ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಭಾರತದಲ್ಲಿನ ಯಾವುದೇ ರಾಜ್ಯಕ್ಕೂ ಅಥವಾ ಕೇಂದ್ರ ಸರ್ಕಾರಕ್ಕೂ ಸಾಧ್ಯವಾಗದಂತಹ “ಕಡು ಬಡತನ ಮುಕ್ತ ರಾಜ್ಯ”ದ ಅಪೂರ್ವ ಸಾಧನೆಯನ್ನು ಕೇರಳ ರಾಜ್ಯ ಸಾಧಿಸಿದ್ದು, ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರದ ಮಹತ್ತರ ಯಶಸ್ಸು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ರಾಜ್ಯ ಸಮಿತಿ ಅಭಿನಂದಿಸಿದೆ.
ಸ್ವಾತಂತ್ರ್ಯ ನಂತರ ಮೊದಲ ಕೇರಳ ಶಾಸನಸಭೆಯಲ್ಲಿ ಇಎಂಎಸ್ ನೇತೃತ್ವದ ಎಲ್‌ಡಿಎಫ್ ಸರ್ಕಾರ ಭೂ ಹಂಚಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾರ್ವಜನಿಕ ವಲಯದ ಬಲಪಡಿಸುವ ಮೂಲಕ ಅಡಿಗಲ್ಲು ಇಟ್ಟಿತ್ತು. ಬಳಿಕ ಅಧಿಕಾರ ಕಳೆದುಕೊಂಡು ದುರ್ಬಲಗೊಂಡಿದ್ದರೂ, ಸತತ ಎರಡನೇ ಅವಧಿಗೆ ಅಧಿಕಾರ ಪಡೆದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ “ಕಡು ಬಡತನ ಮುಕ್ತ ಕೇರಳ” ಎಂಬ ತನ್ನ ಗುರಿಯನ್ನು ಸಾಧಿಸಿದೆ.
ಇಡೀ ಪ್ರಪಂಚದಲ್ಲಿ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಿಂದ ಕಡು ಬಡತನ ಹೆಚ್ಚುತ್ತಿರುವ ಸಂದರ್ಭದಲ್ಲಿ, ನವ ಉದಾರೀಕರಣ ಚೌಕಟ್ಟಿನ ಸೀಮಿತ ಅವಕಾಶದಲ್ಲಿ ಈ ಸಾಧನೆ ಜನ ಕಲ್ಯಾಣದ ಸಂವಿಧಾನ ಆಶಯದ ವಿಶಿಷ್ಟ ಮಾದರಿಯಾಗಿ ದೇಶಕ್ಕೆ ಪರಿಚಯವಾಗಿದೆ ಎಂದು ಕೆಪಿಆರ್‌ಎಸ್ ಹೇಳಿದೆ. 1998ರಿಂದ ಸತತ 30 ವರ್ಷಗಳ ಕಾಲ ಅಧಿಕಾರದಲ್ಲಿರುವ ಗುಜರಾತ್‌ನ ಬಿಜೆಪಿ ಸರ್ಕಾರದ ಕಡು ಬಡತನ ಪ್ರಮಾಣವನ್ನು ಹೋಲಿಸಿದರೆ, ಕೇರಳದ ಸಾಧನೆ ಅಮೂಲ್ಯ ಮತ್ತು ಅಪರೂಪದ್ದು ಎಂಬುದು ಸ್ಪಷ್ಟವಾಗುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಹಾರದಲ್ಲಿ ಕೋಟಿ ಉದ್ಯೋಗದ ಭರವಸೆ; ಹಳೆಯ ಭರವಸೆ ಎಲ್ಲಿ ಹೋಯಿತು ಮೋದೀಜೀ?
ಅತ್ಯಂತ ಸೀಮಿತ ತೆರಿಗೆ ಸಂಪನ್ಮೂಲ, ಕೇಂದ್ರದ ಅನ್ಯಾಯಯುತ ತೆರಿಗೆ ಹಂಚಿಕೆ ಹಾಗೂ ಅನುದಾನ ತಾರತಮ್ಯಗಳ ನಡುವೆಯೂ ಕೇರಳ ಸರ್ಕಾರ ಈ ಯಶಸ್ಸು ಸಾಧಿಸಿರುವುದು ಕರ್ನಾಟಕದಂತಹ ರಾಜ್ಯಗಳಿಗೆ ಅಧ್ಯಯನ ಯೋಗ್ಯ ಮತ್ತು ಅನುಕರಣೀಯ ಎಂದು ಕೆಪಿಆರ್‌ಎಸ್ ಅಭಿಪ್ರಾಯಪಟ್ಟಿದೆ.
ರಾಜ್ಯದ ಪ್ರತೀ ಕುಟುಂಬಕ್ಕೂ ವಸತಿ ಒದಗಿಸುವ ಗುರಿಯತ್ತ ಕೇರಳ ಸರ್ಕಾರ ಮುನ್ನಡೆಯುತ್ತಿರುವ ಈ ಜನಕಲ್ಯಾಣದ ಪರ್ವ ಮುಂದುವರಿಯಲೆಂದು, ಮತ್ತೊಂದು ಅವಧಿಗೆ ಎಲ್‌ಡಿಎಫ್ ಸರ್ಕಾರಕ್ಕೆ ಕೇರಳ ಜನತೆ ಅವಕಾಶ ನೀಡಬೇಕೆಂದು ಕೆಪಿಆರ್‌ಎಸ್ ರಾಜ್ಯ ಸಮಿತಿಯ ಅಧ್ಯಕ್ಷ ಯು. ಬಸವರಾಜ ಹಾಗೂ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





