ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಸಾವು ನೋವುಗಳ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರ ಸಮಿತಿ ತನ್ನ ತನಿಖಾ ವರದಿಯನ್ನು ಕಾವೇರಿ ನಿವಾಸದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಪಿಸಿತು.
ವರದಿಯಲ್ಲಿ ಕೆಲವೊಂದು ಮಹತ್ವದ ಸಂಗತಿಗಳು ಉಲ್ಲೇಖವಾಗಿವೆ ಎನ್ನುವ ಮಾಹಿತಿ ಇದೆ. ಸಹಜವಾಗಿಯೇ ವರದಿ ಸುತ್ತ ಕುತೂಹಲ ಮೂಡಿದೆ. ಕೋವಿಡ್ 19 ಸಂದರ್ಭದಲ್ಲಿ ಹಾಲಿ ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ಅವರು ಆರೋಗ್ಯ ಇಲಾಖೆಯ ಸಚಿವರಾಗಿದ್ದ ವೇಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಸಂಭವಿಸಿತ್ತು. ಮೈಕೆಲ್ ಡಿ ಕುನ್ಹಾ ಅವರ ವರದಿಯಲ್ಲಿ ಅಂದಿನ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪಾತ್ರದ ಬಗ್ಗೆ ಏನು ಉಲ್ಲೇಖ ಮಾಡಲಾಗಿದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಆಕ್ಸಿಜನ್ ದುರಂತದಲ್ಲಿ ಒಟ್ಟು 32 ಮಂದಿ ಮೃತಪಟ್ಟಿದ್ದರು. ಈ ಪೈಕಿ 21 ಮಂದಿಯ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗದ ಬೇಡಿಕೆ ಕೇಳಿಬಂದಿತ್ತು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ನಡೆದಿತ್ತು. ಘಟನೆಗೆ ಕಾರಣಕರ್ತರಾದವರ ವಿರುದ್ಧ ಕ್ರಮಕ್ಕೆ ಹೋರಾಟಗಾರರಿಂದ ಒತ್ತಾಯ ಕೇಳಿಬಂದಿತ್ತು.
ಮೇ 2, 2021ರ ಮಧ್ಯರಾತ್ರಿ ಹಾಗೂ ಮೇ 3, 2021ರ ಬೆಳಗಿನ ಜಾವದ ನಡುವೆ ಈ ಘಟನೆ ನಡೆದಿತ್ತು. ಆಕ್ಸಿಜನ್ ಕೊರತೆ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ರೋಗಿಗಳು ಮೃತಪಟ್ಟಿದ್ದರು. ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಆರೋಪ ಕೇಳಿಬಂದಿದೆ. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಈ ಘಟನೆ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ತಾವು ಅಧಿಕಾರಕ್ಕೆ ಬಂದ ಮೇಲೆ ಈ ಕುರಿತು ನ್ಯಾಯಾಂಗ ಆಯೋಗದ ತನಿಖೆಗಾಗಿ ನ್ಯಾ. ಬಿ.ಎ. ಪಾಟೀಲ್ ಆಯೋಗ ರಚನೆ ಮಾಡಿದ್ದರು.
ಕಾಂಗ್ರೆಸ್ ಸರ್ಕಾರ ಈ ಆಯೋಗದ ವರದಿಯನ್ನು ತಿರಸ್ಕರಿಸಿತ್ತು. ಮರು ತನಿಖೆಯ ಜವಾಬ್ದಾರಿಯನ್ನು ನ್ಯಾ. ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗಕ್ಕೆ ವಹಿಸಲಾಗಿತ್ತು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಡಾ. ಕೆ ಸುಧಾಕರ್ ವಿರುದ್ಧ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂಬ ಆರೋಪ ಮಾಡಲಾಗಿತ್ತು. ಆದರೆ ಇದೀಗ ಅಂತಿಮ ವರದಿಯನ್ನು ಏನೆಲ್ಲಾ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ವರದಿ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು.





