ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಮಾಸಿಕ ಒಂದು ದಿನ ವೇತನಸಹಿತ ಮುಟ್ಟಿನ ರಜೆ ಸೌಲಭ್ಯ ಒದಗಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರದ ಈ ಆದೇಶವನ್ನು ಬೆಂಗಳೂರು ಹೋಟೆಲ್‌ಗಳ ಸಂಘ ಪ್ರಶ್ನಿಸಿದ್ದು, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಕರ್ನಾಟಕದಲ್ಲಿ ನಾನಾ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ನೋಂದಣಿಯಾಗಿರುವ ಎಲ್ಲ ಉದ್ದಿಮೆಗಳಲ್ಲಿಯೂ ಮಹಿಳಾ ಸಿಬ್ಬಂದಿಗಳಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆ ನೀಡಬೇಕೆಂದು ಸರ್ಕಾರವು 2025ರ ನವೆಂಬರ್ 20ರಂದು ಅಧಿಸೂಚನೆ ಹೊರಡಿಸಿದೆ. ನವೆಂಬರ್‌ನಿಂದಲೇ ನಿಯಮವು ಜಾರಿಗೆ ಬಂದಿದೆ.
ಈ ಬೆನ್ನಲ್ಲೇ, ಸರ್ಕಾರದ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್‌ಗಳ ಸಂಘವು ಹೈಕೋರ್ಟ್ ಮೆಟ್ಟಿಲೇರಿದೆ. “ಕಾರ್ಮಿಕರು ಅಥವಾ ನೌಕರರ ಆರೋಗ್ಯ, ಯೋಗಕ್ಷೇಮ, ಸುರಕ್ಷತೆ ಕೆಲಸದ ಅವಧಿ, ವಾರದ ರಜೆ, ಒಟ್ಟು ರಜೆ ದಿನಗಳು, ವೇತನ ಸಹಿತ ರಜೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾಯ್ದೆ-ಕಾನೂನುಗಳಿವೆ. ಅದರಂತೆ ಉದ್ದಿಮೆ, ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಈಗ ಏಕಾಏಕಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ವೇತನಸಹಿತ ಮುಟ್ಟಿನ ರಜೆ ನೀಡಲು ಸರ್ಕಾರ ಆದೇಶಿಸಿದೆ. ಪರಿಣಾಮ, ಉದ್ದಿಮೆಗಳ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಆಗಲಿದೆ” ಎಂದು ಸಂಘ ವಾದಿಸಿದೆ.
“ಮಹಿಳಾ ಸಿಬ್ಬಂದಿಗಳಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆ ನೀಡುವುದರಿಂದ ಕೆಲಸಕ್ಕೆ ಅಡಚಣೆ ಉಂಟಾಗುತ್ತದೆ. ಜೊತೆಗೆ, ಆರ್ಥಿಕ ಹೊರೆಯೂ ಹೆಚ್ಚಾಗಲಿದೆ. ಕಾಯ್ದೆಗೆ ತಿದ್ದುಪಡಿ ಇಲ್ಲದೆ, ಕಾರ್ಯಕಾರಿ ಆದೇಶದ ಮೂಲಕ ಇಂತಹ ಸೌಲಭ್ಯ ಜಾರಿಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ಆದೇಶವು ಕಾನೂನುಬಾಹಿರ ಮತ್ತು ಏಕಪಕ್ಷೀಯವಾಗಿದೆ. ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು” ಎಂದು ಒತ್ತಾಯಿಸಿದೆ.
ನ್ಯಾಯಾಲಯವು ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ.




