ಅಪಘಾತ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂವರು ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಕುಟುಂಬಕ್ಕೆ ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿಯವರು ತಲಾ ರೂ.1 ಕೋಟಿ ಪರಿಹಾರ ಧನವನ್ನು ಬುಧವಾರ ವಿತರಣೆ ಮಾಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಈ ಮೊತ್ತವನ್ನು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಸಚಿವರು, “ಸಂಸ್ಥೆಯು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು ಸಿಬ್ಬಂದಿಯ ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ. ಈವರೆಗೂ 42 ಸಿಬ್ಬಂದಿಗಳ ಅವಲಂಬಿತರಿಗೆ ಒಟ್ಟಾರೆ ರೂ.42 ಕೋಟಿ ಪರಿಹಾರ ನೀಡಿದ್ದೇವೆ” ಎಂದು ತಿಳಿಸಿದರು.
ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾಂತ್ವನ ಹೇಳಿದ ಸಚಿವರು, “ನಿಗಮದ ಸಿಬ್ಬಂದಿಗಳ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ, ಆದರೆ ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.
“ಇಂದು ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳಬೇಕು. ಪರಿಹಾರ ಧನವನ್ನು ಯಾರಿಗೂ ನೀಡದಂತೆ ಕಿವಿ ಮಾತು ಹೇಳಿ, ಹಣವಿದ್ದರೆ ಎಲ್ಲರೂ ನೆಂಟರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಾರಿಗೆ ಸುರಕ್ಷಾ ಯೋಜನೆಯು ಯಶಸ್ವಿಯಾಗಲು ಎಸ್.ಬಿ.ಐ ಬ್ಯಾಂಕ್‌ನ ಸಹಕಾರ ಕೂಡ ಪ್ರಮುಖವಾಗಿದ್ದು, ಅವರಿಗೂ ಸಹ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 31 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ, ರೂ. 3.10 ಕೋಟಿ ಪರಿಹಾರ ಹಾಗೂ ಇಬ್ಬರು ಅವಲಂಬಿತರಿಗೆ ರೂ.14 ಲಕ್ಷದಂತೆ ರೂ.28 ಲಕ್ಷ ಪರಿಹಾರದ ಚೆಕ್ ಅನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರಾದ ಮೊಹಮ್ಮದ್ ರಿಜ್ವಾನ್ ನವಾಬ್ ಅವರು, ವಾಣಿಜ್ಯ ಮಳಿಗೆಗಳ ನಿರ್ವಹಣೆ ತಂತ್ರಾಂಶ(Commercial Management Software)ಕ್ಕೆ ಕಂಪ್ಯೂಟರ್ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಮಾತನಾಡುತ್ತಾ, “ನಿಗಮದ ವ್ಯಾಪ್ತಿಯಲ್ಲಿನ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರಲ್ ಸ್ಟಾಲ್, ಉಪಾಹಾರ ಗೃಹ ಮತ್ತು ಇತರೆ ವಾಣಿಜ್ಯ 1847 ವಾಣಿಜ್ಯ ಮಳಿಗೆಗಳಿರುತ್ತದೆ. ಈ ವಾಣಿಜ್ಯ ಮಳಿಗೆಗಳು / ವಾಣಿಜ್ಯ ವ್ಯವಹಾರಗಳ ಕುರಿತಂತೆ ಪರವಾನಗಿದಾರರಿಂದ ಪ್ರತಿ ಮಾಹೆಯಾನ ವಸೂಲು ಮಾಡಬೇಕಾದ ಪರವಾನಗಿ ಶುಲ್ಕ, ಜಿ.ಎಸ್.ಟಿ ಮೊತ್ತ, ತಡಪಾವತಿ ದಂಡ, ಇತರೆ ಶುಲ್ಕಗಳ ಕುರಿತ ಲೆಕ್ಕಾಚಾರವನ್ನು ಹಾಗೂ ಇನ್ವಾಯ್ಸ್ ತಯಾರಿಕೆಯನ್ನು ಪ್ರಸ್ತುತ ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ. ವಾಣಿಜ್ಯ ಮಳಿಗೆಗಳ ಕುರಿತ ನಿರ್ವಹಣೆಯನ್ನು ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲು ಹೆಚ್ಚಿನ ಕಾಲಾವಕಾಶದ ಅವಶ್ಯಕತೆ ಇರುತ್ತದೆ ಹಾಗೂ ಲೆಕ್ಕಾಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುತ್ತದೆ. ಏಕರೂಪತೆ ಮತ್ತು ದಕ್ಷತೆ ಹೆಚ್ಚಿಸಲು ಈ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ. ವಾಣಿಜ್ಯ ಮಳಿಗೆಳ ನಿರ್ವಹಣೆಯನ್ನು ಸರಳೀಕರಣಗೊಳಿಸುವ ಸಲುವಾಗಿ ನಿಗಮದ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನಿಗಮದ ವತಿಯಿಂದಲೇ ಅಭಿವೃದ್ದಿಪಡಿಸಲಾಗಿರುತ್ತದೆ ಎಂದು ತಿಳಿಸಿದರು.
“ಪರಿಹಾರದ ಮೊತ್ತವನ್ನು ಪಡೆದಿರುವ ಸಿಬ್ಬಂದಿಯ ಕುಟುಂಬಸ್ಥರು ಸಚಿವರು ಹೇಳಿರುವ ಕಿವಿ ಮಾತನ್ನು ಚಾಚೂ ತಪ್ಪದೆ ಪಾಲಿಸಬೇಕು. ಹಣವನ್ನು ಸದುಪಯೋಗಪಡಿಸಿಕೊಳ್ಳಿ. ಯಾರನ್ನೋ ನಂಬಿ ದುಡ್ಡನ್ನು ಕಳೆದುಕೊಳ್ಳಬೇಡಿ, ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿಯ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕರಾದ ಡಾ. ನಂದಿನಿದೇವಿ ಕೆ., ನಿಗಮದ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಇಬ್ರಾಹಿಂ ಮೈಗೂರ, ಎಸ್.ಬಿ.ಐ ಬ್ಯಾಂಕಿನ ಡಿವಿಜನಲ್ ಜನರಲ್ ಮ್ಯಾನೇಜರ್ ಸಿ.ವಿ. ರಘುರಾಮ್,ಸಹಾಯಕ ಜನರಲ್ ಮ್ಯಾನೇಜರ್ ವಿಜಯ್ ಕೆ.ಟಿ., ಮಂಡಳಿಯ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ.ಟಿ.ಎಸ್ ಮತ್ತು ಕರಾಸಾ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.






