ನಂದಿನಿ ಬ್ರಾಂಡ್‌ನ ಕೆಲವು ಉತ್ಪನ್ನಗಳ ಸೇವನೆ ಅಸುರಕ್ಷಿತ, ಆರೋಗ್ಯಕ್ಕೆ ಹಾನಿ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳು ವೈರಲ್ ಆಗುತ್ತಿವೆ. ನಂದಿನ ಉತ್ಪನ್ನಗಳ ಕುರಿತು ವಂದತಿಗಳು ಹರಿದಾಡುತ್ತಿವೆ. ಈ ಊಹಾಪೋಹಗಳ ಕುರಿತು ಸ್ಪಷ್ಟನೆ ನೀಡಿರುವ ಕೆಎಂಎಫ್, “ವದಂತಿಗಳು, ಸುಳ್ಳು ಪ್ರಚಾರಗಳು ಆಧಾರರಹಿತ ಆರೋಪಗಳಾಗಿವೆ. ನಂದಿನಿ ಉತ್ಪನ್ನಗಳು ಆರೋಗ್ಯಕರವಾಗಿವೆ. ಬಾಲ್ಯದಿಂದಲೇ ನಂದಿನಿ ಬ್ರಾಂಡ್‌ನೊಂದಿಗೆ ಬೆಳೆದಿರುವ ಕೋಟ್ಯಾಂತರ ಗ್ರಾಹಕರು ಸುಳ್ಳು ಆರೋಪಗಳಿಗೆ ಕಿವಿಗೊಡಬಾರದು” ಎಂದು ಹೇಳಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಎಂಎಫ್, “ಕರ್ನಾಟಕ ಹಾಲು ಮಹಾಮಂಡಳಿಯು (KMF) ಕಾನೂನುಬದ್ಧ ಸಂಸ್ಥೆಗಳು ಹಾಗೂ ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಎಲ್ಲ ಸುರಕ್ಷತಾ ಮಾನದಂಡಗಳು ಮತ್ತು ಅನುಮೋದಿತ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ. ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳೆಲ್ಲವೂ ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿದ್ದು, ಗ್ರಾಹಕರು ಆತಂಕಪಡಬೇಕಾಗಿಲ್ಲವೆಂದು ಕರ್ನಾಟಕ ಹಾಲು ಮಹಾಮಂಡಳಿಯು ಭರವಸೆಯನ್ನು ನೀಡುತ್ತದೆ” ಎಂದು ಹೇಳಿದೆ.
“ಕರ್ನಾಟಕ ಹಾಲು ಮಹಾಮಂಡಳಿಯು ಆಧಾರರಹಿತ, ತಪ್ಪು ದಾರಿಗೆಳೆಯುವ ಮತ್ತು ಬ್ಯಾಂಡ್‌ನ ಮಾನಹಾನಿಕರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತಿದ್ದು, ಇಂತಹ ದುರುದ್ದೇಶಪೂರಿತ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬದ್ಧವಾಗಿದೆ” ಎಂದು ತಿಳಿಸಿದೆ.




