ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ (KCCDC) ತನ್ನ ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳು ಮತ್ತು ಅಧಿಕೃತ ವೆಬ್ ಪೋರ್ಟಲ್‌ನ ಲೋಕಾರ್ಪಣೆ ಇಂದು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನ ನೆರವೇರಿಸಿತು.
ಕಾರ್ಯಕ್ರಮವನ್ನು ವಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರು ಉದ್ಘಾಟಿಸಿದರು. “ಕರ್ನಾಟಕ ಸರ್ಕಾರವು ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಧೈರ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮಾನ್ಯ ಮುಖ್ಯಮಂತ್ರಿ ಅವರು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿ, ವಿಶೇಷ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಅದೇ ರೀತಿಯಲ್ಲಿ, ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಹಿತಕ್ಕಾಗಿ ಮತ್ತು ಅವರ ಸಂಸ್ಥೆಗಳ ಬಲವರ್ಧನೆಗಾಗಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಮುಖ್ಯಮಂತ್ರಿಗಳವರು ನಿಗಮಕ್ಕೆ ನೀಡಿರುವ ₹250 ಕೋಟಿಯ ಅನುದಾನ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಉಪಯೋಗವಾಗಲೆಂದು ನಾನು ಆಶಿಸುತ್ತೇನೆ” ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ನಿಗಮದ ಹೊಸ ಯೋಜನೆಗಳು ಕ್ರಿಶ್ಚಿಯನ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಶುಭಾಶಯ ಕೋರಿದರು.
ನಿಗಮದ ಅಧ್ಯಕ್ಷ ಪ್ರೊ. ಎಸ್. ಜಾಫೆಟ್, ಈ ನಿಗಮದ ಸ್ಥಾಪನೆಗೆ ಕಾರಣರಾದ ಮುಖ್ಯಮಂತ್ರಿ, ಸಚಿವರು, ಸರ್ಕಾರ ಹಾಗೂ ಕ್ರಿಶ್ಚಿಯನ್ ಮುಖಂಡರಿಗೆ ಕೃತಜ್ಞತೆ ವ್ಯಕ್ತಪಡಿಸಿ, ನಿಗಮದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬದ್ಧತೆಯನ್ನು ವ್ಯಕ್ತಪಡಿಸಿದರು. ಈ ನಿಗಮದ ಯೋಜನೆಗಳ ಬಗ್ಗೆ ಚರ್ಚ್‌ಗಳು, ಸಂಸ್ಥೆಗಳು ಮತ್ತು ಮುಖಂಡರು ಹೆಚ್ಚಿನ ಪ್ರಚಾರ ನೀಡುವುದರ ಮೂಲಕ ಅರ್ಹ ವ್ಯಕ್ತಿಗಳು ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಹಕಾರ ನೀಡುವಂತೆ ವಿನಂತಿಸಿದರು.
ಈ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಟೋನಿ ಮರಿಯಾ ಇಮ್ಯಾನ್ಯುಯಲ್, ನಿರ್ದೇಶಕ ಮಂಡಳಿಯ ಸದಸ್ಯ ಸಂಜೀವ್ ಕುಮಾರ್ ಜಾಗೀರ್ದಾರ್, ಪ್ರಶಾಂತ್ ರಾಜ್ ಜತ್ತನ್ನ, ಹರ್ಷ ಮೆಲ್ವಿನ್ ಲಾಸ್ರಾದೊ, ಸಂದೀಪ್ ಕೆ.ಸಿ. ಜೋಸೆಫ್ ಕುಮಾರ್, ಜಿ.ಜೆ. ರವಿಕುಮಾರ್, ಜೆ. ಕ್ಷೇವಿಯರ್. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಅಲ್ಪಸಂಖ್ಯಾತರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





