿಕತೆ (ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರ) ಅಳವಡಿಸಿಕೊಂಡೆವು. ಆದರೆ, ಈಗ ಜಾಗತೀಕರಣದ ಹೊಡೆತಕ್ಕೆ ಸಿಲುಕಿ ಎಲ್ಲವೂ ಖಾಸಗೀಕರಣಗೊಳ್ಳುತ್ತಿವೆ. ಆದರೆ, ನಾವು ಮೌನವಾಗಿದ್ದೇವೆ. ಸಂವಿಧಾನವು ಶಿಕ್ಷಣ, ಆರೋಗ್ಯವು ಖಾಸಗೀಕರಣ ಆಗಬಾರದು ಎಂದು ಹೇಳುತ್ತದೆ. ನ್ಯಾಯಾಂಗವೂ ಖಾಸಗೀಕರಣಗೊಂಡರೆ, ನ್ಯಾಯ ಸಿಗುವುದು ಸಾಧ್ಯವೇ? ನಮ್ಮ ಸಂವಿಧಾನ ರಚನಾಕಾರರು ಕಲ್ಯಾಣ ರಾಜ್ಯದ ಕನಸು ಕಂಡಿದ್ದರು. ಮೂಲಸೌಕರ್ಯಗಳನ್ನು ಸರ್ಕಾರಗಳೇ ಒದಗಿಸಬೇಕು ಎಂಬ ಆಶಯ ಹೊಂದಿದ್ದರು. ಆದರೆ, ಈಗ ಎಲ್ಲವೂ ಖಾಸಗೀಕರಣಗೊಂಡು, ಜನರು ತುಳಿತಕ್ಕೊಳಗಾಗಿದ್ದಾರೆ. ಆದರೂ, ಸಂವಿಧಾನ ಬರೆದವರ ಕನಸು ಜನರಿಗೆ ಅರ್ಥವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸ್ವಾತಂತ್ರ್ಯ ಪೂರ್ವದಲ್ಲಿ ದೇಶವು ಹುಟ್ಟಿಗೊಂದು ಜಾತಿ, ಕೆಲಸಕ್ಕೊಂದು ಜಾತಿಯನ್ನು ಹೊಂದಿತ್ತು. ಸತ್ತರೆ ಸಂಸ್ಕಾರಕ್ಕೂ ಜಾತಿ, ಪ್ರತ್ಯೇಕ ಭೂಮಿ ಇತ್ತು. ರೈತನ ಮಗ ರೈತನೇ, ಚಮ್ಮಾರನ ಮಗ ಚಮ್ಮಾರನೇ, ಆಳುವವರ ಮಗ ಆಳುವವನೇ ಆಗಬೇಕೆಂಬ ಕಟ್ಟುಪಾಡುಗಳಿದ್ದವು. ಇಂದಿಗೂ ಜಾತಿ ಅಸಮಾನತೆ ಮುಂದುವರೆದಿದೆ. ಈ ಅಸಮಾನತೆ ಅರ್ಥವಾದರೆ, ಸಂವಿಧಾನದ ಸಾಮಾಜಿಕ ನ್ಯಾಯ ಅರ್ಥವಾಗುತ್ತದೆ.
ಸ್ವಾತಂತ್ರ್ಯಾ ನಂತರ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗಡಿ, ಎಲ್ಲೆ, ಧ್ವಜವನ್ನು ಗುರುತಿಸಿ ಭಾರತದ ರಚನೆಯಾಯಿತು. ಸ್ವಾತಂತ್ರ್ಯಕ್ಕೂ ಮುನ್ನ ಭಾರತವು ಒಂದು ರಾಷ್ಟ್ರವಾಗಿ ಇರಲಿಲ್ಲ. ಭಾರತವು ರಾಷ್ಟ್ರವಾಗಿದ್ದು, ಸಂವಿಧಾನದಿಂದ” ಎಂದರು.
“ಎಲ್ಲ ಕ್ಷೇತ್ರಗಳಿಗೂ ಮಹಿಳೆಯರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಪ್ರವೇಶಿಸಲು, ಸ್ಥಾನಮಾನ ಗಳಿಸಿಕೊಳ್ಳಲು, ಸಾಧನೆಗೈಯಲು ಕಾರಣ ಭಾರತದ ಸಂವಿಧಾನ. ದೇಶದಲ್ಲಿ ಜಾತೀಯತೆ ಸಂಪೂರ್ಣವಾಗಿ ಹೋಗಿಲ್ಲ. ಆದರೆ, ಜಾತಿ ಅಸಮಾನತೆಗೆ ಒಂದಷ್ಟು ಪೆಟ್ಟುಕೊಡಲು ಸಾಧ್ಯವಾಗಿದೆ. ಸಂವಿಧಾನದಿಂದಲೇ ಮೋದಿ ಪ್ರಧಾನಿಯೂ, ದ್ರೌಪದಿ ಮುರ್ಮು ರಾಷ್ಟ್ರಪತಿಯೂ ಆಗಿದ್ದಾರೆ. ಈಗಲೂ ಒಂದಷ್ಟು ಜನರಿಗೆ ಶಿಕ್ಷಣ ಇಲ್ಲ, ಅವಕಾಶಗಳಿಲ್ಲ, ಉತ್ತಮ ಮೂಲ ಸೌಕರ್ಯಗಳಿಲ್ಲ. ಕೃಷಿ ಬಿಕ್ಕಟ್ಟಿನಲ್ಲಿದೆ. ಕಾರ್ಮಿಕರು, ರೈತರು ಸೇರಿದಂತೆ ಬಹುಸಂಖ್ಯಾತರು ಸಂಕಷ್ಟದಲ್ಲಿದ್ದಾರೆ. ‘ಇದಕ್ಕೆ ಸಂವಿಧಾನ ಕಾರಣ, ಅದನ್ನು ಬದಲಿಸಬೇಕು’ ಎಂದು ಹಲವರು ವಾದಿಸುತ್ತಾರೆ. ಆದರೆ, ಇದಕ್ಕೆ ಕಾರಣ ಸಂವಿಧಾನವಲ್ಲ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ವಿಫಲತೆ. ಸಂವಿಧಾನ ಅರ್ಥವಾಗಿದ್ದರೆ, ಸಂವಿಧಾನವನ್ನು ಸರಿಯಾಗಿ ಪಾಲಿಸಿದ್ದರೆ, ಎಲ್ಲದರಲ್ಲೂ ಅಭಿವೃದ್ದಿಯನ್ನು ನಾವು ನೋಡಬಹುದಿತ್ತು. ಆದರೆ, ಆಳುವವರ ವೈಫಲ್ಯ ಮತ್ತು ಕುತಂತ್ರಗಳಿಂದ ಸಂವಿಧಾನವನ್ನು ದೂರಲಾಗುತ್ತಿದೆ. ಸಂವಿಧಾನವನ್ನು ಬಡಮೇಲು ಮಾಡಿದರೆ, ಭಾರತವೇ ಇಲ್ಲವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೇವಾದಳದ ಉಸ್ತುವಾರಿ ಮುರುಳೀಧರ ಹಾಲಪ್ಪ, “ಸಂವಿಧಾನ ಬಂದು 75 ವರ್ಷವಾದರೂ, ಅಂಬೇಡ್ಕರರು ಕೊಟ್ಟಿರುವ ಬಳುವಳಿಯನ್ನು ನಾವು ಕಾಪಾಡಿಕೊಳ್ಳಬೇಕಿದೆ. ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನ ಕುರಿತು ಅರಿವು ಮೂಡಿಸಬೇಕು. ಸಂವಿಧಾನ ನೀಡಿರುವ ಹಕ್ಕುಗಳ ರಕ್ಷಣೆಗಾಗಿ ಯುವಜನರು ಕೆಲಸ ಮಾಡಬೇಕು” ಎಂದು ಹೇಳಿದರು.
“ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಮತದಾರರನ್ನು ಟಾರ್ಗೆಟ್ ಮಾಡಿಕೊಂಡು ಕಿತ್ತುಹಾಕುವ, ಹೊಸದಾಗಿ ನಾನಾ ರೀತಿಯಲ್ಲಿ ಅಧಿಕ ಸಂಖ್ಯೆಯ ಮತದಾರರನ್ನು ಸೇರಿಸಿದ್ದರ ಹುನ್ನಾರದ ಕುರಿತು ನಾವು ಈಗ ಹೆಚ್ಚು ಮಾತನಾಡಬೇಕಿದೆ. ಹೊರಗಿನಿಂದ ಬಂದು ಮತಪಟ್ಟಿಯಲ್ಲಿ ಸೇರಿರುವವರನ್ನು ಗುರುತಿಸುವುದು ಎಸ್‌ಐಆರ್ ಉದ್ದೇಶವೆಂದು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ, ಹೊರಗಿಂದ ಬಂದವರನ್ನು ಗುರುತಿಸಬೇಕೆಂದು ಈಶಾನ್ಯದ ಗಡಿ ರಾಜ್ಯಗಳಲ್ಲಿ ಎಸ್‌ಐಆರ್ ಮಾಡಬೇಕಿತ್ತು, ಅಸ್ಸಾಂನಲ್ಲಿ ಮಾಡಬೇಕಿತ್ತು. ಆದರೆ, ಅಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಬದಲಾಗಿ, ಬಿಜೆಪಿ ಗುರಿಯಾಗಿಸಿಕೊಂಡಿರುವ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಬಲವಾಗಿ ನಡೆಯುತ್ತಿದೆ” ಎಂದರು.
“ಆದಾಗ್ಯೂ, ದೇಶದ ಅಸಂಖ್ಯ ಮೂಲ ನಿವಾಸಿಗಳು ಇಂದಿಗೂ ಮತದಾನದ ಹಕ್ಕು ಪಡೆಯಲಾಗಿಲ್ಲ. ಚುನಾವಣಾ ಆಯೋಗ ಈವರೆಗೆ ಅವರನ್ನು ಗುರುತಿಸಿ, ಮತದಾನದ ಹಕ್ಕು ನೀಡಿಲ್ಲ. ಮೂಲ ನಿವಾಸಿಗಳಿಗೆ ಮತದಾನದ ಹಕ್ಕು ಒದಗಿಸುವುದು ಆಯೋಗದ ಆದ್ಯ ಕರ್ತವ್ಯ ಆಗಬೇಕಿತ್ತು. ಆದರೆ, ಆಯೋಗವು ನಿರ್ದಿಷ್ಟ ಸಮುದಾಯಗಳ ಜನರನ್ನು ಮತಪಟ್ಟಿಯಿಂದ ಹೊರಹಾಕಲು ಯತ್ನಿಸುತ್ತಿದೆ” ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಸೇರಿದಂತೆ ಹಲವರಿದ್ದರು.




