ಸಭಾಧ್ಯಕ್ಷರ ಕಾರ್ಯಾಲಯದಿಂದಾಗುವ ಟೆಂಡರ್‌ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಗಳನ್ನು ಸ್ಪೀಕರ್ ಯು ಟಿ ಖಾದರ್ ಅವರು ಅಲ್ಲಗಳೆದಿದ್ದು, ಯಾವುದೇ ತನಿಖೆಗೆ ಬೇಕಿದ್ದರೂ ಸಿದ್ದ ಎಂದಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, “ಸಂಸದ ವಿಶ್ವೇಶರ ಹೆಗಡೆ ಕಾಗೇರಿ ತನ್ನ ವಿರುದ್ಧ ಮಾಡಿರುವ ಆರೋಪ ಸಂಪೂರ್ಣ ದುರುದ್ದೇಶಪೂರಿತ ಮತ್ತು ಆಧಾರರಹಿತ. ವಿಶ್ವೇಶರ ಹೆಗಡೆ ಆರೋಪ ಮಾಡಿರುವಂತಹ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳು ನೀತಿ, ನಿಯಮಗಳ ಪ್ರಕಾರವೇ ನಡೆದಿವೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಯಾವುದೇ ತನಿಖೆಯನ್ನು ಬೇಕಿದ್ದರೂ ಮಾಡಿಸಬಹುದು. ನಾನು ಇದನ್ನು ಸಕರಾತ್ಮಕವಾಗಿ ಸ್ವೀಕರಿಸುತ್ತೇನೆ” ಎಂದು ಖಾದರ್ ತಿಳಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭಾಧ್ಯಕ್ಷ ಯು ಟಿ ಖಾದರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ, “ಸ್ಪೀಕರ್ ಕಾರ್ಯಾಲಯದಿಂದಾಗುವ ಟೆಂಡರ್‌ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ದೂರಿದ್ದದರು. ಜೊತೆಗೆ ಸ್ಪೀಕರ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಕಾರ್ಯನಿರತ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು” ಎಂದು ಒತ್ತಾಯಿಸಿದ್ದರು.
ವಿಶ್ವೇಶರ ಹೆಗಡೆ ಕಾಗೇರಿ ಆರೋಪವೇನು?
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಮಾಡಿ ಖಾದರ್ ಕಾರ್ಯಾಲಯ ವಿರುದ್ಧ ಆರೋಪಿಸಿದ ಅವರು, “ನಾನು ವಿಧಾನಸಭೆಯ ನಿಕಟಪೂರ್ವ ಸಭಾಧ್ಯಕ್ಷ ಆಗಿರುವುದರಿಂದ ನಾನು ಮಾಡುತ್ತಿರುವ ಆರೋಪಗಳ ಬಗ್ಗೆ ನನಗೆ ಅರಿವಿದೆ. ರಾಜಕೀಯಕ್ಕಾಗಿ ನಾನು ಆರೋಪ ಮಾಡುತ್ತಿಲ್ಲ. ಸಂವಿಧಾನದಲ್ಲಿ ಸ್ಪೀಕರ್ ಸ್ಥಾನಕ್ಕೆ ದೊಡ್ಡ ಮಹತ್ವವಿದೆ. ಆದರೆ ರಾಜ್ಯದಲ್ಲಿ ವಿಧಾನಸಭಾಧ್ಯಕ್ಷರಾಗಿ ರಾಜಕೀಯ, ಸಾರ್ವಜನಿಕ ಜೀವನದ ಸಾಕಷ್ಟು ಅನುಭವ ಇರುವ ಯು.ಟಿ.ಖಾದರ್ ಅವರು ಇದ್ದು, ಸ್ಪೀಕರ್ ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಪಕ್ಷಪಾತಿಯಾಗಿದ್ದಾರೆ. ಆಡಳಿತ ಸುಧಾರಣೆ ಹೆಸರಿನಲ್ಲಿ ಅನೇಕ ಭ್ರಷ್ಟಾಚಾರಗಳು ನಡೆಯುತ್ತಿವೆ” ಎಂದು ದೂರಿದ್ದರು.
“ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್ ವುಡ್ ಮರದ ಕೆತ್ತನೆಯ ಚೌಕಟ್ಟು ಮಾಡಿಸಿದಲ್ಲಿಂದ ಭ್ರಷ್ಟಾಚಾರದ ಆರೋಪಗಳು ಆರಂಭವಾಗಿವೆ. ಸಭಾಂಗಣಕ್ಕೆ ಹೊಸ ಟಿ.ವಿ.ಸೆಟ್ ಅನ್ನು ಅಳವಡಿಸಿದ್ದಾರೆ. ಎಐ ಮಾನಿಟರ್ ಸಿಸ್ಟಂ ಅನ್ನು ಹಾಕಲು ಸಾಕಷ್ಟು ಖರ್ಚು ವೆಚ್ಚಗಳಾಗಿವೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ಕೊಟ್ಟರು. ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್ ಪಾರ್ಲರ್ ಮಾದರಿಯಲ್ಲಿ ಬದಲಾಯಿಸಿದ್ದಕ್ಕೆ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾಗಿತ್ತು” ಎಂದಿದ್ದರು.
“ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳನ್ನು ಭದ್ರ ಪಡಿಸಲು ಸ್ಮಾರ್ಟ್ ಡೋರ್ ಲಾಕರ್ ಹಾಕಿಸಿದರು. ಗಾಡ್ರೆಜ್‍ನಂಥ ಕಂಪೆನಿಯವರ ಬೆಲೆಯೇ 14-16 ಸಾವಿರ ರೂ. ಇದೆ. ಅದಕ್ಕೆ ಇವರು 49 ಸಾವಿರ ರೂ. ಹೆಚ್ಚು ಖರ್ಚು ತೋರಿಸಿದ್ದಾರೆ. ಸ್ಮಾರ್ಟ್ ಸೇಫ್ ಲಾಕರ್‌ಗಳು ಮಾರ್ಕೆಟ್‍ನಲ್ಲಿ 8-9 ಸಾವಿರ ರೂ.ಗಳಿಗೆ ಸಿಗುತ್ತವೆ. ಇವರು 35 ಸಾವಿರ ರೂ. ಮೇಲೆ ದರ ವಿಧಿಸಿದ್ದಾರೆ. ಮಾರುಕಟ್ಟೆಯಲ್ಲಿ ಸುಮಾರು 30 ಸಾವಿರ ರೂ.ಗಳಿಗೆ ಲಭ್ಯ ಇರುವ ಸ್ಮಾರ್ಟ್ ಎನರ್ಜಿ ಸೊಲ್ಯೂಷನ್‌ಗೆ 90,500 ವಿಧಿಸಿದ್ದಾರೆ. ಸ್ಟೇನ್‍ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ 16-53 ಸಾವಿರ ರೂ.ಗಳಲ್ಲಿ ಲಭ್ಯವಿದೆ. ಆದರೆ ಇವರು 65 ಸಾವಿರ ರೂ. ವಿಧಿಸಿದ್ದಾರೆ. ಒಟ್ಟು 235 ವಸ್ತುಗಳ ಖರೀದಿಯಾಗಿದೆ. 123 ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಖರೀದಿ ಮಾಡಿದ್ದಾರೆ. 224 ಸೇಫ್ ಲಾಕರ್, ಅಷ್ಟೇ ಸಂಖ್ಯೆಯ ಡೋರ್ ಲಾಕರ್ ಖರೀದಿ ಮಾಡಿದ್ದಾರೆ. ಎಲ್ಲದರಲ್ಲೂ ಹೆಚ್ಚಿನ ದರ ವಿಧಿಸಿ ಭ್ರಷ್ಟಾಚಾರ ಎಸಗಲಾಗಿದೆ” ಎಂದು ಕಾಗೇರಿ ದೂರಿದ್ದರು.
“ಸ್ಪೀಕರ್ ಕಾರ್ಯಾಲಯದ ಟೆಂಡರ್‌ಗಳು ಮಂಗಳೂರು ಮೂಲದವರಿಗೇ ಯಾಕೆ ಸಿಗುತ್ತಿವೆ? ಅದು ಸಹ 4 ಜಿ ವಿನಾಯಿತಿಯಲ್ಲಿ ಯಾರಿಗೋ ಕೆಲವರಿಗೇ ಮಾತ್ರ ಸಿಗುತ್ತಿದೆ. ವಿಧಾನಸಭಾಕ್ಷರ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯ ಏನಿತ್ತು? ನನಗೆ ಗೊತ್ತಿರುವ ಪ್ರಕಾರ ಹಣಕಾಸು ಇಲಾಖೆ ಖರೀದಿಗಳನ್ನು ತಿರಸ್ಕರಿಸಿದೆ. ಬಳಿಕ ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಡಿಸಿದ ಆರೋಪವಿದೆ. ಇದರಿಂದ ತಿಳಿಯುತ್ತದೆ ಯು.ಟಿ.ಖಾದರರಿಗೆ ಸ್ವತಃ ಸಿಎಂ ಅವರೇ ಬೆಂಬಲ ಕೊಟ್ಟಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಪುಸ್ತಕ ಮೇಳಕ್ಕೆ 4.5 ಕೋಟಿ ಖರ್ಚು
“4-5 ದಿನಗಳ ಪುಸ್ತಕ ಮೇಳಕ್ಕೆ 4.5 ಕೋಟಿ ಖರ್ಚು ಮಾಡಿದ್ದಾರೆ. ಪುಸ್ತಕ ಕೊಂಡು ಹಂಚಿದರೂ ಇಷ್ಟಾಗುತ್ತಿತ್ತೇ ಗೊತ್ತಿಲ್ಲ. ಇವರು ಸ್ಟಾಲ್ ಹಾಕುವುದು ಬಿಟ್ಟು ಬೇರೇನೂ ಮಾಡಿಲ್ಲ. ಲೈಟಿಂಗ್ ಮಾಡಿದ್ದಾರೆ. ಶಾಸಕರ ಭವನಕ್ಕೆ ಮಂಚ, ಟೇಬಲ್ ಹಾಕಿಸಿದ್ದಾರೆ. ನೇಮಕಾತಿಗೆ ಕೋರ್ಟಿನಲ್ಲಿ ತಡೆಯಾಜ್ಞೆ ವಿಧಿಸಲಾಗಿದೆ. ಇದರ ವಿಷಯದಲ್ಲಿ ಮೊಗಸಾಲೆಯ ಸುದ್ದಿಗಳೇನು? ನಾನೂ ಸ್ಪೀಕರ್ ಆಗಿ ವಿದೇಶಗಳಿಗೆ ಹೋಗಿದ್ದೇನೆ. ನಮಗಿರೋ ಅವಕಾಶ ಮೀರಿ, ಖಾದರ್ ಎಷ್ಟು ಪ್ರವಾಸ ಮಾಡಿದ್ದಾರೆ. ಯಾರ್ಯಾರ ಜೊತೆ ಪ್ರವಾಸ ಮಾಡಿದ್ದಾರೆ? ಇವೆಲ್ಲವೂ ಬಹಿರಂಗಗೊಳ್ಳಬೇಕಿದೆ. ವಿದೇಶಗಳ ಅಧ್ಯಯನದ ಹೆಸರಿನಲ್ಲಿ ನಡೆದ ಪ್ರವಾಸದ ವಿವರ ಬಹಿರಂಗಗೊಳಿಸಿ” ಎಂದು ಖಾದರ್ ಅವರನ್ನು ಕಾಗೇರಿ ಆಗ್ರಹಿಸಿದ್ದರು.
ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮಾಜಿ ಸ್ಪೀಕರ್ ಆದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, “ಸುದ್ದಿಗೋಷ್ಠಿಯಲ್ಲಿ ಎಲ್ಲ ವಿಚಾರ ಹೇಳಿದ್ದೇನೆ. ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಕಾರ್ಯನಿರತ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು” ಎಂದು ಪುನಃ ಆಗ್ರಹಿಸಿದರು.
ತಮ್ಮ ಕಚೇರಿ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸ್ಪೀಕರ್ ಯು ಟಿ ಖಾದರ್ ಅವರಿಂದ ಅಭಿಪ್ರಾಯ ಪಡೆಯಲು ಈ ದಿನ.ಕಾಮ್ ಪ್ರಯತ್ನಿಸಿತು. ಆದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ.
ಯು.ಟಿ.ಖಾದರ್ ನಿರ್ಧಾರಗಳ ಬಗ್ಗೆ ಹೊರಟ್ಟಿ ಹಿಂದೆಯೇ ಬೇಸರ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸೆಪ್ಟೆಂಬರ್‌ನಲ್ಲಿ ಯು ಟಿ ಖಾದರ್ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಗಮನಿಸಬಹುದು. “ಯು.ಟಿ.ಖಾದರ್ ಅವರು ವಿಧಾನಸೌಧಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಅಥವಾ ಕಾರ್ಯಕ್ರಮಗಳ ಕುರಿತು ತಮ್ಮೊಂದಿಗೆ ಸಮಾಲೋಚನೆ ನಡೆಸದೆಯೇ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಈ ಏಕಪಕ್ಷೀಯ ನಿರ್ಧಾರ ಸರಿಯಲ್ಲ.ಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಕರ್ನಾಟಕ ವಿಧಾನ ಪರಿಷತ್ತು ಮತ್ತು ಕರ್ನಾಟಕ ವಿಧಾನ ಸಭೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಆದರೆ, ಇತ್ತೀಚಿನ ದಿನಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ನನ್ನನ್ನು ಸೌಜನ್ಯಕ್ಕಾದರು ಅಧಿಕೃತ ಕಾರ್ಯಕ್ರಮದ ಬಗ್ಗೆ ರೂಪರೇಷಗಳನ್ನು ಸಿದ್ಧಪಡಿಸಲು ಸಂಪರ್ಕಿಸದೆ ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಅತ್ಯಂತ ಬೇಸರದ ಸಂಗತಿ” ಎಂದಿದ್ದರು.
“ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ತಾವು ಪುಸ್ತಕ ಮೇಳವನ್ನು ಆಯೋಜಿಸಿದ್ದು, ವಿಧಾನಸೌಧ ಕಟ್ಟಡಕ್ಕೆ ಲೇಸರ್ ದೀಪ ಅಳವಡಿಸುವ ಯೋಜನೆ, 11 ನೇ ಸಿಪಿಎ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್, ಭಾರತ ವಲಯದ ಸಮ್ಮೇಳನ ಆಯೋಜನೆ ಬಗ್ಗೆ ಮೇಲಿನ ಕಾರ್ಯಕ್ರಮಗಳ ರೂಪರೇಷೆಗಳನ್ನು ಮಾಡುವಲ್ಲಿ ನನ್ನನ್ನು ಸೌಜನ್ಯಕ್ಕಾದರು ಸಂಪರ್ಕಿಸಿ ಸಲಹೆ ಸೂಚನೆ ಕೇಳದೆ ಮುಂದುವರೆದು ಸದರಿ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಗೋಷ್ಠಿಯನ್ನು ಏಕಪಕ್ಷಿಯವಾಗಿ ನಡೆಸುತ್ತಿರುವುದು ನಾನು ಮಾಧ್ಯಮಗಳ ಮೂಲಕ ಗಮನಿಸಿರುವೆ” ಎಂದು ಹೊರಟ್ಟಿ ಬೇಸರ ಹೊರಹಾಕಿದ್ದರು.





