ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ 75,563 ಎಕರೆ ಜಮೀನಿನ ಸ್ವಾಧೀನ ಒಂದೇ ಹಂತದಲ್ಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಗುರುವಾರ ಜಂಟಿ ಅಧಿವೇಶನದಲ್ಲಿ ಮಂಡಿಸಲಾದ ರಾಜ್ಯಪಾಲರ ಭಾಷಣದಲ್ಲಿ ಈ ಅಂಶವನ್ನು ತಿಳಿಸಲಾಗಿದೆ.
ಭಾಷಣದಲ್ಲಿ ಸಂಬಂಧಪಟ್ಟ ಅಂಶಗಳು ಈ ಕೆಳಕಂಡಂತಿವೆ:
“ಸರ್ಕಾರವು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಿದೆ. ಯೋಜನೆಯ ತ್ವರಿತ ಭೂ ಸ್ವಾಧೀನ ಪ್ರಕ್ರಿಯೆಗಾಗಿ ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಿ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ 75,563 ಎಕರೆ ಜಮೀನನ್ನು ಒಂದೇ ಹಂತದಲ್ಲಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ರೈತರ ಹಿತದೃಷ್ಟಿಯಿಂದ ‘ಒಪ್ಪಂದದ ಐತೀರ್ಪು ದರ’ಗಳಿಗೆ ಅನುಮೋದನೆ ನೀಡಲಾಗಿದೆ. ಮುಳುಗಡೆಯಾಗುವ ಖುಷ್ಕಿ ಜಮೀನುಗಳಿಗೆ ಪ್ರತಿ ಎಕರೆಗೆ ರೂ.30 ಲಕ್ಷ ಹಾಗೂ ನೀರಾವರಿ ಜಮೀನಿಗೆ ರೂ.40 ಲಕ್ಷ ನಿಗದಿಪಡಿಸಲಾಗಿದೆ. ಕಾಲುವೆ ನಿರ್ಮಾಣದ ಭೂಸ್ವಾಧೀನಕ್ಕಾಗಿ ಖುಷ್ಕಿ ಭೂಮಿಗೆ ಪ್ರತಿ ಎಕರೆಗೆ ರೂ.25.00 ಲಕ್ಷ ಹಾಗೂ ನೀರಾವರಿ ಜಮೀನಿಗೆ ರೂ.30.00 ಲಕ್ಷ ದರವನ್ನು ನಿಗದಿಪಡಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂದು ಸದನದಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ನಮ್ಮ ಹಕ್ಕಿನ ನೀರಿನ ಐತೀರ್ಪನ್ನು ಗೆಜೆಟ್ ಅಧಿಸೂಚನೆ ಹೊರಡಿಸುವುದರ ಜೊತೆಯಲ್ಲಿ ಕೃಷ್ಣಾ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ನನ್ನ ಸರ್ಕಾರವು ಒತ್ತಾಯಿಸುತ್ತದೆ”.
“ರಾಜ್ಯದಲ್ಲಿ ಹೊಸದಾಗಿ 59,181 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಏತ ನೀರಾವರಿ, ಕಾಲುವೆ ಜಾಲಗಳ ಆಧುನೀಕರಣ, ಕೆರೆ ತುಂಬಿಸುವ ಯೋಜನೆಗಳು ಹಾಗೂ ಬ್ರಿಡ್ಜ್-ಕಂ-ಬ್ಯಾರೇಜ್‌ಗಳ ನಿರ್ಮಾಣ ಸೇರಿದಂತೆ ಒಟ್ಟು ರೂ.9,331 ಕೋಟಿ ಮೊತ್ತದ 77 ಹೊಸ ಯೋಜನಾ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ”.
ದೇವಾಲಯ ಆಸ್ತಿ ಸಂರಕ್ಷಣೆಗೆ ‘ ಭೂ ವರಾಹ’ ಯೋಜನೆ- ಒತ್ತುವರಿ ತೆರವು
ಅರ್ಚಕರ ತಸ್ತೀಕ್ ಮೊತ್ತ 60 ಸಾವಿರದಿಂದ 72 ಸಾವಿರಕ್ಕೆ ಹೆಚ್ಚಿಸಿದ್ದು, ಗತಿಸಿದವರ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಚಾಲನೆ ದೊರೆತಿರುವುದಾಗಿ ರಾಜ್ಯಪಾಲರ ಭಾಷಣದಲ್ಲಿ ತಿಳಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರ ಕ್ಷೇಮಾಭಿವೃದ್ಧಿಗಾಗಿ ನೀಡಲಾಗುವ ತಸ್ತೀಕ್ ಮೊತ್ತವನ್ನು 2025-26ನೇ ಸಾಲಿನಿಂದ ರೂ.60,000 ದಿಂದ ರೂ.72,000 ಕ್ಕೆ ಹೆಚ್ಚಿಸಲಾಗಿದೆ. ಅರ್ಚಕರು ಅಥವಾ ನೌಕರರು ಸೇವಾವಧಿಯಲ್ಲಿ ಮೃತಪಟ್ಟ ಕುಟುಂಬಗಳಿಗೆ ರೂ.2 ಲಕ್ಷ ಗಳಂತೆ ಪರಿಹಾರ ನೀಡಲಾಗುತ್ತಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ‘ಕರ್ನಾಟಕ ಭಾರತ್ ಗೌರವ್’ ಯೋಜನೆಯಡಿ 23,044 ಯಾತ್ರಾರ್ಥಿಗಳಿಗೆ ರೂ.11.52 ಕೋಟಿ ಸಹಾಯಧನ ನೀಡಲಾಗಿದೆ. ಬೆಂಗಳೂರಿನಲ್ಲಿ ರೂ.27 ಕೋಟಿ ವೆಚ್ಚದಲ್ಲಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ದೇವಾಲಯಗಳ ಆಸ್ತಿ ಸಂರಕ್ಷಣೆಗಾಗಿ ‘ಭೂ ವರಾಹ’ ಯೋಜನೆಯಡಿ ಒತ್ತುವರಿ ತೆರವುಗೊಳಿಸಿ, ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ತಿಳಿಸಲಾಗಿದೆ





