ಸರ್ಕಾರಿ ಜಾಗದಲ್ಲಿ ಆರ್ಎಸ್ಎಸ್ ಸೇರಿದಂತೆ ಖಾಸಗಿ ಸಂಘಟನೆಗಳು ಯಾವುದೇ ಚಟುವಟಿಕೆಗಳನ್ನು ನಡೆಸುವುದಾದರೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ತಡೆ ನೀಡಿದೆ.
ಸರ್ಕಾರಿ ಜಾಗದಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಚಟುವಟಿಕೆಗಳನ್ನು ನಡೆಸುವಾಗ ಹತ್ತು ಜನಕ್ಕಿಂತ ಹೆಚ್ಚು ಮಂದಿ ಇದ್ದರೆ ಅನುಮತಿ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಪುನಶ್ಚೇತನ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.
ಇದನ್ನು ಓದಿದ್ದೀರಾ? ಸರ್ಕಾರಿ ಜಾಗದಲ್ಲಿ RSS ಸೇರಿ ಎಲ್ಲ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ: ಸರ್ಕಾರದಿಂದ ಅಧಿಕೃತ ಆದೇಶ
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, “ಹತ್ತು ಜನಕ್ಕಿಂತ ಹೆಚ್ಚು ಮಂದಿ ಸೇರಿದಂತೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಆದೇಶಿಸಿದೆ. ಇದು ಸಂವಿಧಾನದತ್ತವಾಗಿ ಲಭ್ಯವಾಗಿರುವ ಮೂಲಭೂತ ಹಕ್ಕಿಗೆ ನಿರ್ಬಂಧ. ಪಾರ್ಕ್‌ನಲ್ಲಿ ನಗೆಕೂಟ ನಡೆಸಿದರೂ ಸರ್ಕಾರದ ಆದೇಶದ ಪ್ರಕಾರ ಅದು ಅಕ್ರಮ ಕೂಟವಾಗುತ್ತದೆ. ಸರ್ಕಾರ ಈ ರೀತಿಯ ಆಡಳಿತಾತ್ಮಕ ಆದೇಶ ಹೊರಡಿಸುವಂತಿಲ್ಲ. ಪೊಲೀಸ್ ಕಾಯ್ದೆ ಜಾರಿಯಲ್ಲಿರುವಾಗ ಈ ನಿಯಮ ಏಕೆ ಬೇಕು” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸರ್ಕಾರದ ವಕೀಲರು ವಾದಿಸಲು ಒಂದು ದಿನ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ.
ಈ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಮಹಾನಿರ್ದೇಶಕರು, ಹುಬ್ಬಳ್ಳಿ ಪೊಲೀಸ್ ಕಮಿಷನರ್‌ಗೆ ನೋಟಿಸ್ ನೀಡಿದೆ. ಹಾಗೆಯೇ ಸಂವಿಧಾನದ 19 (1)A, B ವಿಧಿಯಡಿ ನೀಡಿರುವ ಹಕ್ಕನ್ನು ಸರ್ಕಾರ ಕಸಿದಿದೆ ಎಂದು ಹೇಳಿ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದು, ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಸರ್ಕಾರಿ ಜಾಗದಲ್ಲಿ ಆರ್ಎಸ್ಎಸ್ ಸೇರಿ ಯಾವುದೇ ಖಾಸಗಿ ಸಂಘಟನೆಗಳು ಚಟುವಟಿಕೆ ನಡೆಸಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅದಾದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರುಗಳು ನಡುವೆ ತೀವ್ರ ವಾಗ್ವಾದವೂ ನಡೆದಿತ್ತು. ಈ ನಡುವೆ ಖರ್ಗೆ ಅವರಿಗೆ ಬೆದರಿಕೆ ಕರೆಗಳೂ ಬಂದಿತ್ತು. ಈ ಬೆಳವಣಿಗೆ ನಡುವೆ ಸರ್ಕಾರ ಅನುಮತಿ ಕಡ್ಡಾಯ ಆದೇಶ ಹೊರಡಿಸಿತ್ತು.





