ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರಾಗಿದ್ದ ಜಿ.ಟಿ ದಿನೇಶ್ ಕುಮಾರ್ ಅವರು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿ, ಅದಕ್ಕೆ ಪ್ರತಿಫಲವಾಗಿ, ಪರೋಕ್ಷ ರೂಪದಲ್ಲಿ ಹಣ ಪಡೆದಿರುವುದನ್ನು ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯಲ್ಲಿ ಬಯಲಾಗಿದೆ.
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮುಡಾ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಾದಯಾತ್ರೆ ಮಾಡಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಾಗ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿದ್ದ ಜಿ.ಟಿ ದಿನೇಶ್ ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿತ್ತು.
ಪ್ರಾಧಿಕಾರವು ದಶಕಗಳ ಹಿಂದೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ನೀಡದಿದ್ದ ಮತ್ತು ಪರಿಹಾರದ ನಿವೇಶನಗಳು ಹಂಚಿಕೆ ಆಗದೇ ಇರುವ ಪ್ರಕರಣಗಳನ್ನೇ ದಿನೇಶ್ ಅವರು ಇಂತಹ ಅಕ್ರಮಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ಇ.ಡಿ ಪತ್ತೆ ಹಚ್ಚಿದೆ. ಅವರ ಅವಧಿಯಲ್ಲಿ ಈ ರೀತಿ 98 ನಿವೇಶನಗಳು ಹಂಚಿಕೆಯಾಗಿವೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಇ.ಡಿಯು, ಈಚೆಗೆ 160 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ಅವರಿಗೆ ಇದೇ ರೀತಿ 48 ನಿವೇಶನಗಳನ್ನು ದಿನೇಶ್ ಕುಮಾರ್ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದ ಸದಸ್ಯರಿಗೆಂದು ನಿವೇಶನ ಹಂಚಿಕೆ ಮಾಡಿ ಅವುಗಳನ್ನು ಮಂಜುನಾಥ್‌ಗೆ ಮಾರಾಟ ಮಾಡಿದ್ದಾರೆ ಎಂದು ಇ.ಡಿ ಹೇಳಿದೆ.





