‘ಮ್ಯೂಲ್ ಅಕೌಂಟ್’ಗಳನ್ನು ಬಳಸಿಕೊಂಡು ಸೈಬರ್ ವಂಚನೆ ಎಸಗಿದ್ದ ಪ್ರಕರಣವನ್ನು ‘ಸಿಐಡಿ’ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಅಧಿಕಾರಿಗಳು ದಾಳಿ ನಡೆಸಿದ್ದು, 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮನಿ ಲಾಂಡರಿಂಗ್, ಆನ್‌ಲೈನ್ ಸ್ಕ್ಯಾಮ್ ಹಾಗೂ ಹವಾಲಾ ವಹಿವಾಟುಗಳನ್ನು ನಡೆಸಲು ಅಮಾಯಕ ಜನಸಾಮಾನ್ಯರ ಹೆಸರಿನಲ್ಲಿ ‘ಮ್ಯೂಲ್ ಅಕೌಂಟ್’ ಸೃಷ್ಟಿಸಿ, ಅವುಗಳನ್ನು ವಂಚನೆ ಮತ್ತು ಇತರ ಸೈಬರ್ ಅಪರಾಧಗಳನ್ನು ಎಸಗಲಾಗುತ್ತದೆ. ಇಂತಹ ಅಪರಾಧಗಳನ್ನು ಎಸಗುತ್ತಿದ್ದ ಜಾಲವನ್ನು ಸಿಐಡಿ ಪೊಲೀಸರು ಭೇದಿಸಿದ್ದಾರೆ.
ಬೆಂಗಳೂರು, ಚಿತ್ರದುರ್ಗ, ಗದಗ, ಕೊಪ್ಪಳ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ನೂರಾರು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದ ಸಿಐಡಿ ಅಧಿಕಾರಿಗಳು, ಅಕ್ರಮಕ್ಕಾಗಿ ಬಳಸಲಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನ ಪತ್ತೆ ಹಚ್ಚಿದ್ದಾರೆ. ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದ್ದಾರೆ.
ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ, ಸೈಬರ್ ಅಪರಾಧಗಳಿಂದ ಬಂದ ಹಣವನ್ನು ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು. ಆದರೆ, ತಮ್ಮ ಖಾತೆಗಳ ವಿವರ ನೀಡುತ್ತಿದ್ದ ಅಮಾಯಕರಿಗೆ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿದೆ.
ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಮಾಯಕರ ಬ್ಯಾಂಕ್ ಖಾತೆಗಳಿಗೆ ಹಣ ನೀಡಿ, ಅವರಿಗೆ ತಿಳಿಯದೆ ಸೈಬರ್ ವಂಚಕರಿಗೆ ನೀಡುತ್ತಿರುವ ಬಗ್ಗೆ ಮುಂದಿನ ದಿನಗಳಲ್ಲಿ ಬಿಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.





