ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಬುಧವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಡಿ ಕೆ ಶಿವಕುಮಾರ್ ಪರ ಘೋಷಣೆಗಳನ್ನು ಕೂಗಿ ಸ್ವಾಗತಿಸಿದ ಘಟನೆ ನಡೆಯಿತು.
ಮಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಐತಿಹಾಸಿಕ ನಾರಾಯಣ ಗುರು-ಮಹಾತ್ಮ ಗಾಂಧಿ ಸಂವಾದದ ಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ಟರ್ಮಿನಲ್‌ನಿಂದ ವೇಣುಗೋಪಾಲ್ ಅವರು ನಿರ್ಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರ ಗುಂಪೊಂದು ಶಿವಕುಮಾರ್‌ಗೆ ಬೆಂಬಲ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿತು. ಅತ್ತ ಸಿದ್ದರಾಮಯ್ಯ ಇಲ್ಲಿಗೆ ಬಂದ ನಂತರ ಅವರ ಬೆಂಬಲಿಗರು ‘ಸಿದ್ದು, ಸಿದ್ದು, ಪೂರ್ಣಾವಧಿ ಸಿದ್ದು’ (ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ) ಎಂಬ ಘೋಷಣೆಗಳೊಂದಿಗೆ ಪ್ರತಿ ಘೋಷಣೆ ಕೂಗಿದರು.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಸಮಾಧಾನ, ಬಣ ರಾಜಕೀಯ ಇನ್ನೂ ಶಮನಗೊಂಡಿಲ್ಲ ಎಂಬುದು ಈ ಮೂಲಕ ತಿಳಿಯುತ್ತದೆ. ಮಂಗಳೂರಿನ ಉಳ್ಳಾಲದಲ್ಲಿ ಗಾಂಧಿ- ಗುರು ಸಂವಾದದ 100 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಹಿಂದ ಸಚಿವರು ಸಾಥ್ ನೀಡುತ್ತಿದ್ದು, ಆದರೆ ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.
ವೇಣುಗೋಪಾಲ್ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ: ಸಿದ್ದರಾಮಯ್ಯ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಗೆ ಹೋಗುವುದಕ್ಕೆ ಯಾರೂ ಬೇಡ ಅಂದಿಲ್ಲ. ನಾನು ಹೋಗುವುದಿಲ್ಲ. ನನ್ನನು ಕರೆದರೆ ಮಾತ್ರ ದೆಹಲಿಗೆ ತೆರಳುವೆ” ಎಂದರು.





