"ಅಲೆಮಾರಿಗಳಿಗೆ ನೀಡಲಾಗಿದ್ದ ಒಂದು ಪರ್ಸೆಂಟ್ ಮೀಸಲಾತಿಯನ್ನು ಅಕ್ರಮ ಮಾರ್ಗದಿಂದ ಕಸಿದುಕೊಳ್ಳಲಾಗಿದೆ" ಎಂದು ಜಸ್ಟಿಸ್ ನಾಗಮೋಹನ ದಾಸ್ ಆಯೋಗದೊಂದಿಗೆ ಕೆಲಸ ಮಾಡಿರುವ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
“ಲಂಬಾಣಿಗಳು ತಮ್ಮನ್ನು ಅಲೆಮಾರಿಗಳೆಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ನೀವು 36,000 ಉದ್ಯೋಗಗಳನ್ನು ಪಡೆದುಕೊಂಡಿದ್ದೀರಿ, ಹೇಗೆ ಅಲೆಮಾರಿಗಳಾಗುತ್ತೀರಿ? ಅಲೆಮಾರಿಗಳಲ್ಲಿ 600ಕ್ಕೂ ಹೆಚ್ಚು ಜನ ಉದ್ಯೋಗ ಪಡೆದಿಲ್ಲ. ಈಗಲೂ 12 ಅಲೆಮಾರಿ ಸಮುದಾಯಗಳು ಒಂದೇ ಒಂದು ಸವಲತ್ತನ್ನೂ ತೆಗೆದುಕೊಂಡಿಲ್ಲ” ಎಂದು ಒಳಮೀಸಲಾತಿ ಹಿರಿಯ ಹೋರಾಟಗಾರ ಎಸ್.ಮಾರೆಪ್ಪ ಹೇಳಿದರು.
ಕರ್ನಾಟಕದ ಒಳಮೀಸಲಾತಿ ವಂಚಿತ 49 ಅಲೆಮಾರಿ ಮತ್ತು 10 ಸೂಕ್ಷ್ಮ ಸಮುದಾಯಗಳ ಐಕ್ಯ ಸಂಘಟನೆಯಾಗಿ ಹೊಮ್ಮಿರುವ ‘ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ’ವು ಇಂದು (ಬುಧವಾರ) ಹಮ್ಮಿಕೊಂಡಿದ್ದ ‘ಬೆಂಗಳೂರು ಚಲೋ- ಬೃಹತ್ ಪ್ರತಿಭಟನಾ ಸಮಾವೇಶ’ದಲ್ಲಿ ಅವರು ಮಾತನಾಡಿದರು.
“ಲಂಬಾಣಿಗಳು ಅಲೆಮಾರಿಗಳಲ್ಲ. ಅಲೆಮಾರಿಗಳಿಗೂ ನಿಮಗೂ ಸಂಬಂಧವಿಲ್ಲ. ನೀವು ಅಡವಿಯಲ್ಲಿ ಇದ್ದಿರಬಹುದು. ನಿಮಗೆ ಸಂಪತ್ತು, ಭೂಮಿ, ಹಣ್ಣು-ಹಂಪಲು ಇತ್ತು. ನೀವು ಅಲೆಮಾರಿಗಳಾಗಲ್ಲ. ನಾವು ಅಲೆಮಾರಿಗಳೆಂದು ಹೇಳಿಕೊಂಡು ಐದು ಪರ್ಸೆಂಟ್ ಗುಳುಂ ಮಾಡಲು ಪ್ರಯತ್ನಿಸಬೇಡಿ” ಎಂದು ಎಚ್ಚರಿಸಿದರು.
“ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಲೆಮಾರಿಗಳಿಗೆ ಪಾಲು ಸಿಗುತ್ತದೆ ಎಂದು ಭಾವಿಸಬಾರದು. ಅಷ್ಟು ಸುಲಭವಾಗಿ ಅಲೆಮಾರಿಗಳ ಹಕ್ಕು ದೊರಕುವುದಿಲ್ಲ. ಹೆಚ್ಚಿನ ಜನಸಂಖ್ಯೆ ಇದ್ದರೂ ಮಾದಿಗರು 30 ವರ್ಷ ಹೋರಾಟ ಮಾಡಿದರು. ಈ ಹೋರಾಟ ದೀರ್ಘಕಾಲೀನವಾಗಿ ಇರಬೇಕು. ಚಳಿಗಾಲದ ಅಧಿವೇಶನದವರೆಗೂ ಹೋರಾಟ ಸತತವಾಗಿ ನಡೆಯಬೇಕು. ಖಂಡಿತವಾಗಿಯೂ ಇದು ಸಾಧ್ಯವಿದೆ. ದಿನನಿತ್ಯ ಅನುಭವಿಸುವ ಕಷ್ಟದ ಮುಂದೆ ಈ ಮೂರು ತಿಂಗಳ ಸಂಕಷ್ಟ ಏನೂ ಅಲ್ಲ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ‘ನ್ಯಾಯ ಸಿಗದೆ ಬೆಂಗಳೂರು ತೊರೆಯುವುದಿಲ್ಲ’: ಅಸ್ಪೃಶ್ಯ ಅಲೆಮಾರಿಗಳ ಮಹಾ ಒಕ್ಕೂಟ ಘೋಷಣೆ
ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಅವರ ಆಯೋಗದಲ್ಲಿ ಕೆಲಸ ಮಾಡಿರುವ ಚಂದ್ರಶೇಖರ್ ಮಾತನಾಡಿ, “ಅಲೆಮಾರಿಗಳಿಗೆ ಒಂದು ಪರ್ಸೆಂಟ್‌ಗಿಂತ ಹೆಚ್ಚು ಸಿಗಬೇಕಿತ್ತು. ಆದರೆ ಒಂದಕ್ಕಿಂತ ಹೆಚ್ಚು ಕೊಟ್ಟರೆ ತಾಂತ್ರಿಕ ಕಾರಣದಿಂದ ಉಳಿಯುವುದಿಲ್ಲ ಎಂದು ನಾಗಮೋಹನ ದಾಸ್ ಅವರು ನಿರ್ಧರಿಸಿ ಒಂದು ಪರ್ಸೆಂಟ್ ಕೊಟ್ಟರು. ಆದರೆ ಆ ಒಂದು ಪರ್ಸೆಂಟ್ ಮೀಸಲಾತಿಯನ್ನು ಅಕ್ರಮ ಮಾರ್ಗದಿಂದ ಕಸಿದುಕೊಳ್ಳಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಈ ರೀತಿಯ ಸಂದರ್ಭ ಸೃಷ್ಟಿ ಮಾಡಿರುವ ಸರ್ಕಾರಕ್ಕೆ ಮತ್ತು ಕ್ಯಾಬಿನೆಟ್‌ಗೆ ಅವಮಾನ ಆಗಬೇಕು. ಈ ಸಂದರ್ಭದಲ್ಲಿ ನಮಗೂ ನಾಚಿಕೆ ಆಗಬೇಕು. ಯಾಕೆಂದರೆ ಬೇರೆಬೇರೆ ಸನ್ನಿವೇಶಗಳಲ್ಲಿ ಈ ಸರ್ಕಾರದ ಪರವಾಗಿ ನಾವು ವಕಾಲತ್ತು ವಹಿಸಿದ್ದೇವೆ. ಅಲೆಮಾರಿಗಳು ಬೀದಿಗೆ ಬರಲು ನಾವು ಕಾರಣವಾಗಿದ್ದೇವೆ” ಎಂದು ವಿಷಾದಿಸಿದರು.
ಇದನ್ನೂ ಓದಿರಿ: ಅಲೆಮಾರಿಗಳ ಒಗ್ಗಟ್ಟು ಪ್ರದರ್ಶನ; ಒಳಮೀಸಲಾತಿಗಾಗಿ ಹರಿದುಬಂದ ಹೋರಾಟದ ಸಾಗರ
ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಅವರು ಟೆಂಟ್‌ಗಳ ಟೇಪ್ ಕಪ್ ಮಾಡುವ ಮೂಲಕ ಪ್ರತಿಭಟನಾ ಸಮಾವೇಶವನ್ನು ಉದ್ಘಾಟಿಸಿದರು. ದೊಂಬರು ಸಮುದಾಯದ ಪ್ರೊ. ಎ.ಎಸ್.ಪ್ರಭಾಕರ, ಬುಡ್ಗ ಜಂಗಮ ಸಮುದಾಯದ ಬಾಲಗುರುಮೂರ್ತಿ, ಹಂದಿಜೋಗಿ ಸಮುದಾಯದ ವೆಂಕಟರಮಣಯ್ಯ, ರಾಜೇಂದ್ರಕುಮಾರ್, ಸಿಂಧೊಳ್ಳು ಜನಾಂಗದ ಹನುಮಂತಪ್ಪ, ಗೋಸಂಗಿ ಸಮುದಾಯದ ಚಾವಡಿ ಲೋಕೇಶ್, ಬುಡ್ಗ ಜಂಗಮರಾದ ಶೇಷಪ್ಪ, ಸಣ್ಣಮಾರಪ್ಪ, ಅಗೇರ್ ಸಮುದಾಯದ ಜಗದೀಶ್, ಘಂಟಿಚೋರ್ ಸಮುದಾಯದ ಸುರೇಶ್, ಮಾಂಗ್ ಗಾರುಡಿ ಸಮುದಾಯದ ಅನಿಲ್ ಕುಮಾರ್ ಕಾಂಬ್ಳೆ, ಅರುಂಧತಿಯಾರ್ ಸಮಾಜದ ಆರ್.ಕೃಷ್ಣ, ಶಿಳ್ಳೇಕ್ಯಾತ ಸಮುದಾಯದ ಮಂಜುನಾಥ್, ದಕ್ಕಲಿಗ ಸಮುದಾಯದ ಶಾಂತರಾಜು, ಸುಡುಗಾಡುಸಿದ್ದ ಸಮುದಾಯದ ಲೋಹಿತಾಶ್ವ, ಚಿಂತಕ ಶಿವಸುಂದರ್, ಬರೆಹಗಾರ ವಡ್ಡಗೆರೆ ನಾಗರಾಜಯ್ಯ, ನಟ, ಹೋರಾಟಗಾರ ಚೇತನ್ ಅಹಿಂಸಾ, ಲೇಖಕ ಹುಲಿಕುಂಟೆ ಮೂರ್ತಿ, ದಲಿತ ಮುಖಂಡ ಬಿ.ಗೋಪಾಲ್, ಸಾಮಾಜಿಕ ಕಾರ್ಯಕರ್ತ ಡಾ.ಎಚ್.ವಿ.ವಾಸು, ದಸಂಸ ಮುಖಂಡ ಹೆಣ್ಣೂರು ಶ್ರೀನಿವಾಸ್, ಒಳಮೀಸಲಾತಿ ಹೋರಾಟಗಾರರಾದ ಬಸವರಾಜ ಕೌತಾಳ್, ಕರಿಯಪ್ಪ ಗುಡಿಮನಿ, ಶಿವರಾಯ ಅಕ್ಕರಕಿ, ಚಂದ್ರು ತರಹುಣಸೆ ಸೇರಿದಂತೆ ಹತ್ತಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹತ್ತು ಸಾವಿರಕ್ಕೂ ಹೆಚ್ಚು ಅಲೆಮಾರಿಗಳು ಹೋರಾಟದಲ್ಲಿ ಭಾಗವಹಿಸಿದ್ದರು. ನ್ಯಾಯ ಸಿಗುವವರೆಗೂ ಬೆಂಗಳೂರು ತೊರೆಯುವುದಿಲ್ಲ ಎಂದು ಸಮಾವೇಶ ನಿರ್ಧರಿಸಿದೆ.





