ಹೋಳಿ ಹಬ್ಬ ಆಚರಣೆ ವೇಳೆ ಕೆಲವು ಯುವಕರು ಬುರ್ಖಾ ಧರಿಸಿ ಪುಂಡತನ ಮೆರೆದಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ನಡೆದಿದೆ. ಘಟನೆ ಸಂಬಂಧ ಐವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಯುವಕರು ಒಬ್ಬ ವ್ಯಕ್ತಿಗೆ ಬುರ್ಖಾ ತೊಡಿಸಿ, ಬಣ್ಣ ಎರಚಿಕೊಂಡು ದಾಂಧಲೆ ನಡೆಸಿದ್ದಾರೆ. ಅವರ ಕೃತ್ಯವು ಕೋಮು ಭಾವನೆ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಿದೆ ಎಂದು ಆರೋಪಿಸಲಾಗಿದೆ.
ಘಟನೆಯ ವಿಡಿಯೋ ವೈರಲ್ ಆಗಿದೆ. ಕಲಬುರಗಿಯ ಎಂಎಸ್‌ಕೆ ಮಿಲ್ ಪ್ರದೇಶದ ನಿವಾಸಿ ಸಮೀರ್ ಅವಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರು ಮತ್ತು ವಿಡಿಯೋವನ್ನು ಆಧರಿಸಿ ಪೊಲೀಸರು ಐವರು ಆರೋಪಿಗಳನ್ನು ಗುರುತಿಸಿದ್ದಾರೆ. ನಿಂಬರ್ಗಾ ಗ್ರಾಮದ ನಿವಾಸಿಗಳಾದ ಪ್ರಜ್ವಲ್ ಬೆಳಮಗಿ, ಶಾಂತಪ್ಪ ಮಠಪತಿ, ನಾಗರಾಜ್ ಗೋವಣಗೊಳ, ಅನಿಲ್ ನಾಡಗಡಿ ಹಾಗೂ ಚನ್ನು ದುಗೊಂಡ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ; ಬುರ್ಖಾಧಾರಿ ವ್ಯಕ್ತಿಯು ವಿವಿಧ ಭಂಗಿಗಳಲ್ಲಿ ಕುಣಿಯುವುದು, ಗರ್ಭಿಣಿಯಾದಂತೆ ನಟಿಸುವುದು ಹಾಗೂ ಬುರ್ಖಾ ಧರಿಸಿದ್ದ ಆತನೊಂದಿಗೆ ಕೆಲವರು ಅನುಚಿತವಾಗಿ ವರ್ತಿಸುತ್ತಿವುದು ಕಂಡುಬಂದಿದೆ.




