ಕನ್ನಡ ಭಾಷೆಯ ಕಡ್ಡಾಯ ನಾಮಫಲಕ ಅನುಷ್ಠಾನಗೊಳಿಸುವ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಗಂಭೀರ ಚರ್ಚೆ ನಡೆಯಿತು.
ಸದಸ್ಯೆ ಉಮಾಶ್ರೀ ಅವರು ಕನ್ನಡ ಭಾಷೆಯ ಕಡ್ಡಾಯ ನಾಮಫಲಕ ಅನುಷ್ಠಾನ ವಿಚಾರವಾಗಿ ಮೊದಲು ಪ್ರಶ್ನೆ ಎತ್ತಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಉತ್ತರಿಸಿ, “ವಾಣಿಜ್ಯ , ಕೈಗಾರಿಕೆ, ಟ್ರಸ್ಟ್, ಆಸ್ಪತ್ರೆ, ಮನರಂಜನಾ ಕೇಂದ್ರ, ಹೋಟೆಲ್ ಸೇರಿದಂತೆ ಮತ್ತಿತರ ಕಡೆ ಕನ್ನಡ ಭಾಷೆಯ ಕಡ್ಡಾಯ ನಾಮಫಲಕ ಅನುಷ್ಠಾನಗೊಳಿಸುವ ನಿಯಮವನ್ನು 15 ದಿನಗಳಿಂದ 1 ತಿಂಗಳೊಳಗೆ ರಾಜ್ಯಾದ್ಯಂತ ಕಡ್ಡಾಯ ಮಾಡುತ್ತೇವೆ” ಎಂದು ಹೇಳಿದರು.
“ನಮ ರಾಜ್ಯದಲ್ಲಿ ಕನ್ನಡ ಕಡ್ಡಾಯ ಆಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿಯೇ ರಾಜ್ಯಮಟ್ಟದ ಸಮಿತಿಯನ್ನು ರಚಿಸಿದ್ದೇವೆ. ಇದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇರುತ್ತಾರೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಕನ್ನಡವನ್ನು ಕಡ್ಡಾಯಗೊಳಿಸಬೇಕೆಂಬ ಸರ್ಕಾರದ ನಿಲುವಿನಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ” ಎಂದರು.
“ಕನ್ನಡ ಕಡ್ಡಾಯ ನಾಮಫಲಕ ಅನುಷ್ಠಾನ ಸಂಬಂಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ರೀತಿ ನಿಯಮಗಳನ್ನು ರೂಪಿಸಿ ಕಳುಹಿಸಿಕೊಟ್ಟಿದ್ದೇವೆ. 15 ದಿನಗಳಿಂದ ಒಂದು ತಿಂಗಳೊಳಗೆ ಇದು ಪೂರ್ಣಗೊಳ್ಳಬಹುದು. ನಂತರ ರಾಜ್ಯಾದ್ಯಂತ ಆದೇಶ ಹೊರಬೀಳಲಿದೆ” ಎಂದು ತಿಳಿಸಿದರು.
“ಕನ್ನಡ ಕಡ್ಡಾಯ ನಾಮಫಲಕ ಅಭಿಯಾನವು ಅನೇಕ ಜಿಲ್ಲೆಗಳಲ್ಲಿ ಯಶಸ್ವಿಯಾಗಿದೆ. 11 ಜಿಲ್ಲೆಗಳಲ್ಲಿ ನೂರಕ್ಕೆ ನೂರರಷ್ಟು ಅನುಷ್ಠಾನವಾಗಿದ್ದರೆ, ಕೆಲವು ಜಿಲ್ಲೆಗಳಲ್ಲಿ, ಶೇ. 80, 85, 90ರಷ್ಟು ಅನುಷ್ಠಾನವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಡ್ಡಾಯ ಮಾಡಲು ಈ ನಿಯಮವನ್ನು ಜಾರಿ ಮಾಡುತ್ತೇವೆ” ಎಂದು ಹೇಳಿದರು.
“ಕನ್ನಡ ನಾಮಫಲಕ ಹಾಕದೇ ಇದ್ದರೆ, ಮೊದಲ ಅಪರಾಧಕ್ಕಾಗಿ 5 ಸಾವಿರ ದಂಡ ಹಾಕುತ್ತೇವೆ. ಎರಡನೇ ಅಪರಾಧಕ್ಕೆ 10 ಸಾವಿರ ಹಾಗೂ ಪ್ರತಿ ಅಪರಾಧಕ್ಕೆ 20 ಸಾವಿರ ವಿಸ್ತರಿಸಬಹುದಾಗಿದೆ. 60:40 ಅನುಪಾತದಲ್ಲಿ ಕನ್ನಡ ಬೋರ್ಡ್ ಹಾಕಬೇಕು. ಜಿಲ್ಲಾಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ” ಎಂದು ವಿವರಿಸಿದರು.





