ಆಗುಂಬೆಯ ‘ಕಾಳಿಂಗ ಮನೆ/ ಕಾಳಿಂಗ ಫೌಂಡೇಷನ್’ ಮಾಡಿರುವ ಆರೋಪವನ್ನು ಪರಿಸರ ಸಂರಕ್ಷಕರು ತಳ್ಳಿಹಾಕಿದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್ನರ ಮೇಲೆ ಧಾರ್ಮಿಕ ಆಯಾಮದ ಆರೋಪಗಳನ್ನು ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಳಿಂಗ ಮನೆ ಮೇಲೆ ಹಲವು ಆರೋಪಗಳು ಬಂದಿದ್ದವು. ಅಕ್ರಮವಾಗಿ ಕಾಳಿಂಗ ಸರ್ಪ ಸೆರೆಹಿಡಿಯುವುದು, ಅದರ ಸಾಮೂಹಿಕ ಫೋಟೋ ಶೂಟ್, ಅನುಮತಿ ಇಲ್ಲದೆ ಸಂಶೋಧನೆ, ಸಂರಕ್ಷಣೆ ಅಧ್ಯಯನದ ಹೆಸರಿನಲ್ಲಿ ರೆಸಾರ್ಟ್ ನಡೆಸುತ್ತಿರುವುದು, ಅಕ್ರಮ ಕಾಡು ಪ್ರವೇಶ, ಮೋಜು –ಮಸ್ತಿ ಕಾಳಿಂಗ ಸರ್ಪಗಳನ್ನು ವಾಣಿಜ್ಯಕ ಚಟುವಟಿಕೆಗಳಿಗೆ ಬಳಸುತ್ತಿರುವುದು ಮೊದಲಾದ ಹತ್ತು ಹಲವು ಗಂಭೀರ ಆರೋಪಗಳು ಬಂದು, ಅರಣ್ಯ ಇಲಾಖೆಗೆ ಸರಣಿ ದೂರುಗಳು ಸಲ್ಲಿಕೆಯಾಗಿದ್ದವು. ಅದರ ಅನ್ವಯ ತನಿಖೆ ನಡೆಯುತ್ತಿದೆ.
ಇದಕ್ಕೆ ಸ್ಪಷ್ಟನೆ ನೀಡುವಾಗ ಕಾಳಿಂಗ ಫೌಂಡೇಷನ್, ಧಾರ್ಮಿಕ ಆಯಾಮವನ್ನು ಎಳೆದು ತಂದಿದೆ. “ಮಲೆನಾಡಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯರೂ ಇದ್ದಾರೆ. ಅವರು ಹಾವಿನೊಂದಿಗೆ ಯಾವುದೇ ರೀತಿಯ ಧಾರ್ಮಿಕ ನಂಬಿಕೆಯನ್ನಾಗಲಿ, ಪೂಜನೀಯ ಭಾವನೆಯನ್ನಾಗಲೀ ಹೊಂದಿಲ್ಲ. ತಮಗೆ ವಿಪತ್ತು ಬಂದಾಗ ಯಾವುದೇ ಹಾವನ್ನಾದರೂ ಕೊಲ್ಲಲು ಅವರು ಸಿದ್ಧರಾಗುತ್ತಾರೆ” ಎಂದಿತ್ತು. “ಈ ಆರೋಪ ಸುಳ್ಳು ಮತ್ತು ತೀವ್ರ ಖಂಡನೀಯ” ಎಂದು ಪರಿಸರ ಸಂರಕ್ಷಕರು ತಿಳಿಸಿದ್ದಾರೆ.
ಕಾಳಿಂಗ ಫೌಂಡೇಶನ್ ನ ಸಂಶೋಧಕರಾದ ಗೌರಿಶಂಕರ್ ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಬಗೆಗೆ ಅಧ್ಯಯನ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಸಂಶೋಧನಾ ಪ್ರಬಂಧದಲ್ಲಿ “ನಮಗೆ ಕಾಳಿಂಗ ಸರ್ಪ ರಕ್ಷಣೆಗೆ ಕರೆಬಂದ 83.8% ಸಂದರ್ಭಗಳಲ್ಲಿ ಜನರು ಹಾವನ್ನು ಕೊಲ್ಲಲು ಬಯಸಿದ್ದರು” ಎಂದು ಸುಳ್ಳು ಮಾಹಿತಿ ನೀಡಿದ್ದರು. ಮಲೆನಾಡಿನ ಜನರಿಗೆ ಕಾಳಿಂಗ ಸರ್ಪಗಳ ಬಗೆಗೆ ಭಯ, ಭಕ್ತಿ ಇದ್ದು ಪೂಜಿಸುವ ಸಂಸ್ಕೃತಿ ಇದೆ. ಯಾರೂ ಕೂಡಾ ಕಾಳಿಂಗ ಸರ್ಪಗಳನ್ನು ಕೊಲ್ಲುವುದಿಲ್ಲ. ಹೀಗಿರುವಾಗ ಇವರ ಸುಳ್ಳು ಸಂಶೋಧನೆಗೆ ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸುಳ್ಳಗಳ ಸಮರ್ಥನೆಗೆ ಮತ್ತೆ ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಾ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರನ್ನು ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ ಎಂದು ಮಲೆನಾಡು ಭಾಗದ ಪರಿಸರ ಸಂರಕ್ಷಕರು ಟೀಕಿಸಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು
ಇಲ್ಲಿಯವರೆಗೆ ಮಲೆನಾಡಿನ ಯಾವುದೇ ಜನರು ಕಾಳಿಂಗ ಸರ್ಪವನ್ನು ಕೊಂದ ಒಂದೇ ಒಂದು ಉದಾಹರಣೆ ಇಲ್ಲ. ಹೀಗಿರುವಾಗ ‘ಮಲೆನಾಡಿನ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಕಾಳಿಂಗ ಸರ್ಪಗಳನ್ನು ಕೊಲ್ಲಲು ಸಿದ್ಧರಾಗುತ್ತಾರೆ’ ಎಂಬರ್ಥದಲ್ಲಿ ಮಾತನಾಡಿರುವುದು ತೀವ್ರ ಖಂಡನೀಯ. ಇತರೆ ಸಮುದಾಯಗಳಂತೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಕೂಡಾ ಹಲವಾರು ವರ್ಷಗಳಿಂದ ಮಲೆನಾಡಿನ ಪ್ರಕೃತಿಯೊಂದಿಗೆ ಸಹಜೀವನ ನಡೆಸುತ್ತಾ ಬಂದಿದ್ದಾರೆ. ಹಾವನ್ನು ಪೂಜಿಸುವ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಿದ್ದಾರೆ. ವಾಸ್ತವ ಹೀಗಿರುವಾಗ ಯಾವುದೇ ದಾಖಲೆಗಳಿಲ್ಲದೆ ವೈಯಕ್ತಿಕ ಸ್ವಾರ್ಥಕ್ಕಾಗಿ ಸಮುದಾಯಗಳ ಮೇಲೆ ಗೂಬೆ ಕೂರಿಸುವುದು ಹೇಯಕರ. ಧಾರ್ಮಿಕ ದ್ವೇಷ ಬಿತ್ತುವ ಪ್ರಯತ್ನ ಇಲ್ಲಿ ಕಾಣುತ್ತಿದೆ. ಆ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ನೋಡಲಾಗುತ್ತಿದೆ. ಸರ್ಕಾರ ಈ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಶೋಧನೆಯ ಮುಖವಾಡದಲ್ಲಿ ಬಹಿರಂಗವಾಗಿಯೇ ವಾಣಿಜ್ಯಕ ಚಟುವಟಿಕೆಗಳು, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿರುವ ‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್’ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಧ್ಯಯನದ ಹೆಸರಿನಲ್ಲಿ ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಿರುವ ಫೌಂಡೇಷನ್ಗೆ ಮುಂದೆ ಯಾವುದೇ ಸಂಶೋಧನೆಗೆ ಅರಣ್ಯ ಇಲಾಖೆ ಅವಕಾಶ ಕೊಡಬಾರದು. ಅವರ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಬೇಕು. ಈ ಎಲ್ಲದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.





