ಕರ್ನಾಟಕ ವಿಧಾನ ಪರಿಷತ್ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಒಟ್ಟು ನಾಲ್ಕು ಸೀಟುಗಳ ಪೈಕಿ ಒಂದು ಸ್ಥಾನವನ್ನು ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಇನ್ನುಳಿದ ಮೂರು ಈಶಾನ್ಯ ಶಿಕ್ಷಕರ ಕ್ಷೇತ್ರ, ಪೂರ್ವ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಇನ್ನುಳಿದ 1 ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಹಾಗೂ ಬಿಜೆಪಿ ವಿಧಾನ ಪರಿಷತ್ ಚುನಾವಣೆಗೂ ತಮ್ಮ ಮೈತ್ರಿಯನ್ನು ಮುಂದುವರೆಸಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸುಶೀಲ್ ನಮೋಶಿ, ಪೂರ್ವ ಪದವೀಧರ ಕ್ಷೇತ್ರಕ್ಕೆ ಎಸ್.ವಿ ಸಂಕನೂರ್ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಕೆ.ಎಂ.ಸುರೇಶ್ ಅವರಿಗೆ ನೀಡಲಾಗಿದೆ. ಇನ್ನುಳಿದ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ.
ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡಕ್ಕೆ ಬೇಡಿಕೆ ಇಟ್ಟಿತ್ತು. ಬೆಂಗಳೂರು ಶಿಕ್ಷಕರ ಮತ್ತು ಆಗ್ನೇಯ ಪದವೀಧರ ಪದವೀಧರ ಕ್ಷೇತ್ರಗಳನ್ನು ಜೆಡಿಎಸ್ ಕೇಳಿತ್ತು. ಆದರೆ ಆಗ್ನೇಯ ಪದವೀಧರ ಕ್ಷೇತ್ರವನ್ನು ಬಿಜೆಪಿಯ ಚಿದಾನಂದಗೌಡ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ. ಇನ್ನು ಕಾಂಗ್ರೆಸ್‌ನ ಪುಟ್ಟಣ್ಣ ಇರುವ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಲಾಗಿದೆ.
ಇದನ್ನು ಓದಿದ್ದೀರಾ? ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು
ಕಾಂಗ್ರೆಸ್ ಈಗಾಗಲೇ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ ಮರು ಸ್ಪರ್ಧೆ ಮಾಡಲಿದ್ದಾರೆ. ಪಶ್ಚಿಮ ಪದವೀಧರರ ಕ್ಷೇತ್ರದಿಂದ ಮೋಹನ್ ಲಿಂಬಿಕೈ, ಆಗ್ನೇಯ ಪದವೀಧರರ ಕ್ಷೇತ್ರದಿಂದ ಶಶಿ ಹುಲಿಕುಂಟೆಮಠ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದ ಟಿಕೆಟ್ ಶರಣಪ್ಪ ಮಟ್ಟೂರ್ ಅವರಿಗೆ ನೀಡಲಾಗಿದೆ.
2020ರಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆಗಳು ನಡೆದವು. ಎರಡು ಪದವೀಧರರ ಕ್ಷೇತ್ರಗಳಿಂದ ಎಸ್ ವಿ ಸಂಕನೂರು ಮತ್ತು ಚಿದಾನಂದ್ ಗೌಡ ಆಯ್ಕೆಯಾದ್ದರು. ಎರಡು ಶಿಕ್ಷಕರ ಕ್ಷೇತ್ರಗಳಿಂದ ಶಶಿಲ್ ನಮೋಶಿ ಮತ್ತು ಪುಟ್ಟಣ್ಣ ಆಯ್ಕೆಯಾದ್ದರು. ನಾಲ್ವರೂ ಬಿಜೆಪಿಯವರಾಗಿದ್ದರು. ಆದರೆ ಪುಟ್ಟಣ್ಣ ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದರು. ನಂತರ, ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ಇವರೆಲ್ಲರ ಅವಧಿಗಳು 2026ರ ನವೆಂಬರ್ 11 ರಂದು ಕೊನೆಗೊಳ್ಳುತ್ತವೆ. ಆದರೆ ಅವಧಿ ಮುಗಿಯುವ ಒಂದು ತಿಂಗಳ ಮೊದಲು ಚುನಾವಣೆಗಳನ್ನು ನಡೆಸಬೇಕು.





