“ಕರ್ನಾಟಕದಲ್ಲಿ ಮಾಧ್ಯಮಗಳಿಗೆ ಜನರ ವಿಚಾರಗಳು ಬೇಕಿಲ್ಲ. ಅವು ಕಾಂಗ್ರೆಸ್ ಸರ್ಕಾರದ ಅಭದ್ರತೆ ಮತ್ತು ನಾಯಕತ್ವ ಬದಲಾವಣೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ವಿಚ್ಚೇದನ ಹಾಗೂ ಜೈಲಿನಲ್ಲಿ ನಟ ಏನು ಮಾಡಿದ, ಏನು ತಿಂದ ಎಂಬುದರ ಮೇಲೆ ಹೆಚ್ಚು ಆಸಕ್ತಿ ಹೊಂದಿವೆ” ಎಂದು ಸುದ್ದಿ ಸಂಸ್ಥೆ ‘ನ್ಯೂಸ್ ಮಿನಿಟ್’ನ ಸಂಪಾದಕಿ ಧನ್ಯ ರಾಜೇಂದ್ರನ್ ಹೇಳಿದರು.
ಕಲಬುರಗಿಯಲ್ಲಿ ನಡೆದ ಈದಿನ.ಕಾಮ್‌ನ ‘ಓದುಗರ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಮಾಧ್ಯಮಗಳ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ಯಪಡಿಸಿದರು. ” ಮಾಧ್ಯಮಗಳು ನ್ಯೂಟ್ರಲ್ ಆಗಬೇಕು ಎನ್ನಲಾಗುತ್ತದೆ. ಆದರೆ, ದಮನಿತರು, ಅಂಚಿನಲ್ಲಿರುವವರ ಜತೆಗೆ ಮಹಿಳೆಯರು ಮತ್ತು ಮಕ್ಕಳ ವಿಚಾರದಲ್ಲಿ ಮಾಧ್ಯಮಗಳು ಖಂಡಿತವಾಗಿಯೂ ಪಕ್ಷಪಾತಿಗಳಾಗಿರಬೇಕು. ಜನಪರ ನಿಲುವುಗಳನ್ನು ಹೊಂದಿರಬೇಕು” ಎಂದರು.
“ಕರ್ನಾಟಕದ ಮಾಧ್ಯಮಗಳನ್ನು ನೋಡಿದರೆ, ಒಂದೇ ಸುದ್ದಿ ಎಲ್ಲೆಡೆ ಪ್ರಸಾರವಾಗುತ್ತಿರುತ್ತದೆ. ಅದು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರಾ ಎಂಬುದು. ಡಿಕೆಶಿ ಮುಖ್ಯಮಂತ್ರಿಯಾಗದಿದ್ದರೆ, ಬಿಜೆಪಿಗೆ ಸೇರುತ್ತಾರಾ ಎಂದೂ ಮಾಧ್ಯಮಗಳೇ ಹೇಳುತ್ತಿವೆ. ಇದು ಬಿಟ್ಟರೇ, ಅವರು ತಿಂಡಿ ಏನು ತಿಂದರು? ಏನೆಲ್ಲಇತ್ತು-ಏನು ಇರಲಿಲ್ಲ… ಹೀಗೆ ಇತ್ಯಾದಿ…ನಮಗೆ ಅವರು ತಿಂದ ಮೈಸೂರು ಪಾಕ್‌ನಲ್ಲಿ ಸಕ್ಕರೆ ಇದೇಯಾ ಎಂಬ ವಿಚಾರ ಮುಖ್ಯವಲ್ಲ” ಎಂದರು.
“ಸಿದ್ಧರಾಮಯ್ಯ ಅವರು ಅಹಿಂದ ರಾಜಕಾರಣ ನಂಬಿರುವ, ಸಮಾಜವಾದಿ ಚಿಂತನೆ ಇರುವ ರಾಜಕಾರಣಿ. ಆದರೆ, ಡಿ ಕೆ ಶಿವಕುಮಾರ್ ರಾಜಕಾರಣ ಯಾವ ಬಗೆ ಎಂಬ ಬಗ್ಗೆ ಯಾರೂ ಕೂಡ ಚರ್ಚೆ ನಡೆಸುತ್ತಿಲ್ಲ. ಇಬ್ಬರೂ ಕೂಡ ಬೇರೆ ಬೇರೆ ಬಗೆಯ ರಾಜಕಾರಣಿಗಳು. ನಾನು ಈದಿನ.ಕಾಮ್‌ನ ಲೇಖನ ಗಮನಿಸಿದೆ. ಅದರಲ್ಲಿ, ‘ಮುಖ್ಯವಾಹಿನಿ ಮಾಧ್ಯಮಗಳು ಅಧಿಕಾರ ಬದಲಾವಣೆ ಬಗ್ಗೆ ಯಾಕೆ ಇಷ್ಟು ಆಸಕ್ತಿ ವಹಿಸುತ್ತದೆ?’ ಎಂಬ ಪ್ರಶ್ನೆ ಮನದಟ್ಟಾಗುತ್ತದೆ. ಮಹಾರಾಷ್ಟ್ರದಲ್ಲೂ ಇದೇ ಪ್ರಶ್ನೆಯಿದೆ. ಮಾಧ್ಯಮಗಳಿಗೆ ಕಾಂಗ್ರೆಸ್ ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಅಧಿಕಾರ ಬದಲಾವಣೆ ವಿಚಾರ ಕುರಿತು ಬಹಳ ಆಸಕ್ತಿಯಿದೆ” ಎಂದು ಹೇಳಿದರು.
“ಸಾರ್ವಜನಿಕರ ಸ್ಥಳಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ನಡೆಸುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಟೀಕೆ ಮಾಡಿದರು. ಪ್ರಶ್ನಿಸಿದರು. ಭಾರತದಲ್ಲಿ ಅನುಮತಿ ಇಲ್ಲದೆ ನಡೆಯುವ ಸರ್ಕಾರಿ ಸ್ಥಳಗಳಲ್ಲಿ ಪಥಸಂಚಲನವನ್ನು ತಡೆದಿರುವ ರಾಜ್ಯವೆಂದರೆ ಅದು ತಮಿಳುನಾಡು. ಕರ್ನಾಟಕದಲ್ಲಿಯೂ ಕೂಡ ಇದನ್ನು ತಡೆಯಲು ಪ್ರಿಯಾಂಕ್ ಖರ್ಗೆ ಅವರು ಪ್ರಯತ್ನಿಸಿದರು” ಎಂದರು.

“ಕಳೆದ 100 ವರ್ಷದಿಂದ ದೇಶದಲ್ಲಿರುವ ಆರ್ ಎಸ್ ಎಸ್ ನೋಂದಣಿಯೇ ಆಗಿಲ್ಲ. ಆದಾಯ ತೆರಿಗೆ ಕೇಳಿದರೆ, ಅವರು ತಮ್ಮದು ಸಾಂಸ್ಕೃತಿಕ ಸಂಘಟನೆ ಎಂದು ಹೇಳುತ್ತಾರೆ. ಮೋಹನ್ ಭಾಗವತ್ ಅವರು ಇದು ಒಂದು ವ್ಯಕ್ತಿಗಳ ಗುಂಪು ಮಾತ್ರ ಎಂದೆನ್ನುತ್ತಾರೆ. ಈಗಿನ ಮಾಧ್ಯಮಗಳು ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ವಿರುದ್ಧವಿದ್ದಾರೆ ಎಂದು ಸುದ್ದಿ ಬಿತ್ತರಿಸುತ್ತವೆಯೇ ಹೊರತು, ಇಲ್ಲಿಯವರೆಗೂ ಆರ್ ಎಸ್ ಎಸ್ ಯಾಕೆ ನೋಂದಣಿ ಆಗಿಲ್ಲ ಎಂಬ ಬಗ್ಗೆ ಪ್ರಶ್ನೆ ಮಾಡಿಲ್ಲ” ಎಂದು ಕಿಡಿಕಾರಿದರು.
“ಸ್ವತಂತ್ರ ಪತ್ರಿಕೆ ಕಾರವಾನ್‌ನಲ್ಲಿ ಕೇಶವ ಕುಂಜ್ ಅವರು ಆರ್ ಎಸ್ ಎಸ್ ಮುಖ್ಯ ಕಚೇರಿ ಬಗ್ಗೆ ವರದಿ ಮಾಡಿದ್ದಾರೆ. ಈ ಕಟ್ಟಡ ಕಟ್ಟಲು ನೂರೈವತ್ತು ಕೋಟಿ ಖರ್ಚು ಮಾಡಲಾಗಿದೆ. ಈ ಕಟ್ಟಡ ನಿರ್ಮಾಣ ಮಾಡಲು ಈ ಸಂಘಕ್ಕೆ ಹಣ ಎಲ್ಲಿಂದ ಬಂತು ಎಂಬ ಬಗೆಗಿನ ತನಿಖಾ ವರದಿಯನ್ನು ಈ ಪತ್ರಿಕೆ ಪ್ರಕಟ ಮಾಡಿದೆ. ಈ ಹಣ ಹಲವು ಸ್ವತಂತ್ರ ಸಂಸ್ಥೆಗಳಿಗೆ ಮೊದಲು ಬರುತ್ತದೆ. ಅಲ್ಲಿಂದ ಆರ್ ಎಸ್ ಎಸ್‌ಗೆ ಹರಿಯುತ್ತದೆ ಎಂಬುದನ್ನು ವಿವರಿಸಿದೆ. ಕೆಲವೇ ವಾರಗಳಲ್ಲಿ ಆರ್ ಎಸ್ ಎಸ್‌ನ ಶಾಖೆಗಳಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಯಾವುವು ಎಂಬದರ ಕುರಿತಾದ ಅಧ್ಯಯನ ವರದಿಯೂ ಹೊರಬರುತ್ತದೆ” ಎಂದರು.
“ಈಗಿನ ಮಾಧ್ಯಮಗಳು ವೃತ್ತಿಪರತೆಯನ್ನು ಮರೆತಿವೆ. ಇನ್ನೊಬ್ಬರ ಸಂಸಾರದ ವಿಚಾರ, ದ್ವೇಷ ಭಾಷಣಗಳನ್ನು ಬಿತ್ತರಿಸುತ್ತಿವೆ. ದ್ವೇಷ ಭಾಷಣ ಬಿತ್ತರಿಸಬಾರದು ಎಂದು ಹಲವು ವೃತ್ತಿಪರರನ್ನು ಒಳಗೊಂಡಿರುವ ‘ಹೇಟ್ ಸ್ಪೀಚ್ ಬೇಡ’ ಎಂಬ ಸಣ್ಣ ಸಂಘಟನೆ ಅಭಿಯಾನ ನಡೆಸುತ್ತಿದೆ. ದ್ವೇಷ ಭಾಷಣ ಬಿತ್ತರಿಸಿದ್ದಕ್ಕಾಗಿ 2022ರಲ್ಲಿ ನ್ಯೂಸ್ 18, TV9 ಗಳಿಗೆ ದಂಡ ವಿಧಿಸಲಾಗಿದೆ. ಆದರೂ, ಮಾಧ್ಯಮಗಳು ಬುದ್ದಿ ಕಲಿತಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಜನಸಾಮಾನ್ಯರ ದನಿಯಾಗಿದೆ ಈದಿನ.ಕಾಮ್: ಮರಿಯಪ್ಪಹಳ್ಳ
“ಮೋದಿ ಸರ್ಕಾರ ಎರಡು ವಾರಗಳ ಹಿಂದೆ ಜಾಹೀರಾತುಗಳಿಗೆ ನೀಡುವ ಹಣವನ್ನು 26%ರಷ್ಟು ಹೆಚ್ಚಿಸುತ್ತೇವೆ ಎಂದು ಘೋಷಿಸಿದೆ. ಸರ್ಕಾರದಿಂದ ಮೀಡಿಯಾಗಳಿಗೆ ಬರುವ ಹಣದಿಂದ ಅವರು ಸರ್ಕಾರವನ್ನು ಹೊಗಳಬೇಕಾಗುತ್ತದೆ. ಹೊರದೇಶಗಳಲ್ಲಿ ಜನರೇ ಮೀಡಿಯಾಗಳಿಗೆ ಹಣ ನೀಡುತ್ತಾರೆ. ಜನರಿಗೆ ಅಗತ್ಯವಾದ ಸುದ್ದಿಗಳನ್ನು ಅಲ್ಲಿನ ಮಾಧ್ಯಮಗಳು ಕೊಡುತ್ತವೆ. ಆದರೆ, ಇಲ್ಲಿ ನಾವು ಡೈವೋರ್ಸ್ ಕಥೆ ಕೇಳಬೇಕಾಗಿದೆ” ಎಂದರು.
“ಆಳಂದದಲ್ಲಿ ನಡೆದ ಮತಗಳ್ಳತನದ ಬಗ್ಗೆ ಕನ್ನಡದ ಮಾಧ್ಯಮಗಳು ಪ್ರಕಟಿಸಿಲ್ಲ. ಆಡಳಿತ ಸರ್ಕಾರದ ಕೈಗೊಂಬೆಗಳಾಗಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮಲ್ಲೇ ಅನೇಕ ಸ್ವತಂತ್ರ ಸಣ್ಣಮಾಧ್ಯಮಗಳಿವೆ. ಈ ದಿನಕ್ಕೆ ಮೂರು ವರ್ಷಗಳಾಗಿವೆ. ಅದೇ ರೀತಿ ಫೈಲ್ ಇದೆ. ಅನೇಕ ಯೂಟ್ಯೂಬ್‌ಗಳಿವೆ. ಇವುಗಳನ್ನು ಬೆಂಬಲಿಸಬೇಕು” ಎಂದು ಹೇಳಿದರು.





