ರಾಜ್ಯದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದ್ದಾರೆ. ರಾಜ್ಯ ಬಜೆಟ್ ಮಂಡನೆ ವೇಳೆ ಈ ಮಹತ್ವದ ಪ್ರಕಟಣೆ ಹೊರಡಿಸಿದ ಅವರು, ಮಕ್ಕಳಲ್ಲಿ ಮೊಬೈಲ್ ಬಳಕೆಯ ಗೀಳು ಹೆಚ್ಚುತ್ತಿದ್ದು, ಇದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ನಿರ್ಬಂಧಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಈ ನಿರ್ಧಾರದ ಮೂಲಕ, ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಪಷ್ಟ ಹೆಜ್ಜೆ ಇಟ್ಟ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ಹಿಂದೆ ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳು ಸಹ ಇಂತಹ ಕ್ರಮದ ಬಗ್ಗೆ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದವು.
ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಯಂತ್ರಿಸುವ ವಿಚಾರದ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಹಿಂದಿನಿಂದಲೂ ಗಂಭೀರ ಚರ್ಚೆಗಳು ನಡೆಯುತ್ತಿದ್ದವು. ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮಗಳ ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಈ ವರ್ಷದ ಆರಂಭದಲ್ಲಿ ವಿಧಾನಸಭೆಯಲ್ಲಿ ತಿಳಿಸಿದ್ದರು. ಜೊತೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೂಡ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಕ್ರೀನ್ ಟೈಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಸಾಮಾಜಿಕ ಜಾಲತಾಣಗಳ ಅನಿಯಂತ್ರಿತ ಬಳಕೆಯು ಮಕ್ಕಳ ಶಿಕ್ಷಣ ಮತ್ತು ಕೌಟುಂಬಿಕ ವಾತಾವರಣದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದರು.
ಇದಕ್ಕೂ ಮುನ್ನ, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಫೋನ್ ನಿರ್ಬಂಧಿಸುವ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೂ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು.
ಇದನ್ನು ಓದಿದ್ದೀರಾ? ಇರಾನ್ ವಿರುದ್ಧ ಅಮೆರಿಕದ ವಿನಾಶಕಾರಿ ಕುತಂತ್ರ; ತನ್ನ ಬೇಳೆ ಬೇಯಿಸಿಕೊಳ್ಳಲು ಕುರ್ಡಿಶ್ ಉಗ್ರರ ಕೈಗೆ ಅಸ್ತ್ರ!
ಮಕ್ಕಳ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಕೆಯ ನಿಯಂತ್ರಣದ ಬಗ್ಗೆ ಜಾಗತಿಕ ಮಟ್ಟದಲ್ಲೂ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಆಸ್ಟ್ರೇಲಿಯಾ ಈಗಾಗಲೇ ಕಿರಿಯ ಬಳಕೆದಾರರಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದರೆ, ಬ್ರಿಟನ್ ಮತ್ತು ಫಿನ್ಲೆಂಡ್ ಕೂಡ ಇದೇ ಹಾದಿಯಲ್ಲಿವೆ. ಫ್ರಾನ್ಸ್, ಸ್ಪೇನ್ ಸೇರಿದಂತೆ ಯುರೋಪಿನ ಕೆಲವು ಭಾಗಗಳಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲು ತರಗತಿಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಯನ್ನು ನಿರ್ಬಂಧಿಸಲಾಗಿದೆ.
ಆದರೆ, ಅಮೆರಿಕ ಮಾತ್ರ ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಅಲ್ಲಿನ ಕಾರ್ಪೊರೇಟ್ ಲಾಭಕೋರತನದಿಂದಾಗಿ ಮಕ್ಕಳ ಭವಿಷ್ಯವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕದ ನೀತಿಗಳು ಟೆಕ್ ದೈತ್ಯರ ಪರವಾಗಿದ್ದು, ಅಲ್ಲಿನ ಮಕ್ಕಳು ತೀವ್ರ ಮಾನಸಿಕ ಖಿನ್ನತೆ ಮತ್ತು ಡಿಜಿಟಲ್ ಚಟಕ್ಕೆ ಬಲಿಯಾಗುತ್ತಿದ್ದರೂ ಆ ದೇಶದ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಅಮೆರಿಕದ ಈ ಬೇಜವಾಬ್ದಾರಿಯುತ ನಡೆಯು ಇಡೀ ಜಗತ್ತಿಗೆ ಒಂದು ಕೆಟ್ಟ ಉದಾಹರಣೆಯಾಗಿ ಪರಿಣಮಿಸಿದೆ.
ಮಕ್ಕಳ ಡಿಜಿಟಲ್ ಬಳಕೆಯನ್ನು ಕೇವಲ ನಿಷೇಧದ ಮೂಲಕ ನಿಯಂತ್ರಿಸುವುದು ಅಷ್ಟು ಸುಲಭವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಭಾರತದ ಆರ್ಥಿಕ ಸಮೀಕ್ಷೆ 2025-26 ಈಗಾಗಲೇ ಯುವಜನತೆಯಲ್ಲಿನ ಸ್ಮಾರ್ಟ್ ಫೋನ್ ಗೀಳಿನ ಬಗ್ಗೆ ಎಚ್ಚರಿಸಿದ್ದು, ಇದು ನಿದ್ರಾಹೀನತೆ, ಆತಂಕ, ಏಕಾಗ್ರತೆಯ ಕೊರತೆ ಮತ್ತು ಶೈಕ್ಷಣಿಕ ಒತ್ತಡಕ್ಕೆ ಕಾರಣವಾಗುತ್ತಿದೆ ಎಂದು ಉಲ್ಲೇಖಿಸಿದೆ. ಮಕ್ಕಳು ಖಾಸಗಿತನದ ಅಪಾಯಗಳನ್ನರಿಯದೆ ಆನ್‌ಲೈನ್‌ನಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ. ಆ್ಯಪ್‌ಗಳು ಹಾಗೂ ಗೇಮ್‌ಗಳು ಸಂಗ್ರಹಿಸುವ ಮಾಹಿತಿಯು ಮುಂದೊಂದು ದಿನ ಕಣ್ಗಾವಲು ಅಥವಾ ಗುರುತು ಕಳ್ಳತನಕ್ಕೆ ದುರ್ಬಳಕೆಯಾಗುವ ಅಪಾಯವಿದೆ. ಅಪರಿಚಿತರು ಗೇಮಿಂಗ್ ಮತ್ತು ಚಾಟಿಂಗ್ ಮೂಲಕ ಮಕ್ಕಳ ವಿಶ್ವಾಸ ಗಳಿಸಿ ಅವರನ್ನು ಆನ್‌ಲೈನ್ ಶೋಷಣೆಗೆ ಒಳಪಡಿಸುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ.





