ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಶೇ.1ರಷ್ಟು ಮೀಸಲಾತಿ ಕಲ್ಪಿಸಲು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ಧರಣಿ ಸತ್ಯಾಗ್ರಹವನ್ನು ಇಂದಿಗೆ ಹಿಂಪಡೆದಿದೆ.
ಒಳ ಮೀಸಲಾತಿ ಕುರಿತು ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿತು. ಸಮುದಾಯದ ಬೇಡಿಕೆಗಳಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರು.
ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವರ ಶಿಫಾರಸಿನಂತೆ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ಕಲ್ಪಿಸಲು ಆದ್ಯತೆ ನೀಡುವಂತೆ , ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ರಚನೆ ಹಾಗೂ ಅಲೆಮಾರಿ ಸಮುದಾಯಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವ ಕುರಿತಂತೆ ಮುಖ್ಯಮಂತ್ರಿ ಅವರಲ್ಲಿ ನಿಯೋಗ ಮನವಿ ಮಾಡಿತು.
ಸಭೆಯಲ್ಲಿ ಹಾಜರಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, “ಖಂಡಿತವಾಗಿಯೂ ನಿಮ್ಮ ಆತಂಕವನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿಗಿಂತ ಮೊದಲೇ ಸಮಸ್ಯೆ ಬಗೆಹರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ” ಎಂದು ತಿಳಿಸಿದರು.
“ದಯವಿಟ್ಟು ಸರ್ಕಾರದ ಮೇಲೆ ವಿಶ್ವಾಸವಿಡಿ, ಹೈಕೋರ್ಟ್‌ನಲ್ಲಿ ಹಾಕಿರುವ ಮೊಕದ್ದಮೆ ವಾಪಸ್ ಪಡೆದುಕೊಳ್ಳಿ, ನಾವು ಖಂಡಿತವಾಗಿಯೂ ಸಮುದಾಯವನ್ನು ಕೈ ಬಿಡದೆ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
“ನಾವು ಇದನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ ಸರ್. ಆದರೆ ಸರ್ಕಾರದಿಂದ ನಮಗೆ ಸ್ಪಷ್ಟವಾದ ಖಚಿತವಾದ ಆದೇಶ ಬರಬೇಕು. ಅಲ್ಲಿಯತನಕ ನೀವು ಯಾವುದೇ ರೀತಿಯ ಉದ್ಯೋಗ ಭರ್ತಿ ಮಾಡಬಾರದು” ಎಂದು ಹೋರಾಟಗಾರರು ತಿಳಿಸಿದರು. ಇದರೊಂದಿಗೆ ಸಭೆ ಮುಕ್ತಾಯವಾಯಿತು.
“ಕೋರ್ಟ್‌ನಲ್ಲಿ ಈ ಪ್ರಕರಣವನ್ನು ಹಿಂಪಡೆದುಕೊಳ್ಳಬೇಕಾ? ಎಂದು ಚರ್ಚೆ ಮಾಡುವುದಕ್ಕೆ ಸಮಿತಿ ನಮ್ಮ ಸಂಬಂಧ ಪಟ್ಟ ವಕೀಲರು ಮತ್ತು ಸರ್ಕಾರಿ ವಕೀಲರು ಇವರಿಬ್ಬರ ಮಧ್ಯೆ ಸಮಾಲೋಚನೆ ಮಾಡಿ ‘ಮ್ಯೂಚುಯಲ್ ಕಮಿಟ್ಮೆಂಟ್’ ಮೇಲೆ ಈ ಸಮಸ್ಯೆಯನ್ನು ಶೇಕಡ ಒಂದರಷ್ಟು ಮೀಸಲಾತಿ ಕೊಡುವುದು ಜಾರಿಯಾಗಬೇಕು. ಮತ್ತೊಂದು ಕಡೆ ಕಾನೂನು ತೊಡಕನ್ನು ನಿವಾರಣೆ ಮಾಡಬೇಕು. ಅದಕ್ಕೆ ಇರುವಂತಹ ಸರಿಯಾದ ಮಾರ್ಗದ ಬಗ್ಗೆ ಸರ್ಕಾರಿ ವಕೀಲರ ಜೊತೆಗೂ ಚರ್ಚೆ ಮಾಡಿ, ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಸಮಿತಿ ತೀರ್ಮಾನ ಮಾಡಿದೆ” ಎಂದು ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ತಿಳಿಸಿದೆ.
ಸರ್ಕಾರದ ಇಂದಿನ ತೀರ್ಮಾನ ಅಲೆಮಾರಿ ಸಮುದಾಯಕ್ಕೆ ದಕ್ಕಿದ ಅತಿ ದೊಡ್ಡ ವಿಜಯವಾಗಿದೆ. ಚದುರಿ ಹೋಗಿದ್ದ ಸಮುದಾಯ ಒಟ್ಟುಗೂಡಿ ದೊಡ್ಡ ಹೋರಾಟ ಮಾಡಿ, ಡೆಲ್ಲಿ ತನಕ ಹೋಗಿ ಮತ್ತೆ ಬಂದು ಸರ್ಕಾರಕ್ಕೆ ಮನವರಿಕೆ ಮಾಡುವುದರಲ್ಲಿ ಸಮುದಾಯ ಯಶಸ್ವಿಯಾಗಿದೆ.
ಇದರ ಮೂಲಕ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ಇಂದಿಗೆ ಅಂತ್ಯಗೊಳಿಸಿದೆ.
ಸಭೆಯಲ್ಲಿ ಸಚಿವರಾದ ಎಚ್ ಸಿ ಮಹದೇವಪ್ಪ, ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಮಾಜಿ ಸಚಿವರಾದ ಎಚ್ ಆಂಜನೇಯ, ವಿವಿಧೆಡೆಗಳಿಂದ ಆಗಮಿಸಿದ್ದ ಅಲೆಮಾರಿ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.





