ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆಗಳಿವೆ.
ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು. ಈ ಬೆನ್ನಲ್ಲೇ, ಸಂಘಪರಿವಾರದ ಕಾರ್ಯಕರ್ತರು ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ, ಬೆದರಿಕೆ, ನಿಂದನೆಗೆ ಇಳಿದಿದ್ದರು. ಕೆಲವು ಪುಂಡರು ತಮಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು.
ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಸೋಲಾಪುರ ಮೂಲದ ದಿನೇಶ್ ನರೋಣಿ ಎಂದು ಹೆಸರಿಸಲಾಗಿತ್ತು. ಆದರೆ, ಆರೋಪಿಯ ಬಂಧನಕ್ಕಾಗಿ ಬೆಂಗಳೂರು ಮತ್ತು ಕಲಬುರಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು.
ಈ ಲೇಖನ ಓದಿದ್ದೀರಾ?: RSS- ದೇಶಭಕ್ತರ ಸಂಘಟನೆಯೇ! ಯಶವಂತ್ ಶಿಂದೆ ಅಫಿಡವಿಟ್ ಹೇಳುತ್ತಿರುವುದೇನು?
ಇದೀಗ, ಆರೋಪಿ ದಿನೇಶ್‌ನನ್ನು ಲಾತೂರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತ, ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಮಾಡಿದ ಬಳಿಕ ಸೋಲಾಪುರದಿಂದ ಲಾತೂರ್‌ಗೆ ಪರಾರಿಯಾಗಿದ್ದನು ಎಂದು ವರದಿಯಾಗಿದೆ.
ಆರೋಪಿಯನ್ನು ಕಲಬುರಗಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ರಾತ್ರಿಯ ವೇಳೆಗೆ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾನೆಗೆ ಕರೆತರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.




