ಕೋಲಾರ ಲೋಕಾಯುಕ್ತ ಪೊಲೀಸರು ಜಿಲ್ಲೆಯಲ್ಲಿ ಐದು ಕಡೆ ಮತ್ತು ಚಿಂತಾಮಣಿಯಲ್ಲಿ ಒಂದು ಕಡೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಸಂಬಂಧವಿಲ್ಲದ ಮಾಲೀಕರ ಕೃಷಿ ಜಮೀನಿನ ಹೆಸರಲ್ಲಿ ಬೋನಾಫೈಡ್ ನಕಲಿ ಪ್ರಮಾಣಪತ್ರ ವಿತರಣೆ ಮತ್ತು ಟ್ರ್ಯಾಕ್ಟರ್ ನೋಂದಣಿ ಪ್ರಕರಣ ದಾಳಿ ನಡೆದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಕೋಲಾರ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಆ್ಯಂಟನಿ ಜಾನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸುಮಾರು 1,387 ನಕಲಿ ಬೋನಾಫೈಡ್ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹ 2 ಕೋಟಿ ನಷ್ಟ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು.
ನರಸಾಪುರ ನಾಡ ಕಚೇರಿಯ ಉಪ ತಹಶೀಲ್ದಾರ್ ನಾರಾಯಣಸ್ವಾಮಿ, ಹೊರಗುತ್ತಿಗೆ ಆಪರೇಟರ್ ಅಂಬುಜಾ, ಮಧ್ಯವರ್ತಿ ಮಂಜುನಾಥ್, ಚಿಂತಾಮಣಿಯ ಸಾಯಿ ಆದಿತ್ಯ ಟ್ರ್ಯಾಕ್ಟರ್ ಷೋರೂಂನ ಸೇಲ್ಸ್ ಮ್ಯಾನ್ ಗೋಕುಲ್ ರೆಡ್ಡಿ, ವ್ಯವಸ್ಥಾಪಕ ಆಂಜನೇಯರೆಡ್ಡಿ (ಕೋಲಾರ ನಗರ), ಆರ್ ಟಿ ಒ ಮಧ್ಯವರ್ತಿ ಅಶ್ವತ್ಥನಾರಾಯಣ ಅವರ ನಿವಾಸದ ಮೇಲೆ ದಾಳಿ ನಡೆದಿದೆ.





